ಶಿಡ್ಲಘಟ್ಟ: ಬೇಸಿಗೆಯಲ್ಲಿ ಧೂಳಿನ ಅಭಿಷೇಕ, ಮಳೆ ಬಂದರೆ ಈಜುಕೊಳದ ದರ್ಶನ, ಸಂಚಾರಕ್ಕೆ ಯೋಗ್ಯವಿಲ್ಲದ ರಸ್ತೆ, ಸಿಮೆಂಟ್ ಟಾಪಿಂಗ್‌ನಿಂದ ಕಿತ್ತು ಬಂದಿರುವ ಕಬ್ಬಿಣ, ಹಾಳಾಗಿರುವ ಚರಂಡಿ ಮೇಲು ಹೊದಿಕೆ..
ಇದು ರೇಷ್ಮೆ ನಗರ ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಬಳಿ ಇರುವ ರೈಲ್ವೆ ಕೆಳಸೇತುವೆಯ ಅವ್ಯವಸ್ಥೆ. ಶಿಡ್ಲಘಟ್ಟ ತಾಲೂಕು ಕಚೇರಿ, ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷಿ, ತೋಟಗಾರಿಕೆ, ಕಂದಾಯ ಭವನ, ಆಡಳಿತ ಸೌಧ ಕಚೇರಿಗೆ ತೆರಳುವ ಅಧಿಕಾರಿಗಳು ಇದೇ ಮಾರ್ಗದ ಮೂಲಕ ಸಾಗಬೇಕು ಆದರೆ, ದುರಂತವೇನೆಂದರೆ, ಮಳೆ ಬಂದರೇ ಇಡೀ ಕೆಳಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡು ಮಿನಿ ದ್ವೀಪವಾಗಿ ಪರಿವರ್ತನೆಗೊಳ್ಳುತ್ತದೆ. ಮಳೆಯಿಲ್ಲವೆಂದರೆ ಇಡೀ ಅಂಡರ್‌ಪಾಸ್ ಧೂಳುಮಯವಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಧೂಳಿನ ಅಭಿಷೇಕ ಸಾಮಾನ್ಯವಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳು ಮಾತ್ರ ಕೆಳಸೇತುವೆಯ ಅವ್ಯವಸ್ಥೆ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿರುವ ಕಾರಣ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಅಂಡರ್‌ಪಾಸ್ ಉದ್ದಕ್ಕೂ ಸರಿಯಾದ ರಸ್ತೆ ಇಲ್ಲದಿರುವ ಕಾರಣ ಮತ್ತು ಬದಿಯಲ್ಲಿ ಮಣ್ಣು ಮತ್ತು ಧೂಳು ತುಂಬಿಕೊಂಡಿದ್ದು ಸವಾರರು ಅನೇಕ ಬಾರಿ ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆಗಳು ಜರುಗಿವೆ. ಇನ್ನು ರೈಲ್ವೆ ಅಂಡರ್ ಪಾಸ್ ಸುತ್ತಮುತ್ತಲ ನಿವಾಸಿಗಳು ಧೂಳಿನಿಂದ ನಿತ್ಯನರಕ ಅನುಭವಿಸುತ್ತಿದ್ದಾರೆ. ಕೊರೊನಾ ಬಳಿಕ ಎಲ್ಲರೂ ಮಾಸ್ಕ್ ಹಾಕುತ್ತಿದ್ದಾರೆ ಆದರೆ ಇಲ್ಲಿನ ಕೆಳಸೇತುವೆಯ ಧೂಳಿನಿಂದ ತಪ್ಪಿಸಿಕೊಳ್ಳಲು ನಾಗರಿಕರು ಮತ್ತು ದ್ವಿಚಕ್ರ ವಾಹನ ಸವಾರರು ಅನಿವಾರ್ಯವಾಗಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡೇ ಸಂಚರಿಸಬೇಕಾದ ಸ್ಥಿತಿಯಿದೆ. ರಸ್ತೆಯಲ್ಲಿ ಮೊಣ್ಣುಕಾಲುವರೆಗೆ ಗುಂಡಿಗಳಿರುವ ಕಾರಣ ಗುಂಡಿ ತಪ್ಪಿಸುವ ಸಲುವಾಗಿ ಮತ್ತೂಂದು ಗುಂಡಿಯಲ್ಲಿ ಬಿದ್ದು ಅನಾಹುತ ಸಂಭವಿಸುತ್ತಿದೆ.
ಈಜುಕೊಳವಾಗುವ ಅಂಡರ್‌ಪಾಸ್: ಮಳೆಗಾಲದಲ್ಲಿ ಸುರಿಯುವ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ನೀರಿನಲ್ಲಿ ಬೃಹತ್ ಗಾತ್ರದ ವಾಹನಗಳು ಮಾತ್ರ ಸಂಚರಿಸಲು ಅವಕಾಶಗಳಿದ್ದು ಇನ್ನೂ ದ್ವಿಚಕ್ರ ವಾಹನ ಸವಾರರು ಮಳೆಯ ನೀರಲ್ಲಿ ಮಿಂದು ಹೊರಬರುವಷ್ಟು ಚಿಂತಾಜನಕ ಸ್ಥಿತಿ ಸೃಷ್ಟಿಯಾಗುತ್ತದೆ. ರೈಲ್ವೆ ಕೆಳಸೇತುವೆಯ ಅವ್ಯವಸ್ಥೆ ಸರಿಪಡಿಸಲು ಕ್ಷೇತ್ರದ ಶಾಸಕರು, ಸಂಸದರು ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ.
ಕಿತ್ತುಬಂದಿರುವ ಕಬ್ಬಿಣ: ರೈಲ್ವೆ ಕೆಳಸೇತುವೆ ಸ್ಥಿತಿ ಎಷ್ಟು ಹದಗೆಟ್ಟಿದೆ ಅಂದರೇ ರೈಲ್ವೆ ಸಿಮೆಂಟ್ ಟಾಪಿಂಗ್ ಕುತ್ತುಹೋಗಿ ಕಬ್ಬಿಣ ಹೊರಗೆ ಕಾಣುತ್ತಿದೆ. ಅದರ ಮೇಲೆಯೇ ವಾಹನಗಳು ಹಾದು ಹೋಗಬೇಕಾಗಿದೆ ಸ್ವಲ್ಪ ಯಾಮಾರಿದರೆ ವಾಹನ ಸವಾರರು ವಾಹನಗಳೊಂದಿಗೆ ನೆಲಕಚ್ಚುತ್ತಾರೆ. ಇನ್ನೂ ನಾಗರಿಕರು ಸಂಚರಿಸಲು ಹಾಕಿರುವ ಪಾದಚಾರಿಗಳ ಮಾರ್ಗದ ಚರಂಡಿ ಮೇಲು ಹೊದಿಕೆಗಳು ಕಿತ್ತು ಬಂದಿದ್ದು, ವಾಹನ ಸಂಚಾರದ ನಡುವೆ ರಸ್ತೆಯಲ್ಲಿಯೇ ಸಂಚರಿಸಬೇಕಾದ ಅವ್ಯವಸ್ಥೆ ಸೃಷ್ಟಿಯಾಗಿದೆ. ಇನ್ನೂ ರಾತ್ರಿ ವೇಳೆಯಲ್ಲಿ ಸೂಕ್ತ ರೀತಿಯ ಬೀದಿ ದೀಪಗಳ ವ್ಯವಸ್ಥೆ ಇಲ್ಲದೇ ಕತ್ತಲಲ್ಲಿ ಸಂಚರಿಸುವಂತಾಗಿದೆ.
ನಗರಸಭೆ ಸಿಬ್ಬಂದಿಯ ನಿತ್ಯ ಕಾಯಕ: ರೈಲ್ವೆ ಇಲಾಖೆಯ ಕೆಳಸೇತುವೆಯಲ್ಲಿ ಮಳೆ ಬಂದರೇ ನೀರು ನಿಂತುಕೊಂಡು ಸಂಚಾರಕ್ಕೆ ತೊಂದರೆ ಸಾಮಾನ್ಯವಾಗಿದೆ. ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದಾಗ ನಗರಸಭೆಯ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಬಂದು ನಿಂತುಕೊಳ್ಳುವ ಮಳೆಯ ನೀರನ್ನು ಹೊರ ಸಾಗಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಪ್ರಸ್ತುತ ಬೇಸಿಗೆ ಕಾಲವಾಗಿದ್ದು, ಧೂಳಿನಿಂದ ಪರಿತಪಿಸುತ್ತಿದ್ದಾರೆ. ಮಳೆ ಪ್ರಾರಂಭವಾದರೆ ಮತ್ತೆ ಸಂಕಷ್ಟ ಎದುರಾಗಲಿದೆ. ಸೂಕ್ತ ಕ್ರಮವಹಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಶಿಡ್ಲಘಟ್ಟ ನಗರದ ರೈಲ್ವೆ ಕೆಳಸೇತುವೆ ಸ್ಥಿತಿ ಶೋಚನೀಯವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ನಾಗರಿಕರು ಮತ್ತು ವಿದ್ಯಾರ್ಥಿಗಳು ಅಂಗೈಯಲ್ಲಿ ಜೀವ ಇಟ್ಟುಕೊಂಡು ಸಂಚರಿಸುವ ಪರಿಸ್ಥಿತಿ ಇದೆ. ಸಂಬಂಧ ಪಟ್ಟ ರೈಲ್ವೆ ಇಲಾಖೆ ಅಧಿಕಾರಿಗಳು ಗಮನಹರಿಸಿ ಕೆಳಸೇತುವೆ ಅಭಿವೃದ್ಧಿ ಗೊಳಿಸಬೇಕಿದೆ.
●ಎಸ್.ರಹಮತ್ತುಲ್ಲಾ, ರೈಲ್ವೆ ಹೋರಾಟ ಸಮಿತಿ ಮಾಜಿ ಕಾರ್ಯದರ್ಶಿ