Advertisement

ರೈಲ್ವೇ ಲೆವೆಲ್‌ ಕ್ರಾಸಿಂಗ್ ಇನ್ನಷ್ಟು  ಡೇಂಜರಸ್‌

09:50 AM May 20, 2018 | Team Udayavani |

ಮಹಾನಗರ: ನಗರದ ಪಾಂಡೇಶ್ವರ ರೈಲ್ವೇ ಹಳಿಯ ಎರಡೂ ಕಡೆಗಳಲ್ಲಿ ರಸ್ತೆ ಕಾಂಕ್ರೀಟ್‌ ಕಾಮಗಾರಿ ನಡೆಸಿ ಚತುಷ್ಪಥವಾಗಿದ್ದರೂ ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಇನ್ನೂ ಕೂಡ ಅಗಲ ಕಿರಿದಾಗಿರುವುದರಿಂದ ಇಲ್ಲಿ ರಸ್ತೆ ಸಂಚಾರಿಗಳು ಪ್ರತಿನಿತ್ಯ ಬವಣೆ ಪಡುತ್ತಿದ್ದಾರೆ. ರೈಲ್ವೇ ಇಲಾಖೆ ಹಾಗೂ ಮಂಗಳೂರು ಪಾಲಿಕೆಗೆ ಈ ಬಗ್ಗೆ ಸ್ಪಷ್ಟ ಅರಿವಿದ್ದರೂ ಯಾರೂ ಕೂಡ ಈ ಸಮಸ್ಯೆ ನಿವಾರಣೆಗೆ ಮುಂದೆ ಬರುತ್ತಿಲ್ಲ.

Advertisement

ಪಾಂಡೇಶ್ವರದಲ್ಲಿ ಆಗಾಗ್ಗೆ ಗೂಡ್ಸ್‌ ರೈಲುಗಳು/ ಎಂಜಿನ್‌ಗಳು ಈ ಹಳಿಯಲ್ಲಿ ಬಂದರ್‌ನ ಗೂಡ್ಸ್‌ಶೆಡ್‌ಗೆ ಓಡಾಡುತ್ತಿವೆ. ದಿನದಲ್ಲಿ ಕನಿಷ್ಠವೆಂದರೂ ಮೂರು-ನಾಲ್ಕು ಬಾರಿ ಗೂಡ್ಸ್‌ ರೈಲುಗಳು ಸಂಚರಿಸುತ್ತವೆ. ರೈಲು ಸಂಚರಿಸುವ ವೇಳೆ ರಸ್ತೆ ಸಂಚಾರ ನಿಲ್ಲಿಸಲು ಕಬ್ಬಿಣದ ಗೇಟ್‌ ಇಲ್ಲಿ ಮುಚ್ಚಲಾಗುತ್ತದೆ. ಕೆಲವೊಂದು ಬಾರಿ ಗೂಡ್ಸ್‌ರೈಲು ಆಗಮಿಸಿದಾಗ ರೈಲ್ವೇ ಗೇಟ್‌ ಹಾಕುವ ಕಾರಣದಿಂದ ಕನಿಷ್ಠ 15ರಿಂದ 20 ನಿಮಿಷ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಆದರೆ ಸುದೀರ್ಘ‌ ಸಮಯ ರಸ್ತೆಯಲ್ಲಿ ನಿಲ್ಲಲು ತಾಳ್ಮೆ ಕಳೆದುಕೊಳ್ಳುವ ಕೆಲವು ದ್ವಿಚಕ್ರ ಸವಾರರು ರೈಲ್ವೇ ಗೇಟ್‌ನ ಕೆಳಗಡೆಯಿಂದ ತೂರಿ ಕ್ರಾಸಿಂಗ್‌ ಮಾಡುವ ಅಪಾಯಕಾರಿ ಸನ್ನಿವೇಶ ಎದುರಾಗುತ್ತಿದೆ.

ವಾಹನ ಸವಾರರು ಅಪಾಯಕಾರಿಯಾಗಿ ಒಂದು ಗೇಟು ಕಳೆದು ರೈಲ್ವೇ ಹಳಿ ಸಮೀಪಿಸುವ ಸಮಯಕ್ಕೆ ಗೂಡ್ಸ್‌ ರೈಲು ಬಂದರೆ ಅಥವಾ ಕಬ್ಬಿಣದ ತಡೆಬೇಲಿ ಈಗಾಗಲೇ ಸಂಪೂರ್ಣ ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿಯಲ್ಲಿದ್ದು, ಇದರಿಂದ ತೊಂದರೆ ಆಗುವ ಸಾಧ್ಯತೆ ಅಧಿಕ. ಆದರೆ, ಇದಾವುದನ್ನೂ ಪರಿಗಣಿಸದ ದ್ವಿಚಕ್ರ ವಾಹನದವರು ಅಪಾಯಕಾರಿಯಾಗಿಯೇ ಇಲ್ಲಿ
ಸಂಚರಿಸುತ್ತಿದ್ದಾರೆ. ಇದು ಕೂಡ ರೈಲ್ವೇ ಇಲಾಖೆ, ಪಾಲಿಕೆ, ಪೊಲೀಸ್‌ ಇಲಾಖೆಗೆ ತಿಳಿದಿದ್ದರೂ ವಾಹನ ಸವಾರರ ರಕ್ಷಣೆಗೆ ಆದ್ಯತೆ ನೀಡುವ ಗೋಜಿಗೆ ಯಾರೂ ಹೋಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. 

ಎಲ್ಲ ಕಾಂಕ್ರೀಟು; ಮಧ್ಯೆ ಇಕ್ಕಟ್ಟು!
ಪಂಪ್‌ವೆಲ್‌-ತೊಕ್ಕೊಟು ಹೆದ್ದಾರಿ ಸಂಪರ್ಕಿಸಲು ಮಂಗಳೂರಿನಿಂದ ಒಳರಸ್ತೆಯಾಗಿ ಬಹುತೇಕ ವಾಹನ ಸವಾರರು ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಹೀಗಾಗಿ ಹಲವು ವಾಹನಗಳು ಇಲ್ಲಿ ನಿತ್ಯ ಸಂಚಾರ ನಡೆಸುತಿವೆ. ದೇವಸ್ಥಾನ/ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಪ್ರಾಮುಖ್ಯ ಕೇಂದ್ರಗಳಿರುವ ಕಾರಣದಿಂದ ಸಹಜವಾಗಿ ಇಲ್ಲಿ ವಾಹನ ದಟ್ಟಣೆ ಎದುರಾಗುತ್ತದೆ. ಶ್ರೀ ಮಂಗಳಾದೇವಿ ಕ್ಷೇತ್ರದಿಂದ ಫೋರಂಮಾಲ್‌ ಸಮೀಪದ ಎ.ಬಿ. ಶೆಟ್ಟಿ ವೃತ್ತದವರೆಗೆ ಚತುಷ್ಪಥ ರಸ್ತೆ ಆಗಿದ್ದರೂ ಪಾಂಡೇಶ್ವರ ರೈಲ್ವೇ ಕ್ರಾಸಿಂಗ್‌ನ ಎರಡೂ ಬದಿಯನ್ನು ವಿಸ್ತರಿಸಲು ನಡೆಸಲು ಪಾಲಿಕೆಗೆ ಸಾಧ್ಯವಾಗಿಲ್ಲ. ಹೀಗಾಗಿ ಇಲ್ಲಿ ವಾಹನಗಳು ಇಕ್ಕಟ್ಟಿನ ಸ್ಥಿತಿಯಲ್ಲಿ ಸಂಚರಿ ಸಬೇಕಿದೆ. ಇದರ ಜತೆಗೆ ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಸಮಸ್ಯೆ ಕೂಡ ಪ್ರಯಾ ಣಿಕರನ್ನು ಕಾಡುತ್ತಿದೆ. ಇಲ್ಲಿ ರೈಲ್ವೇ ಹಳಿ ಇರುವ ಕಾರಣದಿಂದ ಪಾಲಿಕೆಯಿಂದ ರಸ್ತೆ ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪಾಲಿಕೆ ಹಾಗೂ ರೈಲ್ವೇ ಕೂಡ ಪೂರ್ಣ ಮಟ್ಟದಲ್ಲಿ ಮಾತುಕತೆ ಕೂಡ ನಡೆಸಿಲ್ಲ. ಇಬ್ಬರ ಸಂವಹನ ಕೊರತೆಯಿಂದಾಗಿ ಲೆವೆಲ್‌ ಕ್ರಾಸಿಂಗ್‌ ಜಾಗ ಪ್ರಯಾಣಿಕರಿಗೆ ನಿತ್ಯ ಸಮಸ್ಯೆಯಾಗಿ ಪರಿಣಮಿಸಿದೆ.

ರೈಲ್ವೇ ಲೆವೆಲ್‌ ಕ್ರಾಸಿಂಗ್‌; ರೈಲ್ವೇ ವಾದವೇನು?
ಪಾಂಡೇಶ್ವರ ರೈಲ್ವೇ ಹಳಿಯು ಕೇವಲ ಗೂಡ್ಸ್‌ಶೆಡ್‌ಗೆ ಮಾತ್ರ ಸಂಪರ್ಕ ಕಲ್ಪಿಸುವ ಹಳಿಯಾಗಿದೆ. ಜತೆಗೆ ರೈಲ್ವೇ ಮಂಡಳಿಯ ನಿಯಮ ಪ್ರಕಾರ ರೈಲ್ವೇ ಕ್ರಾಸಿಂಗ್‌ ಇರುವ ಸ್ಥಳದಲ್ಲಿ ತನ್ನ ನಿಗದಿತ ಪ್ರಮಾಣಕ್ಕಿಂತ ಅಧಿಕ ವಾಹನಗಳು ಸಂಚಾರ ನಡೆಸುತ್ತಿದ್ದರೆ, ರೈಲ್ವೇ ಹಾಗೂ ಸ್ಥಳೀಯ ಆಡಳಿತ ಜತೆ ಸೇರಿಕೊಂಡು ಕ್ರಾಸಿಂಗ್‌ ಕೆಲಸವನ್ನು ಮಾಡಲಾಗುತ್ತದೆ. ಸದ್ಯ ಇಂತಹ ವಾತಾವರಣ ಇಲ್ಲ ಎಂಬುದು ಮಾಹಿತಿ. ಮಂಡಳಿಯ ಲೆಕ್ಕಾಚಾರಕ್ಕಿಂತ ಕಡಿಮೆ ವಾಹನ ಸಂಚಾರವಿದ್ದರೆ ಅಲ್ಲಿ ರೈಲ್ವೇ ಒಪ್ಪಿಗೆ ಪಡೆದು ಸ್ಥಳೀಯ ಆಡಳಿತವೇ ಕ್ರಾಸಿಂಗ್‌ ಕಾಮಗಾರಿ ಕೈಗೊಳ್ಳಬೇಕಿದೆ. ಇದೆಲ್ಲದರ ಜತೆಗೆ, ಗೂಡ್ಸ್‌ಶೆಡ್‌ ಅನ್ನು (ಉಳ್ಳಾಲ ಸಮೀಪಕ್ಕೆ) ಸ್ಥಳಾಂತರಿಸುವ ಪ್ರಸ್ತಾವ ಕೂಡ ಒಂದೊಮ್ಮೆ ಕೇಳಿಬರುತ್ತಿತ್ತು. ಈ ಕಾರಣಕ್ಕಾಗಿ ಬಹುದೊಡ್ಡ ಮೊತ್ತ ಭರಿಸಿ ಇಲ್ಲಿ ಕ್ರಾಸಿಂಗ್‌ ಸುಧಾರಣೆ ಮಾಡುವ ಅಗತ್ಯವಿಲ್ಲ ಎಂಬ ಕಾರಣ ನೀಡಿ ರೈಲ್ವೇ ಇಲಾಖೆಯೂ ಹಿಂದೇಟು ಹಾಕುತ್ತಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

Advertisement

ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ
ಪಾಂಡೇಶ್ವರ ರೈಲ್ವೇ ಕ್ರಾಸಿಂಗ್‌ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ಇಲ್ಲಿ ಸಮಸ್ಯೆ ನಿವಾರಣೆಗೆ ಏನು ಮಾಡಬೇಕು ಎಂಬುದನ್ನು ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುದನ್ನು ರೈಲ್ವೇ ಹಾಗೂ ಪೊಲೀಸ್‌ ಅಧಿಕಾರಿಗಳ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
 -  ಮೊಹಮ್ಮದ್‌ ನಝೀರ್‌,
     ಆಯುಕ್ತರು ಮನಪಾ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next