ದೇವದುರ್ಗ: ಕಳೆದ ವಾರದಿಂದ ನಿರಂತರ ಸುರಿದ ಮಳೆಯಿಂದ ತಾಲೂಕಿನಾದ್ಯಂತ ಬೆಳೆಗಳಿಗೆ ತೇವಾಂಶ ಹೆಚ್ಚಾಗಿದ್ದು ಬೆಳೆಗಳೆಲ್ಲ ಹಳದಿ ವರ್ಣಕ್ಕೆ ತಿರುಗಿವೆ.
ಹೀಗಾಗಿ ರೈತರಿಗೆ ಬೆಳೆನಷ್ಟ ಆತಂಕ ಶುರುವಾಗಿದೆ. ಹತ್ತಿ, ಮೆಣಸಿನಕಾಯಿ, ತೊಗರಿ ಹೆಚ್ಚು ತೇವಾಂಶವಾಗಿ ಕೊಳೆಯುತ್ತಿರುವ ಹಿನ್ನೆಲೆ ಬೆಳೆಗಳ ರಕ್ಷಣೆಗೆ ರೈತರು ಹರ ಸಾಹಸ ಪಡುತ್ತಿದ್ದಾರೆ. ಹತ್ತಿ ಸದ್ಯ ಹೂವು ಹಿಡಿಯುವ ಹಂತದಲ್ಲಿರುವಾಗಲೇ ಕಾಯಿಗಳು ಉದುರುತ್ತಿವೆ. ಗಿಡಗಳು ಕಂದು ಬಣ್ಣಕ್ಕೆ ತಿರುಗುತ್ತಿದ್ದು, ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬಹುತೇಕ ಬೆಳೆಗಳೆಲ್ಲ ಹಾಳಾಗುವ ಭೀತಿ ರೈತರನ್ನು ಮತ್ತಷ್ಟು ಚಿಂತೆಗೆ ದೂಡಿದೆ.
ನಿರಂತರ ಸುರಿದ ಮಳೆಯಿಂದ ಹೊಲದಲ್ಲಿ ಎಲ್ಲೆಂದರಲ್ಲಿ ಬೆಳೆಗಳ ಸಾಲುಗಳ ನಡುವೆ ನೀರು ನಿಲ್ಲುತ್ತಿದೆ. ಎರಡು ತಿಂಗಳ ಕಾಲ ಬೆಳೆ ಉತ್ತಮವಾಗಿ ಕಾಪಾಡಿಕೊಂಡು ಸಾವಿರಾರೂ ರೂ. ಖರ್ಚು ಮಾಡಿದ್ದರೂ ರೈತರಿಗೆ ಈಗ ತೇವಾಂಶದಿಂದ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ತಾಲೂಕಿನಲ್ಲಿ ಶೇ.80 ನೀರಾವರಿ ಸೌಲಭ್ಯವಿದೆ. ನೀರಾವರಿ ಇಲ್ಲದ ಒಣಪ್ರದೇಶದಲ್ಲಿ ನೂರಾರು ರೈತರು ಮಳೆ ನಂಬಿ ಕೃಷಿ ಚಟುವಟಿಕೆ ಮಾಡಿದ್ದಾರೆ. ಪ್ರತಿ ವರ್ಷ ರೈತರು ನಷ್ಟದತ್ತಲೇ ಸಾಗಿದ್ದು, ಈ ವರ್ಷವೂ ಕೂಡ ಮತ್ತೆ ಆತಂಕ ಶುರುವಾಗಿದೆ.
ಬಿತ್ತನೆ ಎಷ್ಟು?: ಪಟ್ಟಣ ಸೇರಿ ತಾಲೂಕಿನಾದ್ಯಂತ ಹತ್ತಿ, ಮೆಣಸಿನಕಾಯಿ, ತೊಗರಿ ಸೇರಿ ಇತರೆ ಬೆಳೆ ಬೆಳೆದಿದ್ದಾರೆ. ನೀರಾವರಿ 1448 ಹಾಗೂ ಖಷ್ಕಿ 20.296 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. 182 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, ಹತ್ತಿ (ನೀರಾವರಿ) 34.715, ಖಷ್ಕಿಯಲ್ಲಿ 15.579 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅಲ್ಲದೇ ಸುಮಾರು 30 ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ನಾಟಿ ಮಾಡಲಾಗಿದೆ. ಜಾಲಹಳ್ಳಿ, ಅರಕೇರಾ, ಗಬ್ಬೂರು, ಗಲಗ ಸೇರಿ ಇತರೆ ಹೋಬಳಿಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ತೇವಾಂಶ ಹೆಚ್ಚಾಗಿ ಬೆಳೆ ರಕ್ಷಣೆಗೆ ರೈತರು ದುಪ್ಪಟ್ಟು ವೆಚ್ಚದಲ್ಲಿ ಔಷಧ, ಗೊಬ್ಬರ ಹಾಕುವ ಸ್ಥಿತಿ ಬಂದೊದಗಿದೆ.
ಜಾಗೃತಿ ಕೊರತೆ: ರೈತರಿಗೆ ಬೆಳೆಗಳ ಸಂರಕ್ಷಣೆ ಕುರಿತು ಮಾಹಿತಿ ಲಭ್ಯವಿಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಔಷಧ ಹಾಕುವ ಹಿನ್ನೆಲೆ ಪ್ರತಿವರ್ಷ ಬೆಳೆ ನಷ್ಟ ಅನುಭವಿಸಬೇಕಾಗಿದೆ. ಮುಂಗಾರು-ಹಿಂಗಾರಿನಲ್ಲಿ ಕೃಷಿ ಚಟುವಟಿಕೆ ಹಾಗೂ ಪದ್ಧತಿಯಲ್ಲಿ ಜಾಗೃತಿ ಮೂಡಿಸಬೇಕಾದ ಅಧಿ ಕಾರಿಗಳು ಹಿಂದೇಟು ಹಾಕುವುದರಿಂದ ಅಂಗಡಿ ಮಾಲೀಕರ ಮಾತಿನಂತೆ ರೈತರು ಬೆಳೆ ಬೆಳೆಯುತ್ತಿದ್ದಾರೆ ಎನ್ನುವ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸಾಲದ ರೂಪದಲ್ಲಿ ಅಂಗಡಿ ಮಾಲೀಕರು ನೀಡುವ ಗೊಬ್ಬರ, ಕ್ರಿಮಿನಾಶಕಗಳಿಗೆ ರೈತರಿಗೆ ಅಂಗಡಿ ಮಾಲೀಕರೇ ಅಧಿಕಾರಿಗಳಂತೆ ಮಾಹಿತಿ ನೀಡುತ್ತಿದ್ದಾರೆ. ಬಿತ್ತನೆ ಆರಂಭದಲ್ಲೇ ರೈತರ ಸಭೆ ಕರೆದು ಯಾವ ಯಾವ ಬೆಳೆಗೆ ಎಷ್ಟೆಷ್ಟು ರಸಗೊಬ್ಬರ, ಔಷಧ ಹಾಕುವಂತೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಅತಿಯಾದ ಮಳೆಯಾಗುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ಬೆಳೆಗಳಿಗೆ ಹಾನಿಯಾಗಲಿದೆ. ಹತ್ತಿ, ಮೆಣಸಿನಕಾಯಿ,ತೊಗರಿ, ಸೂರ್ಯಕಾಂತಿ ಬೆಳೆದಿದ್ದು ಹಾನಿ ಸಂಭವಿಸುತ್ತಿದೆ. ಅತಿವೃಷ್ಟಿಯಂದು ತಾಲೂಕು ಆಡಳಿತ ಘೋಷಿಸಿದರೆ ಮಾತ್ರ ಸಮೀಕ್ಷೆ ನಡೆಸಿ ಪರಿಹಾರ ನೀಡಬಹುದು. ಇಲ್ಲದಿದ್ರೆ ಪರಿಹಾರ ಬರಲ್ಲ. ಡಾ
| ಎಸ್. ಪ್ರಿಯಾಂಕ್, ಕೃಷಿ ಸಹಾಯಕ ನಿರ್ದೇಶಕಿ
ಸತತ ಬೆಳೆಯಿಂದಾಗಿ ರೈತರು ಬೆಳೆನಷ್ಟ ಅನುಭವಿಸಬೇಕಾಗಿದೆ. ಹತ್ತಿ ಕಾಯಿ ಉದುರುತ್ತಿದ್ದು, ತಾಲೂಕಾಡಳಿತ ಮತ್ತು ಕೃಷಿ ಅಧಿಕಾರಿಗಳು ಬೆಳೆಗಳ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು.
ಶಬ್ಬೀರ ಜಾಲಹಳ್ಳಿ, ಕೆಪಿಆರ್‌ಎಸ್ ಉಪಾಧ್ಯಕ್ಷ
ನಾಗರಾಜ ತೇಲ್ಕರ್