ನವದೆಹಲಿ: ರೈಲು ಪ್ರಯಾಣದ ಮುಂಗಡ ಟಿಕೆಟ್ (Advance Ticket) ಬುಕ್ಕಿಂಗ್ ಗೆ ಪ್ರಸ್ತುತ ಚಾಲ್ತಿಯಲ್ಲಿರುವ ಸಮಯದ ಮಿತಿಯನ್ನು ಕಡಿತಗೊಳಿಸುವುದಾಗಿ ಭಾರತೀಯ ರೈಲ್ವೆ(Indian Railways) ಇಲಾಖೆ ಘೋಷಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ರೈಲ್ವೆ ಪ್ರಯಾಣಿಕರು ಇನ್ಮುಂದೆ ಕೇವಲ 60 ದಿನಗಳ ಮೊದಲು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ 120 ದಿನಗಳ ಮೊದಲು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡುವ ಅವಕಾಶ ಇದೆ.
ಈ ಹೊಸ ಆದೇಶ 2024ರ ನವೆಂಬರ್ 1ರಿಂದ ಅನ್ವಯವಾಗಲಿದೆ. ಆದರೆ ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿದ ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಆದರೆ ಕೆಲವು ಬೆಳಗ್ಗಿನ ಸಮಯದ ಎಕ್ಸ್ ಪ್ರೆಸ್ ರೈಲುಗಳ ಮುಂಗಡ ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ರೀತಿ ವಿದೇಶಿ ಪ್ರವಾಸಿಗರ 365 ದಿನಗಳ ಸಮಯದ ಅವಧಿಯ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಪ್ರತಿವರ್ಷ ಭಾರತೀಯ ರೈಲ್ವೆಯಲ್ಲಿ ಅಂದಾಜು 30ರಿಂದ 35 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಾರೆ ಎಂದು ವರದಿ ವಿವರಿಸಿದೆ.