Advertisement

ರೈಲ್ವೆ ಹಳಿ ರಸ್ತೆ ಸುಗಮ: ನೆಲ ರಸ್ತೆ ನರಳಾಟ

02:40 PM Jun 25, 2017 | Team Udayavani |

ವಾಡಿ: ಸಿಮೆಂಟ್‌ ನಗರಿ ವಾಡಿ ಪಟ್ಟಣದ ನಾಲ್ಕೂ ದಿಕ್ಕಿನಲ್ಲಿ ಹಳಿ ರಸ್ತೆಗಳದ್ದೇ ಕಾರುಬಾರು ಎಂಬಂತಾಗಿದ್ದು, ಅಳವಡಿಸಲಾದ ರೈಲ್ವೆ ಗೇಟ್‌ಗಳಿಂದ ವಾಹನ ಸವಾರರು ದಿನವಿಡಿ ಕಿರಿಕಿರಿ ಅನುಭವಿಸುತ್ತಿದ್ದಾರೆ.

Advertisement

ಅಂತಾ ರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಎಸಿಸಿ ಸಿಮೆಂಟ್‌ ಘಟಕ ನಗರ ನಿವಾಸಿಗಳ ಉಪಜೀವನ ಕೇಂದ್ರವಾದರೆ, ಜಂಕ್ಷನ್‌ ಸ್ಥಾನ ಪಡೆದಿರುವ ರೈಲು ನಿಲ್ದಾಣದ ವಿವಿಧ ರಾಜ್ಯಗಳಿಗೆ ಹಳಿ ಸಂಪರ್ಕ ಜೋಡಿಸುತ್ತದೆ.

ರೈಲು ಗಾಡಿಗಳ ಸಂಚಾರ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಸರಕು ಸಾಗಾಣಿಕೆ (ಲಾರಿ) ವಾಹನಗಳ ಓಡಾಟ ಹೆಚ್ಚಿದೆ. ಪಟ್ಟಣದ ಮಧ್ಯ ಭಾಗದಿಂದ ಯಾವುದೇ ದಿಕ್ಕಿನೆಡೆಗೆ ರಸ್ತೆ ಮೂಲಕ ಸಂಚಾರ ಮಾಡಲು ಮುಂದಾದರೆ ರೈಲು ಹಳಿ ರಸ್ತೆಗಳು ಅಡ್ಡಗಟ್ಟುತ್ತವೆ. 

ಮುಂಬೈ, ಹೈದ್ರಾಬಾದ, ಬೆಂಗಳೂರು ಹಾಗೂ ಎಸಿಸಿ ಘಟಕ ಪ್ರವೇಶದ ರೈಲು ಹಳಿ ಮಾರ್ಗಗಳಿವೆ. ಹಳಿ ರಸ್ತೆಗಳನ್ನು ದಾಟಿ ಸಂಚರಿಸಲು ವಾಹನ ಸವಾರರು ನಾಲ್ಕು ರೈಲ್ವೆ ಗೇಟ್‌ಗಳನ್ನು ಪಾರು ಮಾಡಬೇಕಾದ ದುಸ್ಥಿತಿಯಿದೆ. 

ರೈಲುಗಳ ಸಂಚಾರಕ್ಕೆ ಅಡ್ಡಿ ಯಾಗದಂತೆ ನೋಡಿಕೊಳ್ಳುತ್ತಿರುವ ರೈಲ್ವೆ ಇಲಾಖೆ, ರಸ್ತೆ ಪ್ರಯಾಣಿಕರ ಗೋಳಾಟಕ್ಕೆ ಕಾರಣವಾಗಿದೆ. ನಿಜಾಮ ಗೇಟ್‌ ಬಡಾವಣೆ ಸಮೀಪದ ಹಳಿ ಮಾರ್ಗದಲ್ಲಿ ನಿರ್ಮಿಸಲಾಗಿರುವ ರೈಲ್ವೆ ಗೇಟ್‌ ಗಂಟೆಗೊಮ್ಮೆ, ಅರ್ಧಗಂಟೆಗೊಮ್ಮೆ ರಸ್ತೆ ಸಂಚಾರ ಸ್ಥಗಿತಗೊಳಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದೆ.

Advertisement

ನಾಲ್ಕು ಹಳಿ ಗೇಟ್‌ಗಳು ದಿನವಿಡೀ ವಾಹನ ಸವಾರರ ಜೀವಹಿಂಡುತ್ತಿದ್ದು, ಗಂಟೆಗಟ್ಟಲೇ ನಿಂತು ಹಿಂಸೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಕೇಂದ್ರ ರೈಲ್ವೆ ಸಚಿವರಿದ್ದಾಗ ಪಟ್ಟಣದ ಹೊರ ವಲಯದ ಚಿತ್ತಾಪುರ-ಯಾದಗಿರಿ ಮುಖ್ಯ ರಸ್ತೆಯ ಹಳಿ ಮಾರ್ಗದಲ್ಲಿ ಮತ್ತು ಎಸಿಸಿ ಘಟಕ ಮಾರ್ಗದ ಹಳಿ ರಸ್ತೆಗಳಿಗೆ ಎರಡು ರೈಲ್ವೆ ಮೇಲ್ಸೇತುವೆ ಮಂಜೂರು ಮಾಡಿಸಿದ್ದಾರೆ.

ಆದರೆ ಕಾಮಗಾರಿ ಮಾತ್ರ ಇಂದಿಗೂ ಆರಂಭಗೊಂಡಿಲ್ಲ. ನಗರದಿಂದ ಹೊರಗೆ ಹೋಗಲು ರೈಲ್ವೆ ಗೇಟ್‌ಗಳ ಕಿರಿಕಿರಿ ಅನುಭವಿಸಿಯೇ ಮುಂದೆ ಸಾಗಬೇಕಾದ ಹೀನಾಯ ಸ್ಥಿತಿಯಿದೆ. ಪಟ್ಟಣದ ರೈಲು ನಿಲ್ದಾಣಕ್ಕೂ ಪ್ರವೇಶ ದ್ವಾರವಿಲ್ಲ. ಇತ್ತ ಹಳಿ ಮಾರ್ಗಗಳಿಗೆ ಮೇಲ್ಸೇತುವೆ ಭಾಗ್ಯವಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next