Advertisement

ಭಟ್ಕಳದಲ್ಲಿ ಮಳೆ ಹಾನಿ; ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ವೈದ್ಯ

10:40 PM Jul 06, 2023 | Team Udayavani |

ಭಟ್ಕಳ : ಕಳೆದ ಎರಡು ಮೂರು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಹಾನಿಯಾಗಿರುವ ಪ್ರದೇಶವನ್ನು ವೀಕ್ಷಿಸಿ ಅಧಿಕಾರಿಗಳ ಸಭೆ ನಡೆಸು ಆಗಮಿಸಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Advertisement

ಮೊದಲು ಮುಟ್ಟಳ್ಳಿಗೆ ತೆರಳಿ ಕಳೆದ ವರ್ಷ ಮಹಾಮಳೆಗೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು ಗುಡ್ಡದ ಸನಿಹದಲ್ಲಿರುವ ಮನೆಗಳ ಜನರಿಗೆ ಸೂಕ್ತ ಮುಂಜಾಗ್ರತೆ ವಹಿಸುವಂತೆ ಮತ್ತು ಮನೆಗಳನ್ನು ಸ್ಥಳಾಂತರ ಮಾಡುವಂತೆ ಸೂಚಿಸಿದರು. ಮುಖ್ಯ ಮಂತ್ರಿಗಳೇ ಸ್ವತಹ ಆಗಮಿಸಿದ್ದರೂ ಸಹ ಅಪಾಯದಲ್ಲಿರುವ ಮನೆಗಳವರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಅವರನ್ನು ಸ್ಥಳಾಂತರಿಸುವ ಮೊದಲು ಪ್ಯಾಕೇಜ್ ತಯಾರು ಮಾಡಲು ಹಾಗೂ ಮುಂಜಾಗ್ರತಾ ಕ್ರಮದ ಬಗ್ಗೆ ಅಂದಾಜು ಪತ್ರಿಕೆ ತಯಾರಿಸಿ ಕಳುಹಿಸಲು ಸೂಚಿಸಿದರು.

ನಂತರ ಮಣ್ಕುಳಿಯಲ್ಲಿ ಮಳೆ ನೀರು ನಿಲ್ಲುವ ಸ್ಥಳ ವೀಕ್ಷಿಸಿ ಸ್ಥಳೀಯರಿಂದ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಆ ನಂತರ ಸಂಶುದ್ದೀನ ವೃತ್ತ, ರಂಗೀಕಟ್ಟೆ, ಶಿರಾಲಿ ಹೆದ್ದಾರಿಯಲ್ಲಿನ ಅವ್ಯವಸ್ಥೆ ಪರಿಶೀಲಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸಿ ಡಾ. ನಯನಾ, ತಹಸೀಲ್ದಾರ್ ತಿಪ್ಪೇಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಮುಂತಾದವರಿದ್ದರು.

ಭಟ್ಕಳ ಸಂಶುದ್ದೀನ ವೃತ್ತ ಮತ್ತು ರಂಗಿಕಟ್ಟೆ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಜನರು ತೊಂದರೆ ಅನುಭವಿಸುತ್ತಿರುವುದಕ್ಕೆ ಐಆರ್‌ಬಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಚಿವ ಮಂಕಾಳ ವೈದ್ಯ ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೇ ಅಪೂರ್ಣ ರಸ್ತೆಯಾದರೂ ಟೋಲ್ ವಸೂಲಿ ಮಾಡುತ್ತಿದ್ದೀರಿ. ನಿಮ್ಮ ಟೋಲ್ ನಮ್ಮ ಜನರು ಬಂದ್ ಮಾಡುತ್ತಾರೆ ಎಂದು ಆಕ್ರೋಶಿತರಾದ ಸಚಿವರು ಜನತೆಗೆ ತೊಂದರೆ ಕೊಟ್ಟ ನಿಮ್ಮ ಮೇಲೆ ಏಕೆ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು ಎಂದೂ ಗುಡುಗಿದರು.

ರಂಗಿಕಟ್ಟೆಯಲ್ಲಿ ಹೆದ್ದಾರಿ ಅವ್ಯವಸ್ಥೆ ಪರಿಶೀಲಿಸುವ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಐಆರ್‌ಬಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಚತುಸ್ಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೇ, ಅಸಮರ್ಪಕ ಕಾಮಗಾರಿಯಿಂದ ಜನರು ಸಾಯುತ್ತಿದ್ದಾರೆ. ಪ್ರತಿನಿತ್ಯ ತೊಂದರೆಯನ್ನೂ ಅನುಭವಿಸುತ್ತಿದ್ದಾರೆ. ನಿಮಗೆ ಜನತೆಗೆ ತೊಂದರೆ ಆಗದಂತೆ ಕಾಮಗಾರಿ ಮಾಡಿ ಎಂದು ನಿಮಗೆ ಎಷ್ಟು ಬಾರಿ ಹೇಳಿದರು ಸುಧಾರಿಸುವಂತೆ ಕಾಣುತ್ತಿಲ್ಲ ಎಂದರಲ್ಲದೇ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಬಳಿ ಐಆರ್‌ಬಿಯವರ ಶಿರೂರು ಮತ್ತು ಹಳದೀಪುರದ ಟೋಲ್ ಬಂದ್ ಮಾಡಿಸಬೇಕು. ಇವರು ಕಾಮಗಾರಿ ಪೂರ್ಣಗೊಳಿಸದೇ ಟೋಲ್ ಹೇಗೆ ವಸೂಲಿ ಮಾಡುತ್ತಾರೆ? ಇವರಿಗೆ ಟೋಲ್ ವಸೂಲಿಗೆ ಅನುಮತಿ ನೀಡಿದ್ದು ಯಾರು? ಐಆರ್‌ಬಿ, ಹೆದ್ದಾರಿ ಪ್ರಾಧಿಕಾರ ಮತ್ತು ಕೆಲಸ ಮಾಡಿಸುವ ಇಂಜಿನಿಯರ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಖಡಕ್ ಆಗಿ ಸೂಚಿಸಿದರು.

Advertisement

ರಂಗಿನಕಟ್ಟೆ, ಸಂಶುದ್ದೀನ್ ವೃತ್ತದಲ್ಲಿ ಮಳೆಗಾಲದಲ್ಲಿ ನೀರು ತುಂಬುತ್ತದೆ ಎನ್ನುವುದು ಗೊತ್ತಿದ್ದರೂ ನಿಮಗೆ ಸರಿಪಡಿಸಲು ಆಗಲಿಲ್ಲವೇ? ಜನರು ಸಮಸ್ಯೆಯಲ್ಲಿದ್ದಾರೆ. ಅದರಲ್ಲಿ ನಿಮ್ಮ ಸಮಸ್ಯೆಯಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲಿ ನೀರು ನಿಲ್ಲುವ ಸಮಸ್ಯೆ ಬಗೆಹರಿಸಬೇಕು. ನಾಳೆಯಿಂದಲೇ ಈ ಕುರಿತು ನಿಮ್ಮ ಕೆಲಸ ಆರಂಭವಾಗಬೇಕು. ಇಲ್ಲದಿದ್ದಲ್ಲಿ ನಾನು ಸುಮ್ಮನಿರುವುದಿಲ್ಲ ಎಂದು ಐಆರ್‌ಬಿ ಮತ್ತು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು

Advertisement

Udayavani is now on Telegram. Click here to join our channel and stay updated with the latest news.

Next