ವಿಜಯಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳು ರೈತವಿರೋಧಿಯಾಗಿವೆ ಎಂದು ಆರೋಪಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ-ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ರೈಲು ರೋಖೋ ಚಳವಳಿ ನಡೆಸಿದರು.
ಬೆಂಗಳೂರಿನಿಂದ ಆಗಮಿಸಿದ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ಆಗಮಿಸುವ ಸದ್ದು ಕೇಳಿದ ತಕ್ಷಣ ಪ್ರತಿಭಟನಾಕಾರರು ಒಳಗಡೆ ಮುನ್ನುಗ್ಗುತ್ತಿರುವಾಗ ಪೊಲೀಸರು ಅಡ್ಡಗಟ್ಟಿ ರೈತರನ್ನು ತಡೆಯಲು ಯತ್ನಿಸಿದರು. ರೈತರ ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ಮತ್ತು ನೂಕುನುಗ್ಗಾಟ ಘರ್ಷಣೆ ನಡೆಯಿತು. ಕೊನೆಗೆ ರೈಲು ನಿರ್ಗಮಿಸಿದ ನಂತರ ಪೊಲೀಸರು ಪ್ರತಿಭಟನಾನಿರತ ರೈತರ ಒತ್ತಾಯಕ್ಕೆ ಮಣಿದು ರೈಲು ಟ್ರ್ಯಾಕ್ ಮೇಲೆ ಕುಳಿತು ಪ್ರತಿಭಟಿಸಲು ಅನುವು ಮಾಡಿಕೊಟ್ಟರು.
ರೈತ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ರೈತರ ವಿರುದ್ಧವಾದ ಮೂರು ಕರಾಳ ಕಾನೂನುಗಳನ್ನು ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಇಡಿ ದೇಶದ ರೈತರು ಚಳವಳಿ ಭಾಗವಾಗಲಿ ಎಂದು ರೈಲು ತಡೆ ಚಳವಳಿಗೆ ಕರೆ ನೀಡಿದ್ದಾರೆ. ಈ ಕರಾಳ ಕೃಷಿ ಕಾನೂನು ಪ್ರತಿಯೊಬ್ಬರಿಗೂ ಬಿಸಿ ತಟ್ಟುವ ಕಾನೂನುಗಳಾಗಿವೆ. ಈಗಾಗಲೇ ಬೆಲೆ ಏರಿಕೆಯಿಂದ ಜನ ಕಷ್ಟ ಪಡುತ್ತಿದ್ದಾರೆ. ಮುಂದೆ ಇದಕ್ಕಿಂತ ಕಷ್ಟದ ದಿನಗಳು ಬರಲಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಜನತೆ ಹೋರಾಟ ಕಟ್ಟಬೇಕೆಂದು ಕರೆ ನೀಡಿದರು.
ಹಿರಿಯ ಕಾರ್ಮಿಕ ಮುಖಂಡ ಅಣ್ಣಾರಾಯ ಈಳಿಗೇರ ಮಾತನಾಡಿ, ಕೇಂದ್ರ ಸರ್ಕಾರ ಈ ದೇಶದ ಬಂಡವಾಳಶಾಹಿಗಳ ಪಾದಸೇವೆ ಮಾಡುತ್ತ ಕಾರ್ಪೊರೇಟ್ ಕಂಪನಿಗಳ, ಬಹುರಾಷ್ಟ್ರೀಯ ಕಂಪನಿಗಳ ಮಣೆ ಹಾಕಿ ಈ ದೇಶದ ಜನಸಾಮಾನ್ಯರನ್ನು ಬೀದಿಗೆ ತಳ್ಳುತ್ತಿದೆ. ಗುತ್ತಿಗೆ ಕೃಷಿಯ ಹೆಸರಿನಲ್ಲಿ ರೈತರಿಂದ ಅವರ ಜೀವನೋಪಾಯದ ಏಕೈಕ ಸಾಧನವಾಗಿರುವ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತದೆ. ಕೃಷಿಯನ್ನು ಖಾಸಗಿ ಬೃಹತ್ ಕಂಪನಿಗಳ ನಿಯಂತ್ರಣಕ್ಕೆ ತರಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತ-ಕೃಷಿ ಕಾರ್ಮಿಕರ ಸಂಘಟನೆ ರಾಜ್ಯ ಉಪಾಧ್ಯಕ್ಷ ಬಿ. ಭಗವಾನರೆಡ್ಡಿ ಮಾತನಾಡಿ, ರೈತರು ಸಂಪೂರ್ಣವಾಗಿ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಕಂಪನಿಗಳ ಹಂಗಿನಲ್ಲಿ ನಡೆದಾಡುವ ಹೆಣಗಳಾಗಿ ಬಿಡುತ್ತಾರೆ. ಹೀಗೆ ಬಂಡವಾಳಶಾಹಿ ಉದ್ಯಮಿಗಳು ರೈತರ ಭೂಮಿಯನ್ನು ಖರೀದಿ ಮಾಡಿ ಸಮಸ್ತ ಸಂಪತ್ತಿನ ಒಡೆಯರಾಗುತ್ತಾರೆ. ಹಳ್ಳಿ-ಹಳ್ಳಿಗಳಲ್ಲಿರುವ ಕೃಷಿ ಸಂಪತ್ತನ್ನು ರೈತರಿಂದ ಕಿತ್ತು ಶ್ರೀಮಂತ ಬಂಡವಾಳಿಗರಿಗೆ ಧಾರೆಯೆರೆಯಲು ಸರ್ಕಾರ ಈ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ಬಾಳು ಜೇವೂರ, ಅಕ್ರಂ ಮಾಶ್ಯಾಳಕರ, ಶಕ್ತಿಕುಮಾರ ಉಕುಮನಾಳ, ಅರವಿಂದ ಕುಲಕರ್ಣಿ, ರಿಜ್ವಾನ್ ಮುಲ್ಲಾ ಸುರೇಖಾ ರಜಪೂತ, ನಿರ್ಮಲಾ ಹೊಸಮನಿ ಇದ್ದರು.