Advertisement

ರೈಲ್ವೇ ಗೇಟ್‌ನಲ್ಲಿ  ಬೈಕ್‌ ಸವಾರರ ಚಕಮಕಿ..! ಮಕ್ಕಳಿಂದ ಬ್ರೇಕ್‌

11:29 AM May 17, 2018 | Team Udayavani |

‌ಹಳೆಯಂಗಡಿ: ಬೈಕ್‌ ನಲ್ಲಿ ಬಂದ ಸವಾರರಿಬ್ಬರು ಹಾಕಿದ ರೈಲ್ವೇ ಕ್ರಾಸಿಂಗ್‌ನ ಎಲ್‌.ಸಿ. ಗೇಟನ್ನು ತೆಗೆಯಲು ಆಗ್ರಹಿಸಿದರು..! ನನಗೆ ಮೀಟಿಂಗ್‌ ಇದೆ ಅರ್ಜೆಂಟ್‌ ಹೋಗಬೇಕು ತೆಗೆಯಿರಿ ಎಂದು ಬೊಬ್ಬೆ ಹಾಕಿ, ಬೈಕ್‌ನ್ನು ಹಾಕಿದ ಗೇಟ್‌ನ ಕೆಳಗೆ ತೂರಿಸಲು ಮುಂದಾದಾಗ ಗೇಟ್‌ ಸವಾರನ ತಲೆ ಮೇಲೆ ಬಿತ್ತು..! ಇವೆಲ್ಲವನ್ನೂ ಶಾಂತಚಿತ್ತರಾಗಿ ನೋಡುತ್ತಿದ್ದ ಶಾಲಾ ಮಕ್ಕಳು ಬೈಕ್‌ ಸವಾರರಿಗೆ ರೈಲ್ವೇ ಗೇಟ್‌ನಿಂದ ಆಗುವ ಅನಾಹುತವನ್ನು ತಿಳಿಹೇಳಿ ಸಮಾಧಾ ನಿಸಿದ ಘಟನೆ ಬುಧವಾರ ಇಂದಿರಾ ನಗರದ ರೈಲ್ವೇ ಗೇಟ್‌ನಲ್ಲಿ ನಡೆಯಿತು.

Advertisement

ರೈಲ್ವೇ ಕ್ರಾಸಿಂಗ್‌ ಜಾಗೃತಿ
ಇದು ದೇಶದೆಲ್ಲೆಡೆ ನಡೆಸುತ್ತಿರುವ ರೈಲ್ವೇ ಕ್ರಾಸಿಂಗ್‌ ಜಾಗೃತಿ ಅಭಿಯಾನದ ಪ್ರಾತ್ಯಕ್ಷಿಕೆ, ಜಿಲ್ಲೆಯ ಕೊಂಕಣ ರೈಲ್ವೇ ಕಾರ್ಪೊರೇಶನ್‌ ಸಂಸ್ಥೆಯು ಮೇ 15ರಿಂದ ಜೂ.16ರ ವರೆಗೆ ಹಮ್ಮಿಕೊಂಡಿದೆ. ಮಂಗಳೂರು ಪ್ರಾದೇಶಿಕ ಸಂಚಾರದ ಪ್ರಬಂಧಕ ಎಸ್‌. ವಿನಯ ಕುಮಾರ್‌ ನೇತೃತ್ವದಲ್ಲಿ ಕಮರ್ಷಿಯಲ್‌ ಸೂಪರ್‌ವೈಸರ್‌ ನಾಗಪತಿ ಹೆಗ್ಡೆ ಹಾಗೂ ಮಧುಕುಮಾರ್‌ ಶೆಟ್ಟಿ ಅವರು ಸಿಬಂದಿಗಳೊಂದಿಗೆ ರೈಲ್ವೇ ಕ್ರಾಸಿಂಗ್‌ನಲ್ಲಿ ಯಾವ ರೀತಿಯಲ್ಲಿ ಜನರು ಉದ್ವೇಗದಿಂದ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ವಿವಿಧ ದೃಶ್ಯ ರೂಪಕದ
ಮೂಲಕ ಪ್ರದರ್ಶಿಸಿದರು.

ಸುರತ್ಕಲ್‌ನ ಎಂಆರ್‌ಪಿಎಲ್‌ ಡೆಲ್ಲಿ ಪಬ್ಲಿಕ್‌ ಸ್ಕೂಲ್‌, ಕೇಂದ್ರೀಯ ವಿದ್ಯಾಲಯ ಎಕ್ಕೂರು ಹಾಗೂ ಪುತ್ತೂರು ಫಿಲೋಮಿನಾ ಶಾಲೆಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಘಟಕದ ಮಕ್ಕಳು ಶಿಕ್ಷಕ ಪಿ.ಜಿ. ವೆಂಕಟ್ರಾವ್‌ ಅವರ ಮಾರ್ಗದರ್ಶನದಲ್ಲಿ ಕರಪತ್ರದ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು.  

ಗಲಾಟೆ ಏನೆಂದು ಓಡಿ ಬಂದೆ 
ರೈಲ್ವೇ ಕ್ರಾಸಿಂಗ್‌ನಲ್ಲಿ ಗಲಾಟೆ ನಡೆಯುತ್ತಿದೆ ಎಂದು ಮನೆಯವರು ತಿಳಿಸಿದ ತತ್‌ಕ್ಷಣ ನಾನು ಓಡಿ ಬಂದೆ. ಇಲ್ಲಿ ಬಂದು ನೋಡುವಾಗ ಇವೆಲ್ಲಾ ನಮಗೆ ಜಾಗೃತಿ ಮೂಡಿಸುವ ನಾಟಕ ಎಂದು ಗೊತ್ತಾಯಿತು. ಇಂತಹ ಜಾಗೃತಿ ಒಳ್ಳೆಯದೆ ಇಲಾಖೆ ಸ್ಪಂದಿಸುವಾಗ ನಾವು ಸಹಕರಿಸಬೇಕು.
-ಜಯಶೀಲ ಕೋಟ್ಯಾನ್‌
 ಸ್ಥಳೀಯ ನಿವಾಸಿ

ಉತ್ತಮ ಸೇವೆ
ಜನರಿಗೆ ಉತ್ತಮ ಸೇವೆ ಸಲ್ಲಿಸಲು ರೈಲ್ವೇ ಇಲಾಖೆಗೆ ಜನರು ಮುಕ್ತವಾಗಿ ಸಹಾಯ ಮಾಡಿದಲ್ಲಿ ಮಾತ್ರ ಸೇವೆಯ ಕರ್ತವ್ಯ ನಿರ್ವಹಿಸಲು ಸಾಧ್ಯ. ಈ ರೀತಿಯ ಜಾಗೃತಿ ಅಭಿಯಾನವನ್ನು ಒಂದು ತಿಂಗಳಲ್ಲಿ ಹಮ್ಮಿಕೊಂಡಿದ್ದು ಕೊಂಕಣ ರೈಲ್ವೆಯ 92 ರೈಲ್ವೇ ಗೇಟಿನಲ್ಲಿ ಈ ಅಭಿಯಾನ ನಡೆಯಲಿದೆ. 
– ಕೆ. ಸುಧಾ ಕೃಷ್ಣಮೂರ್ತಿ
ಸಾರ್ವಜನಿಕ ಸಂಪರ್ಕಾಧಿಕಾರಿ,
ಕೊಂಕಣ್‌ ರೈಲ್ವೇ ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next