ಬೆಳಗಾವಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆಯಾಗಿದ್ದರಿಂದ ನದಿಗಳ ಅಪಾಯಮಟ್ಟ ಮತ್ತಷ್ಟು ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಕೃಷ್ಣಾ ಕೊಳ್ಳದ ಪ್ರದೇಶದಲ್ಲಿ ಬರುವ 20 ಜಲಾಶಯಗಳ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗುತ್ತಿದ್ದು ಜಲಾಶಯಗಳ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ. ಇದರಿಂದಾಗಿ ಈ ಜಲಾಶಯಗಳಿಂದ ಕೃಷ್ಣಾ ನದಿಗೆ ಒಟ್ಟು 1.22 ಲಕ್ಷ ಕ್ಯೂಸೆಕ್ಸ್ ನೀರು ಬರುತ್ತಿದೆ.
ಕರ್ನಾಟಕದ ಪ್ರದೇಶಗಳಿಗೆ ಸಾಕಷ್ಟು ಆತಂಕ ಉಂಟುಮಾಡುವ ಕೊಯ್ನಾ ಜಲಾಶಯ ಪ್ರತಿಶತ 82 ರಷ್ಟು ಭರ್ತಿಯಾಗಿದೆ. ಜಲಾಶಯದಿಂದ ಈಗ ಕೃಷ್ಣಾ ನದಿಗೆ 48 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಅದೇರೀತಿ ವಾರಣಾ ಜಲಾಶಯ ಪ್ರತಿಶತ 93 ರಷ್ಟು ತುಂಬಿದ್ದು ಜಲಾಶಯದಿಂದ 19750 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ.
ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆ ಮುಂದುವರಿದಿದ್ದು ಘಟಪ್ರಭಾ ನದಿಯ ಒಳಹರಿವು ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ. ಇದರಿಂದ ಹಿಡಕಲ್ ಜಲಾಶಯಕ್ಕೆ 95 ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿದ್ದು ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ. ಜಲಾಶಯ ಈಗಾಗಲೇ ಪ್ರತಿಶತ 88 ರಷ್ಟು ಭರ್ತಿಯಾಗಿದ್ದು ನದಿ ಪಾತ್ರದ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ಮಲೆನಾಡಿನಲ್ಲಿ ಮುಂದುವರೆದ ಮಳೆ: ಕುಸಿದು ಬಿದ್ದ ಮನೆ, ನಾಟಿ ಮಾಡಿದ ಗದ್ದೆಗಳು ಜಲಾವೃತ
ಖಾನಾಪುರ ತಾಲೂಕಿನಲ್ಲಿ ಸಾಕಷ್ಟು ಅನಾಹುತಗಳಿಗೆ ಕಾರಣವಾದ ಮಲಪ್ರಭಾ ಮತ್ತಷ್ಟು ಉಕ್ಕಿ ಹರಿಯುತ್ತಿದೆ. ಇದರಿಂದ ಮಲಪ್ರಭಾ ಜಲಾಶಯ ಬಹುತೇಕ ಭರ್ತಿಯಾಗುತ್ತಿದ್ದು ಜಲಾಶಯಕ್ಕೆ 70351 ಕ್ಯೂಸೆಕ್ಸ ನೀರು ಬರುತ್ತಿದೆ. ಜಲಾಶಯದಿಂದ ನದಿಗೆ 15 ಸಾವಿರ ಕ್ಯೂಸೆಕ್ಸ ನೀರು ಬಿಡಲಾಗುತ್ತಿದ್ದು ನದಿ ಪಾತ್ರದ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಆತಂಕ ಉಂಟಾಗಿದೆ.
ಈ ಮಧ್ಯೆ ಜಿಲ್ಲೆಯ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯ ಅವಲೋಕನ ಮಾಡಲು ನಾಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.