Advertisement

ಕೊಚ್ಚಿ ಹೋಗುತ್ತಿರುವ ಪರ್ಯಾಯ ರಸ್ತೆ

03:15 AM Jun 12, 2018 | Team Udayavani |

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಬ್ಲಿಮೊಗರು ಗ್ರಾಮದ ಅಡು ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ಮುನ್ನೂರು – ಅಂಬ್ಲಿಮೊಗರು ಸಂಪರ್ಕ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪರ್ಯಾಯ ರಸ್ತೆ ಈಗಾಗಲೇ ಮುಳುಗಡೆಯಾಗಿದೆ. ಸಂಚಾರ ಸ್ಥಗಿತಗೊಳ್ಳುವ ಭೀತಿಯಲ್ಲಿ ಸ್ಥಳೀಯ ಜನರಿದ್ದಾರೆ.

Advertisement

ಅಂಬ್ಲಿಮೊಗರು ಸಹಿತ ಸುತ್ತಮುತ್ತಲಿನ ಪ್ರದೇಶದಿಂದ ಮುನ್ನೂರು ಸಂಪರ್ಕಿಸುವ ಏಕೈಕ ಸಂಪರ್ಕ ಸೇತುವೆ ಇದಾಗಿದ್ದು, ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಕೆಲ ದಿನಗಳ ಹಿಂದೆ ಸೇತುವೆ ಅಗಲೀಕರಣ ಕಾಮಗಾರಿ ಪ್ರಾರಂಭಗೊಂಡಿತ್ತು. ಇಲ್ಲಿ ತಗ್ಗು ಪ್ರದೇಶಗಳಿರುವುದರಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಇವು ಜಲಾವೃತಗೊಂಡಿವೆೆ. ಪರ್ಯಾಯ ರಸ್ತೆಯ ಮೂಲಕ ಕೃತಕ ನೆರೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪೂರ್ಣ ನೀರು ತುಂಬಿ ಹರಿಯುತ್ತಿದ್ದು ಸಂಚಾರಕ್ಕೆ ತಡೆಯಾಗಿದೆ.

ಪರದಾಡುತ್ತಿರುವ ಚಾಲಕರು
ಪರ್ಯಾಯ ರಸ್ತೆಯಲ್ಲಿ ಘನ ವಾಹನಗಳು ಶ್ರಮಪಟ್ಟು ಸಂಚರಿಸಿದರೆ, ದ್ವಿಚಕ್ರ ವಾಹನ ಚಾಲಕರಿಗೆ ಸಂಚರಿಸುವುದೇ ದುಸ್ತರವಾಗಿದೆ. ರಭಸವಾಗಿ ನೀರು ಮಾರ್ಗದಲ್ಲಿ ಹರಿಯುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ವಾಹನವನ್ನು ಮುಂದಕ್ಕೆ ಕೊಂಡೊಯ್ಯಲಾಗದೆ ಪರದಾಡುತ್ತಿದ್ದಾರೆ. ಪರ್ಯಾಯ ರಸ್ತೆಯು ಪ್ರಾರಂಭದಲ್ಲಿ ಕೆಸರು ತುಂಬಿ ಸಂಚಾರಕ್ಕೆ ಅಯೋಗ್ಯವಾಗಿತ್ತು. ಸ್ಥಳೀಯರ ಪ್ರತಿಭಟನೆಯ ಬಳಿಕ ಜಲ್ಲಿ ಹುಡಿ ಹಾಕಿ ತಾತ್ಕಾಲಿಕವಾಗಿ ರಸ್ತೆಯನ್ನು ರಿಪೇರಿ ಮಾಡಲಾಗಿತ್ತು. ಆದರೆ ಈಗ ನೀರು, ಕೆಸರು ತುಂಬಿ ಸಂಚಾರಕ್ಕೆ ಅಯೋಗ್ಯವಾಗಿದೆ. ಸೋಮವಾರ ಪರ್ಯಾಯ ರಸ್ತೆಗೆ ಕೆಂಪು ಕಲ್ಲು ಹಾಕುವ ಕಾರ್ಯ ನಡೆದಿದೆ. ಆದರೂ ಸಂಚಾರಕ್ಕೆ ತಡೆಯಾಗುವ ಭೀತಿಯಲ್ಲಿ ಜನರಿದ್ದಾರೆ.

ನದಿ ನೀರಿನ ಭಯ
ಒಂದು ವಾರದಿಂದ ಸುರಿದ ಮಳೆಗೆ ಪರ್ಯಾಯ ರಸ್ತೆಗೆ ನೀರು ಬಂದಿರಲಿಲ್ಲ. ಮಳೆಯಿಂದ ಪಕ್ಕದ ತಗ್ಗು ಪ್ರದೇಶಗಳು ಮುಳುಗಡೆಯಾದ ಬಳಿಕ ಸೇತುವೆ ಬಳಿ ನೀರು ಹೆಚ್ಚಾಗಿ ಪರ್ಯಾಯ ರಸ್ತೆ ಕೊಚ್ಚಿ ಹೋಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ವಿಳಂಬವಾಗಿ ಪ್ರಾರಂಭಿಸಿದ್ದು ಪ್ರಥಮ ಲೋಪವಾದರೆ, ಪರ್ಯಾಯ ರಸ್ತೆ ನಿರ್ಮಾಣ ಸಂದರ್ಭದಲ್ಲಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದಿರುವುದು ಸಮಸ್ಯೆಗೆ ಮತ್ತೂಂದು ಕಾರಣವಾಗಿದೆ.

ಬಸ್ಸು ಸಂಚಾರ ವ್ಯತ್ಯಯ
ಸೋಮವಾರ ಬೆಳಗ್ಗೆ ಕೃತಕ ನೆರೆಯಿಂದ ಸಂಚಾರವನ್ನು ರೆಂಜಾಡಿ ಮಾರ್ಗವಾಗಿ ಬದಲಾವಣೆ ಮಾಡಲಾಯಿತು. ಬಸ್ಸೊಂದು ಪರ್ಯಾಯ ರಸ್ತೆಯಲ್ಲಿ ಹೂತು ಹೋಗಿದ್ದರಿಂದ ಉಳಿದ ಬಸ್‌ ಗಳು ಸಂಚಾರ ಬದಲಾಯಿಸಿದ್ದು ಅಂಬ್ಲಿಮೊಗರು ಅಡು, ರಾಣಿಪುರ, ನಿವಾಸಿಗಳು ಪರದಾಡುವಂತಾಯಿತು.

Advertisement

ಇನ್ನೂ 10 ದಿನ ಬೇಕು
ನೂತನ ಸೇತುವೆಯ ಕಾಂಕ್ರೀಟ್‌ ಗಟ್ಟಿಯಾಗಲು ಇನ್ನೂ 10 ದಿನಗಳ ಆವಶ್ಯಕತೆಯಿದ್ದು, ಈ ಸಂದರ್ಭದಲ್ಲಿ ಸತತ ಮಳೆ ಸುರಿದರೆ ಸಂಚಾರ ಸ್ಥಗಿತಗೊಳ್ಳುವ ಭೀತಿಯಿದೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಸೇತುವೆ ಮೇಲೆ ದ್ವಿಚಕ್ರ ವಾಹನ ಸಂಚರಿಸಲು ಯತ್ನಿಸುತ್ತಿದ್ದು, ಇದರಿಂದ ಕಾಂಕ್ರೀಟ್‌ ಸೇತುವೆಗೆ ಹಾನಿಯಾಗುವ ಸಾಧ್ಯತೆ ಇದೆ.

ವಾರದೊಳಗೆ ಸಂಚಾರಕ್ಕೆ ಮುಕ್ತ
ಪರ್ಯಾಯ ರಸ್ತೆ ಪುನರ್‌ ನಿರ್ಮಾಣ ಮಾಡಿದ್ದು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೇತುವೆ ಕಾಮಗಾರಿಯನ್ನು ಐದು ದಿನಗಳೊಳಗೆ ಮುಗಿಸಲು ನಿರ್ದೇಶನ ನೀಡಿದ್ದು ವಾರದೊಳಗೆ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು.
– ರಫೀಕ್‌, ಗ್ರಾ.ಪಂ. ಅಧ್ಯಕ್ಷ , ಅಂಬ್ಲಿಮೊಗರು

–ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next