Advertisement

Rain ;ಹಿಂಗಾರು ಮಳೆಗೆ ರಾಜ್ಯದ 1 ಲಕ್ಷ ಹೆಕ್ಟೇರ್‌ ಬೆಳೆ ನಾಶ

02:14 AM Oct 26, 2024 | Team Udayavani |

ಗಳೂರು/ದಾವಣಗೆರೆ:  ಹಿಂಗಾರು ಹಂಗಾಮಿನ ಅಕ್ಟೋಬರ್‌ ತಿಂಗಳಿನಲ್ಲಿಯೇ ಶೇ. 66ರಷ್ಟು ಅಧಿಕ ಮಳೆ ಸುರಿದ ಪರಿಣಾಮ ಅಂದಾಜು ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿ ಆಗಿದೆ. 3 ದಿನಗಳಲ್ಲಿ ಕೃಷಿ, ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಿದ್ದು, 15 ದಿನಗಳ ಒಳಗೆ ಫ‌ಲಾನುಭವಿ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಬೆಳೆ ನಷ್ಟ ಪರಿಹಾರ ನೀಡಲಾಗುವುದು ಎಂದು ಕೃಷಿ ಹಾಗೂ ಕಂದಾಯ ಸಚಿವರು ಹೇಳಿದ್ದಾರೆ.

Advertisement

ಈ ಸಂಬಂಧ ಪ್ರತ್ಯೇಕ ಕಡೆ ಮಾತನಾಡಿದ ಸಚಿವದ್ವಯರು, ರಾಜ್ಯದಲ್ಲಿ ಮಳೆ ಅವಾಂತರದಿಂದ ಕೃಷಿ ಜಮೀನಿನ ಮೇಲೆ ಆದ ಪರಿಣಾಮಗಳ ಬಗ್ಗೆ ವಿವರಣೆ ನೀಡಿದರು. ನಿಯಮಾನುಸಾರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದೂ ಭರವಸೆ ನೀಡಿದರು.

ಬೆಂಗಳೂರಿನ ಹೆಬ್ಬಾಳದ ಪಶು ಭವನ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯ ಬೀಜ ನಿಗಮದ 51ನೇ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯದಲ್ಲಿ 10 ದಿನಗಳಿಂದ ಸುರಿದ ಭಾರೀ ಮಳೆಗೆ ಅಂದಾಜು ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಈ ಕುರಿತು ವರದಿ ಪಡೆದು ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದ್ದು, ಈ ಬಾರಿ 82 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. 40 ಲಕ್ಷ ಹೆಕ್ಟೇರ್‌ ಕಟಾವು ಮಾಡಲಾಗಿದೆ. ತೀವ್ರ ಮಳೆಯಿಂದಾಗಿ ರಾಜ್ಯದ ಹಲವೆಡೆ ಅಂದಾಜು ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಪರಿಹಾರಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಕಳೆದ ಬಾರಿ ಬರಗಾಲ ಆವರಿಸಿದಾಗ ಕೇಂದ್ರದಿಂದ ಸಕಾಲಕ್ಕೆ ಪರಿಹಾರ ಸಿಗಲಿಲ್ಲ. ನ್ಯಾಯಾಲಯದ ಮೂಲಕ ರಾಜ್ಯಕ್ಕೆ ಸಿಗಬೇಕಿದ್ದ 3,454 ಕೋಟಿ ರೂ. ಪಡೆದು ರೈತರಿಗೆ ಪರಿಹಾರ ಬಿಡುಗಡೆ ಮಾಡಲಾಗಿದೆ. 1,900 ಕೋಟಿ ರೂ. ವಿಮೆ ಹಣ ಇತ್ಯರ್ಥ ಪಡಿಸಲಾಗಿದ್ದು, ಇದರೊಂದಿಗೆ ರೈತರಿಗೆ ತಾತ್ಕಾಲಿಕ ಪರಿಹಾರ ಸಹಿತ ಒಟ್ಟು 6,500 ಕೋಟಿ ರೂ. ಒದಗಿಸುವ ಮೂಲಕ ಬರದ ತೀವ್ರತೆ ಕಾಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

Advertisement

ಮೂರು ದಿನಗಳಲ್ಲಿ ಜಂಟಿ ಸಮೀಕ್ಷೆ, 15 ದಿನಗಳಲ್ಲಿ ಪರಿಹಾರ: ಕೃಷ್ಣಬೈರೇಗೌಡ

ರಾಜ್ಯದಲ್ಲಿ ಹಿಂಗಾರು ಹಂಗಾಮಿನ ಅಕ್ಟೋಬರ್‌ ತಿಂಗಳಿನಲ್ಲಿಯೇ ಶೇ. 66ರಷ್ಟು ಅಧಿಕ ಮಳೆ ಸುರಿದ ಪರಿಣಾಮ ಭಾರೀ ಪ್ರಮಾಣದಲ್ಲಿ ಬೆಳೆಹಾನಿ ಆಗಿದೆ. ಮುಂದಿನ ಮೂರು ದಿನಗಳಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಬೆಳೆ ಸಮೀಕ್ಷೆ ನಡೆಸಿ ಹಾನಿಗೀಡಾದ ರೈತರಿಗೆ 15 ದಿನಗಳಲ್ಲಿ ಡಿಬಿಟಿ ಮೂಲಕ ಬೆಳೆ ನಷ್ಟ ಪರಿಹಾರ ಒದಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ, ಸಂಗೇನಹಳ್ಳಿ ಮತ್ತಿತರೆಡೆ ಮಳೆಹಾನಿ ಪರಿಶೀಲನೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ ದಾವಣಗೆರೆ, ಚಿತ್ರದುರ್ಗ, ವಿಜಯನಗರ, ತುಮಕೂರು ಸಹಿತ ಹಲವು ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಪ್ರಾಥಮಿಕ ಅಂದಾಜು ಬೆಳೆ ನಷ್ಟಕ್ಕಿಂತ ಇನ್ನೂ ಹೆಚ್ಚಿನ ಬೆಳೆ ನಷ್ಟವಾಗಿರುವ ಸಾಧ್ಯತೆ ಇದೆ. ಮೂರು ದಿನಗಳಲ್ಲಿ ಜಂಟಿ ಸಮೀಕ್ಷೆಯ ಅನಂತರ ಬೆಳೆ ನಷ್ಟದ ನಿಖರ ಪ್ರಮಾಣ ತಿಳಿಯಲಿದೆ. ಶನಿವಾರ ಮುಖ್ಯಮಂತ್ರಿಗಳೊಂದಿಗೆ ಅಧಿಕ ಮಳೆಯಾದ ಜಿಲ್ಲೆಗಳ ಜಿಲ್ಲಾಧಿಕಾರಿ ಜತೆ ವೀಡಿಯೋ ಕಾನ್ಫರೆನ್ಸ್‌ ನಡೆಸಿ ಸೂಚನೆ ನೀಡಲಾಗುತ್ತದೆ. ಮಳೆಯಿಂದ ಬೆಳೆ, ಜೀವ ಹಾನಿ ಹಾಗೂ ಮನೆ ಬಿದ್ದು ಹೋಗಿದ್ದಲ್ಲಿ ತತ್‌ಕ್ಷಣ ಪರಿಹಾರ ನೀಡಲು ಜಿಲ್ಲಾಧಿಕಾರಿ, ತಹಶೀಲ್ದಾರ್‌ ಖಾತೆಗಳಲ್ಲಿ 666 ಕೋ.ರೂ. ಇದೆ. ಪ್ರಕೃತಿ ವಿಕೋಪ ಎದುರಿಸಲು ಯಾವುದೇ ಅನುದಾನ ಕೊರತೆ ಇಲ್ಲ ಎಂದರು.

ಬೆಳೆ ನಷ್ಟ: ಜಿಲ್ಲಾಧಿಕಾರಿಗಳ ಜತೆ ಇಂದು ಸಿಎಂ ಸಭೆ
ವ್ಯಾಪಕ ಮಳೆಯಿಂದ ಆದ ಹಾನಿ ಬಗ್ಗೆ ಪರಿಶೀಲಿಸಲು ಶನಿವಾರ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಡಿಸಿ, ಸಿಇಒ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next