Advertisement

ರೈಲು ಪಯಣಕ್ಕೆ ವಿಳಾಸ ಕೊಡಿ ; ಸೋಂಕಿತರ ಪತ್ತೆ ಹಚ್ಚಲು ಈ ಕ್ರಮ ; 13ರಿಂದಲೇ ನಿಯಮ ಜಾರಿ

08:34 AM May 16, 2020 | Hari Prasad |

ಹೊಸದಿಲ್ಲಿ: ಐಆರ್‌ಸಿಟಿಸಿ ವೆಬ್‌ ಸೈಟ್‌ ಮೂಲಕ ಟಿಕೆಟ್‌ ಕಾಯ್ದಿರಿಸುವ ಎಲ್ಲ ಪ್ರಯಾಣಿಕರು ಕೂಡ ತಲುಪಲುದ್ದೇಶಿಸಿರುವ ಪ್ರದೇಶದ ವಿಳಾಸವನ್ನು ರೈಲ್ವೆ ಇಲಾಖೆಯು ತನ್ನಲ್ಲಿ ಸುರಕ್ಷಿತವಾಗಿ ತೆಗೆದಿರಿಸಿಕೊಳ್ಳಲಿದೆ.

Advertisement

ಯಾಕೆ ಎಂದು ಯೋಚಿಸುತ್ತಿದ್ದೀರಾ? ಒಂದು ವೇಳೆ, ಈ ಪ್ರಯಾಣಿಕರು ಊರು ತಲುಪಿದ ಬಳಿಕ ಅವರಲ್ಲಿ ಯಾರಿಗಾದರೂ ಕೋವಿಡ್ ಸೋಂಕು ಕಂಡುಬಂದರೆ, ಅವರ ಸಂಪರ್ಕಿತರನ್ನು ಪತ್ತೆಹಚ್ಚಲು ಸುಲಭವಾಗಲಿ ಎಂಬ ಕಾರಣಕ್ಕೆ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಮೇ 13ರಿಂದ ದೇಶದ ಆಯ್ದ ಮಾರ್ಗಗಳಲ್ಲಿ ಪ್ರಯಾಣಿಕರ ರೈಲು ಸಂಚಾರ ಆರಂಭವಾಗಿದೆ. ಅಂದಿನಿಂದಲೇ ಐಆರ್‌ಟಿಸಿ ವೆಬ್‌ಸೈಟ್‌ ನಲ್ಲಿ ಪ್ರಯಾಣಿಕರ ವಿಳಾಸವನ್ನು ನಮೂದಿಸುವ ನಿಬಂಧನೆಯನ್ನು ಸೇರಿಸಲಾಗಿದೆ.

ಇನ್ನೂ ಕೆಲ ಕಾಲ: ಮಂಗಳವಾರದಿಂದಲೇ ಪ್ರಯಾಣಿಕರು ತಲುಪುವ ಸ್ಥಳದ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಕೋವಿಡ್ ಸೋಂಕಿತರನ್ನು ಹಾಗೂ ಸಂಪರ್ಕಿತರನ್ನು ಪತ್ತೆಹಚ್ಚಲು ಇದು ನೆರವಾಗಲಿದೆ. ಇನ್ನೂ ಕೆಲವು ತಿಂಗಳ ಕಾಲ ಈ ವ್ಯವಸ್ಥೆ ಚಾಲ್ತಿಯಲ್ಲಿರಲಿದೆ ಎಂದು ರೈಲ್ವೆ ವಕ್ತಾರ ಆರ್‌.ಡಿ. ಬಾಜಪೇಯಿ ಹೇಳಿದ್ದಾರೆ.

ಜತೆಗೆ, ಸದ್ಯಕ್ಕೆ ಕೌಂಟರ್‌ನಲ್ಲಿ ಟಿಕೆಟ್‌ ನೀಡುವ ವ್ಯವಸ್ಥೆ ಇಲ್ಲದ ಕಾರಣ, ಎಲ್ಲರೂ ಆನ್‌ಲೈನ್‌ ಮೂಲಕವೇ ಟಿಕೆಟ್‌ ಕಾಯ್ದಿರಿಸಬೇಕಾಗುತ್ತದೆ. ಹಾಗಾಗಿ ವಿಳಾಸವನ್ನು ನಮೂದಿಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದಿದ್ದಾರೆ.

Advertisement

ಈ ಹಿಂದೆ, ರೈಲುಗಳಲ್ಲಿ ಪ್ರಯಾಣಿಸಿದ ಸುಮಾರು 12 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ಇಲಾಖೆ ಇಂಥದ್ದೊಂದು ಮಹತ್ವದ ನಿರ್ಣಯ ಕೈಗೊಂಡಿದೆ.

10 ಲಕ್ಷ ಕಾರ್ಮಿಕರು ಊರಿಗೆ: ಮೇ 1ರಿಂದ ಈವರೆಗೆ ರೈಲ್ವೆಯ 800 ಶ್ರಮಿಕ ವಿಶೇಷ ರೈಲುಗಳು ದೇಶಾದ್ಯಂತ ಸಂಚರಿಸಿದ್ದು, ಸುಮಾರು 10 ಲಕ್ಷ ವಲಸೆ ಕಾರ್ಮಿಕರನ್ನು ಊರು ತಲುಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ. ಈ ಪೈಕಿ ಅತಿ ಹೆಚ್ಚು ರೈಲುಗಳು ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ತಲುಪಿವೆ ಎಂದೂ ಹೇಳಿದ್ದಾರೆ.

45 ಕೋಟಿ ರೂ. ಮೊತ್ತದ ಟಿಕೆಟ್‌ ಬುಕಿಂಗ್‌: ಈಗಾಗಲೇ ಆಯ್ದ ಮಾರ್ಗಗಳಲ್ಲಿ ಸಂಚಾರ ಆರಂಭಿಸಿರುವ ರೈಲುಗಳಲ್ಲಿ ಪ್ರಯಾಣಿಸಲು ಮುಂದಿನ 7 ದಿನಗಳಿಗೆ ಸುಮಾರು 2 ಲಕ್ಷ ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

2 ಲಕ್ಷ ಮಂದಿ ಒಟ್ಟು 45.30 ಕೋಟಿ ರೂ. ಮೊತ್ತದ ಟಿಕೆಟ್‌ ಗಳನ್ನು ಬುಕ್‌ ಮಾಡಿದ್ದಾರೆ. ಬುಧವಾರ ಒಟ್ಟು 20,149 ಪ್ರಯಾಣಿಕರು ಈ ರೈಲುಗಳಲ್ಲಿ ಪ್ರಯಾಣಿಸಿದ್ದು, ಗುರುವಾರ 25,737 ಮಂದಿ ಪ್ರಯಾಣಿಸಿದ್ದಾರೆ.

ಮಂಗಳವಾರದಿಂದ 15 ನಗರಗಳಿಗೆ ರೈಲು ಸಂಚಾರ ಆರಂಭವಾಗಿದ್ದು, ಎಲ್ಲ ರೈಲುಗಳ ಟಿಕೆಟ್‌ ಗಳಿಗೂ ಭಾರೀ ಬೇಡಿಕೆ ಬಂದಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಜೂ.30ರ ವರೆಗಿನ ಟಿಕೆಟ್‌ ರದ್ದು; ಮೊತ್ತ ಮರುಪಾವತಿ
ಸಾಮಾನ್ಯ ರೈಲು ಪ್ರಯಾಣಕ್ಕೆಂದು ಜೂನ್‌ 30ರವರೆಗೆ ಟಿಕೆಟ್‌ ಕಾಯ್ದಿರಿಸಿದ್ದ ಎಲ್ಲರ ಟಿಕೆಟ್‌ ಅನ್ನು ರದ್ದು ಮಾಡಿ, ಅದರ ಮೊತ್ತವನ್ನು ಮರುಪಾವತಿ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಮೂಲಕ, ಜೂನ್‌ 30ರವರೆಗೂ ರೈಲು ಪ್ರಯಾಣ ಆರಂಭವಾಗುವ ಸಾಧ್ಯತೆಯಿಲ್ಲ ಎಂಬ ಪರೋಕ್ಷ ಸಂದೇಶ ರವಾನಿಸಿದೆ.

ಆದರೆ, ವಲಸೆ ಕಾರ್ಮಿಕರನ್ನು ಕರೆದೊಯ್ಯಲು ಮೇ 1 ರಿಂದ ಆರಂಭವಾಗಿರುವ ಶ್ರಮಿಕ ವಿಶೇಷ ರೈಲುಗಳು ಮತ್ತು ಮೇ 12ರಿಂದ ಆಯ್ದ ಮಾರ್ಗಗಳಲ್ಲಿ ಆರಂಭವಾಗಿರುವ ಪ್ರಯಾಣಿಕ ರೈಲುಗಳ ಸೇವೆ ಮುಂದುವರಿಯಲಿದೆ.

ಲಾಕ್‌ ಡೌನ್‌ ಆರಂಭವಾದ ಬಳಿಕವೂ ರೈಲ್ವೆ ಇಲಾಖೆಯು ಟಿಕೆಟ್‌ ಬುಕಿಂಗ್‌ ಗೆ ಅವಕಾಶ ಕಲ್ಪಿಸಿತ್ತು. ಜೂನ್‌ ತಿಂಗಳ ಪ್ರಯಾಣಕ್ಕಾಗಿ ಅನೇಕರು ಈಗಾಗಲೇ ಟಿಕೆಟ್‌ ಕಾಯ್ದಿರಿಸಿದ್ದು, ಆ ಟಿಕೆಟ್‌ ಗಳು ರದ್ದಾಗಲಿವೆ ಮತ್ತು ಮೊತ್ತ ಗ್ರಾಹಕರ ಖಾತೆಗೆ ವಾಪಸಾಗಲಿದೆ ಎಂದು ಹೇಳಲಾಗಿದೆ. ಕೋವಿಡ್ ಲಾಕ್‌ ಡೌನ್‌ನಿಂದಾಗಿ ಮಾ. 25ರಿಂದಲೇ ರೈಲ್ವೆಯ ಎಲ್ಲ ಮೇಲ್, ಎಕ್ಸ್‌ ಪ್ರಸ್‌, ಪ್ಯಾಸೆಂಜರ್‌ ಮತ್ತು ಉಪನಗರ ಸೇವೆಗಳು ಸ್ಥಗಿತಗೊಂಡಿವೆ.

ಅವಕಾಶ ವಂಚಿತರಿಗೆ ಟಿಕೆಟ್‌ ಮೊತ್ತ ಮರುಪಾವತಿ
ಟಿಕೆಟ್‌ ಮೊದಲೇ ಕಾಯ್ದಿರಿಸಿದ್ದರೂ, ಕೋವಿಡ್ ವೈರಸ್‌ಗೆ ಸಂಬಂಧಿಸಿದ ರೋಗಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಯಾರಿಗೆಲ್ಲ ರೈಲು ಹತ್ತಲು ಅವಕಾಶ ಕಲ್ಪಿಸಿಲ್ಲವೋ, ಅಂಥ ಪ್ರಯಾಣಿಕರಿಗೆ ಟಿಕೆಟ್‌ನ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲನ್ನೇರಲು ಬರುವ ಪ್ರಯಾಣಿಕರೆಲ್ಲರನ್ನೂ ಕಡ್ಡಾಯವಾಗಿ ಸ್ಕ್ರೀನಿಂಗ್‌ ಗೆ ಒಳಪಡಿಸಬೇಕು ಮತ್ತು ರೋಗ ಲಕ್ಷಣ ಇಲ್ಲದೇ ಇರುವವರಿಗೆ ಮಾತ್ರವೇ ರೈಲು ಹತ್ತಲು ಅವಕಾಶ ನೀಡಬೇಕು ಎಂದು ಕೇಂದ್ರ ಗೃಹ ಇಲಾಖೆ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.

ಹೀಗಾಗಿ, ಟಿಕೆಟ್‌ ಕಾಯ್ದಿರಿಸಿದ್ದರೂ ಕೆಲವು ಪ್ರಯಾಣಿಕರಿಗೆ ಜ್ವರ ಮತ್ತಿತರ ರೋಗಲಕ್ಷಣ ಕಂಡುಬಂದ ಕಾರಣ ರೈಲನ್ನೇರಲು ಅವಕಾಶ ನಿರಾಕರಿಸಲಾಗಿತ್ತು. ಅಂಥವರ ಟಿಕೆಟ್‌ ನ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡುವುದಾಗಿ ಇಲಾಖೆ ತಿಳಿಸಿದೆ.

ಜತೆಗೆ, ಒಂದೇ ಪಿಎನ್‌ಆರ್‌ನಲ್ಲಿ ಸಾಮೂಹಿಕವಾಗಿ ಟಿಕೆಟ್‌ ಬುಕ್‌ ಮಾಡಿ, ಆ ಪೈಕಿ ಒಬ್ಬರಲ್ಲಿ ರೋಗಲಕ್ಷಣವಿದೆ ಎಂಬ ಕಾರಣಕ್ಕೆ ಎಲ್ಲರೂ ರೈಲು ಹತ್ತಲು ನಿರಾಕರಿಸಿದ್ದರೆ, ಅಂಥ ಸಂದರ್ಭದಲ್ಲೂ ಆ ಎಲ್ಲರ ಟಿಕೆಟ್‌ ಮೊತ್ತವನ್ನೂ ವಾಪಸ್‌ ನೀಡಲಾಗುವುದು ಎಂದೂ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next