Advertisement

ಮಳೆ ಹಾನಿ ನಷ್ಟ ಪರಿಶೀಲನೆ: ಕರಾವಳಿಗೆ ಕೇಂದ್ರ ತಂಡ

12:55 PM Sep 13, 2018 | Team Udayavani |

ಉಡುಪಿ: ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳ ತಂಡವು ಬುಧವಾರ ಜಿಲ್ಲೆಗೆ ಆಗಮಿಸಿ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿತು. ಕಾರ್ಕಳ, ಕಾಪು ತಾಲೂಕುಗಳಲ್ಲಿ ಹಾನಿಗೀಡಾದ ರಸ್ತೆ, ಬೆಳೆಹಾನಿ ಕುರಿತು ಮಾಹಿತಿ ಸಂಗ್ರಹಿಸಿತು.

Advertisement

ಕಾರ್ಕಳ ತಾಲೂಕಿನ ಕುಕ್ಕುಂದೂರು ಜಯಂತಿನಗರ ಶಾಲೆ, ಕಾರ್ಕಳ- ಉಡುಪಿ ರಸ್ತೆ, ಕೊಳೆರೋಗದಿಂದ ಹಾನಿಗೀಡಾದ ಮೀಯಾರು ಗ್ರಾಮದ ಅಡಿಕೆ ತೋಟ, ಹೊಸ್ಮಾರು ಈದು ಸೇತುವೆ, ರಸ್ತೆ, ನೂರಾಲ್‌ಬೆಟ್ಟು ಕಂಪೆಟ್ಟುವಿನ ಸೇತುವೆ, ಕೊಚ್ಚಿ ಹೋದ ಸಂಪರ್ಕ ರಸ್ತೆ, ಹಾನಿಗೊಳಗಾದ ಕಾಲು ಸಂಕ ವೀಕ್ಷಿಸಿದರು. ಅಡಿಕೆ ಬೆಳೆಗಾರರ ಜತೆ ಮಾತುಕತೆ ನಡೆಸಿದರು.

ಶಿರ್ವ ಸಮೀಪದ ಕಳತ್ತೂರು ಗುರ್ಮೆಗೆ ಭೇಟಿ ನೀಡಿ ಸೇತುವೆ ಸಂಪರ್ಕ ರಸ್ತೆಯನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾರ್ಕಳ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದರು. ಉಪ ವಿಭಾಗಾಧಿಕಾರಿ ಭೂಬಾಲನ್‌, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕೆ ಉಪ ನಿರ್ದೇಶಕಿ ಭುವನೇಶ್ವರಿ, ಲೋಕೋಪ ಯೋಗಿ ಮತ್ತು ಪಂ.ರಾಜ್‌ ಎಂಜಿನಿಯರಿಂಗ್‌ ಇಲಾಖೆ ಅಧಿಕಾರಿಗಳು, ಕಾರ್ಕಳ ತಹಶೀಲ್ದಾರ್‌ ಮುಹಮ್ಮದ್‌ ಇಸಾಕ್‌, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬೋಟ್‌ಗಳಿಗೂ ಹಾನಿ
ಪ್ರಸಕ್ತ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 150 ಕೋಟಿ ರೂ.ಗಳಿಗೂ ಅಧಿಕ ಹಾನಿ ಅಂದಾಜಿಸಲಾಗಿದೆ. ರಸ್ತೆ ಸೇರಿದಂತೆ ಮೂಲಸೌಕರ್ಯ, ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಅಧಿಕ ಹಾನಿ ಉಂಟಾಗಿದೆ. ಮೀನುಗಾರರ ಬೋಟುಗಳು ಸಾಕಷ್ಟು ಸಂಖ್ಯೆಯಲ್ಲಿ ನಷ್ಟ ಅನುಭವಿಸಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಉಡುಪಿ ಜಿಲ್ಲೆಯಲ್ಲಿ 1,058 ಮನೆಗಳು ಹಾನಿಗೀಡಾಗಿ ಸುಮಾರು 10.06 ಕೋ.ರೂ. ನಷ್ಟ ಉಂಟಾಗಿದೆ ಎಂದು ತಿಳಿಸಿದರು. ಕೇಂದ್ರ ತಂಡದ ಅಧಿಕಾರಿಗಳು ಮೀನುಗಾರರ ಬೋಟುಗಳಿಗೆ ಕೇರಳದಲ್ಲಿ ಯಾವ ರೀತಿ ಪರಿಹಾರ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next