ಉಡುಪಿ: ವಿಪರೀತ ಸೆಕೆಯಿಂದ ತತ್ತರಿಸಿದ್ದ ಕರಾವಳಿಯ ಜನತೆಗೆ ವರ್ಷಾಧಾರೆ ತಂಪೆರೆದಿದೆ.
ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಮಲ್ಪೆ, ಪಡುಬಿದ್ರೆ, ಕಾಪು, ಶಿರ್ವ, ಕಾರ್ಕಳ, ಬೈಲೂರು, ಕುಂದಾಪುರ, ಬ್ರಹ್ಮಾವರ, ಬೈಂದೂರು ಮೊದಲಾದ ಭಾಗದಲ್ಲಿ ಶನಿವಾರ ಮುಂಜಾನೆ 2 ಗಂಟೆಗೂ ಅಧಿಕ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಾಳೆ ಸುರಿದಿದೆ.
ಉಡುಪಿಯ ಕೆಲ ಭಾಗಗಳಲ್ಲಿ ಬೆಳಿಗ್ಗೆ 7 ಗಂಟೆಯ ನಂತರವೂ ಮಳೆ ಸುರಿದ ದೃಶ್ಯ ಸಾಮಾನ್ಯವಾಗಿತ್ತು.
ಗಾಳಿ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಪರಿಣಾಮ ರಾತ್ರಿ ಸ್ಥಗಿತಗೊಂಡಿದ್ದ ವಿದ್ಯುತ್ ಪೂರೈಕೆ ಬೆಳಗ್ಗೆವರೆಗೂ ವ್ಯತ್ಯಯವಾಗಿತ್ತು. ಈಗಾಗಲೆ ನೀರಿನ ಸಂಕಷ್ಟದಲ್ಲಿದ್ದ ಹಲವು ಗ್ರಾಮ, ನಗರ ಭಾಗಕ್ಕೆ ಈ ಮುಂಗಾರು ಪೂರ್ವ ಮಳೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆಯ ವೇಳೆ ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ.
ಮಂಗಳೂರಿನ ಹೊರ ವಲಯ, ಸುರತ್ಕಲ್, ಹಳೆಯಂಗಡಿ ಪರಿಸರದಲ್ಲಿ ಶುಕ್ರವಾರ ಮುಂಜಾನೆ ಮತ್ತು ರಾತ್ರಿ ವೇಳೆ ಸಾಧಾರಣ ಮಳೆ ಸುರಿದಿತ್ತು.