ನವದೆಹಲಿ: ರೈಲ್ವೆಯ ವಿವಿಧ ಇಲಾಖೆಗಳಲ್ಲಿ 5000 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ ಎಂದು ಖಾಸಗಿ ಏಜೆನ್ಸಿಯೊಂದು ನೀಡಿರುವ ನಕಲಿ ಜಾಹೀರಾತು ವಿರುದ್ಧ ಭಾರತೀಯ ರೈಲ್ವೆ ಇಲಾಖೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಪ್ರಮುಖ ಮಾಧ್ಯಮವೊಂದರಲ್ಲಿ ಈ ಜಾಹೀರಾತು ಪ್ರಕಟಗೊಂಡಿದ್ದು, ರೈಲ್ವೆ ಇಲಾಖೆಯ 8 ವಿಭಾಗಗಳಲ್ಲಿ 5,285 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿರುವುದಾಗಿ ತಿಳಿಸಿತ್ತು!
ಅವೆಸ್ತ್ರಾನ್ ಇನ್ಫೋ ಟೆಕ್ ಹೆಸರಿನ ಸಂಸ್ಥೆಯೊಂದು ಈ ನಕಲಿ ಜಾಹೀರಾತು ನೀಡಿರುವುದು ರೈಲ್ವೆ ಸಚಿವಾಲಯದ ಗಮನಕ್ಕೆ ಬಂದಿತ್ತು. ಈ ಸಂಸ್ಥೆ 2020ರ ಆಗಸ್ಟ್ 8ರಂದು ಪ್ರಮುಖ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿತ್ತು.
ಭಾರತೀಯ ರೈಲ್ವೆ ಇಲಾಖೆ 11 ವರ್ಷಗಳ ಹೊರಗುತ್ತಿಗೆ ಮೂಲಕ ಎಂಟು ವಿಭಾಗಗಳಲ್ಲಿ 5000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವವರು 750 ರೂಪಾಯಿ ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಸುವ ಕೊನೆ ದಿನಾಂಕ 2020ರ ಸೆಪ್ಟೆಂಬರ್ 10 ಎಂಬುದಾಗಿ ಜಾಹೀರಾತಿನಲ್ಲಿ ಉಲ್ಲೇಖಿಸಿತ್ತು.
ರೈಲ್ವೆ ಇಲಾಖೆಯಲ್ಲಿ ಭಾರತೀಯ ರೈಲ್ವೆ ಮಾತ್ರವೇ ನೇಮಕಾತಿ ಮಾಡಿಕೊಳ್ಳುತ್ತದೆ ವಿನಃ ಯಾವುದೇ ಕಾರಣಕ್ಕೂ ಖಾಸಗಿ ಏಜೆನ್ಸಿಯವರಿಗೆ ನೇಮಕಾತಿ ಮಾಡುವ ಯಾವುದೇ ಅಧಿಕಾರ ಇರುವುದಿಲ್ಲ. ಈ ನಿಟ್ಟಿನಲ್ಲಿ ಜಾಹೀರಾತು ಕಾನೂನು ಬಾಹಿರವಾದದ್ದು ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಖಾಸಗಿ ಸಂಸ್ಥೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ. ರೈಲ್ವೆ ಇಲಾಖೆಯ ವಿವಿಧ ಕೆಟಗರಿಯಲ್ಲಿನ (ಸಿ ಮತ್ತು ಡಿ ಗ್ರೂಪ್) ಹುದ್ದೆಗಳ ನೇಮಕಾತಿಯನ್ನು 21ನೇ ರೈಲ್ವೆ ನೇಮಕಾತಿ ಮಂಡಳಿ(ಆರ್ ಆರ್ ಬಿಎಸ್ ) ಮತ್ತು 16ನೇ ರೈಲ್ವೆ ನೇಮಕಾತಿ ಸೆಲ್ (ಆರ್ ಆರ್ ಸಿ) ನಡೆಸಲಿದೆ ವಿನಃ ಯಾವುದೇ ಖಾಸಗಿ ಏಜೆನ್ಸಿಗಳು ನೇಮಕಾತಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.