ಬೆಂಗಳೂರು: ನೈಋತ್ಯ ರೈಲ್ವೇ ಬೆಂಗಳೂರು ವಿಭಾಗ ಪ್ರಾಯೋಗಿಕವಾಗಿ ತಿಂಗಳ ಹಿಂದೆ ಪ್ರಾರಂಭಿಸಲಾದ ಕ್ಯೂಆರ್ ಕೋಡ್ ಆಧಾರಿತ ಯುಪಿಐ ಸೇವೆಗೆ ನಿಧಾನವಾಗಿ ಪ್ರಯಾಣಿಕರು ಸ್ಪಂದಿಸುತ್ತಿದ್ದಾರೆ.
ಪ್ರಯಾಣಿಕರು ನಾನ್ ಎಸಿ ಸ್ಲೀಪರ್, ಎಸಿ ಸ್ಲಿಪರ್, ಐಷಾರಾಮಿ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಕಾಯ್ದಿ ರಿಸಿ, ಅಲ್ಲಿಯೇ ಡಿಜಿಟಲ್ ಹಣ ಪಾವತಿಸಬಹುದಾಗಿತ್ತು. ಆದರೆ ಇದು ಸಾಮಾನ್ಯ ಟಿಕೆಟ್ ಖರೀದಿಸುವ ಪ್ರಯಾ ಣಿಕರಿಗೆ ಅನ್ವಯಿಸುತ್ತಿರಲಿಲ್ಲ. ಇದರಿಂದಾಗಿ ಪ್ರಯಾಣಿಕರು ಟಿಕೆಟ್ ಖರೀದಿಸುವಾಗ ಚಿಲ್ಲರೆ ಸಮಸ್ಯೆ ಎದುರಾಗುತ್ತಿತ್ತು. ಜತೆಗೆ ಹಿಂದೆ ಟಿಕೆಟ್ ಖರೀದಿಗೆ ನಗದು, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳ ಮೂಲಕ ಪಾವತಿಗೆ ಅವಕಾಶ ನೀಡಲಾಗಿತ್ತು. ಇವುಗಳಿಂದ ಪಾವತಿ ಸ್ವೀಕಾರ ಪ್ರಕ್ರಿಯೆಗಳು ವಿಳಂಬವಾಗುತ್ತಿತ್ತು.
3 ಕೌಂಟರ್: ಭಾರತೀಯ ರೈಲ್ವೇಯು ದೇಶದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್)ರೈಲ್ವೇ ನಿಲ್ದಾಣದಲ್ಲಿ ಕ್ಯೂಆರ್‌ಕೋಡ್ ಆಧಾರಿತ ನಗದು ಪಾವತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಪ್ರಸ್ತುತ ಕೆಎಸ್‌ಆರ್‌ನಲ್ಲಿ 2 ಹಾಗೂ ಕಂಟೋನ್ಮೆಂಟ್ ರೈಲು ನಿಲ್ದಾಣ (ದಂಡು) 1 ಡಿಜಿಟಲ್ ಪೇಮೆಂಟ್ ಕೌಂಟರ್ ತೆರೆಯಲಾಗಿದೆ. ಮುಂದಿನ ದಿನದಲ್ಲಿ ಬೆಂಗಳೂರಿನ ಎಲ್ಲ ರೈಲ್ವ ನಿಲ್ದಾಣಗಳಿಗೂ ವಿಸ್ತರಿಸುವ ಚಿಂತನೆ ಇದೆ.
ನಿತ್ಯ 200 ಟಿಕೆಟ್ ಖರೀದಿ: ಪ್ರತಿದಿನ ಸರಾಸರಿ 200 ಮಂದಿ ಕೌಂಟರ್‌ನಲ್ಲಿ ಡಿಜಿಟಲ್ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುತ್ತಿದ್ದಾರೆ. ಪ್ರಯಾಣಿಕರು ಟಿಕೆಟ್ ಕೌಂಟರ್‌ನಲ್ಲಿ ಹೋಗಬೇಕಾದ ಸ್ಥಳಗಳ ಮಾಹಿತಿ ನೀಡಿದರೆ ಟಿಕೆಟ್ ಇಶ್ಯೂ ಮಾಡಲಾಗುತ್ತದೆ. ಸ್ಕ್ರೀನ್‌ನಲ್ಲಿ ಕಾಣಿಸುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಬೇಕು. ಪ್ರಯಾಣಿಕರು ಗೂಗಲ್ ಪೇ, ಫೋನ್ ಪೇ, ಭೀಮ್ ಆಪ್ ಸೇರಿದಂತೆ ಯುಪಿಐ ಆಧಾರಿತ ಎಲ್ಲ ಡಿಜಿಟಲ್ ವ್ಯವಸ್ಥೆಯಿಂದ ನಿಗದಿತ ಡಿಜಿಟಲ್ ಕೌಂಟರ್‌ನಲ್ಲಿ ಹಣ ಪಾವತಿಸಬಹುದಾಗಿದೆ.
ಪ್ರತಿದಿನ ಕಂಟೊನ್ಮೆಂಟ್ ರೈಲ್ವೇ ನಿಲ್ದಾಣ ಹಾಗೂ ಕೆಎಸ್‌ಆರ್‌ನಲ್ಲಿ ಡಿಜಿಟಲ್ ಮೂಲಕ ಟಿಕೆಟ್ ಖರೀದಿಸುವ ವ್ಯವಸ್ಥೆಯಿದ್ದರೂ, ಅನೇಕರಿಗೆ ಮಾಹಿತಿ ಕೊರತೆಯಿಂದಾಗಿ ಇನ್ನೂ ನಗದು ಪಾವತಿಸಿ ಖರೀದಿಸುವ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಲು ಮುಂದಾಗುತ್ತಿದ್ದಾರೆ. ಕೆಲವೊಮ್ಮೆ ರೈಲ್ವೇ ಸಿಬ್ಬಂದಿಗಳೇ ಡಿಜಿಟಲ್ ಕೌಂಟರ್‌ಗೆ ತೆರಳಿ ಟಿಕೆಟ್ ಖರೀದಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು ನೈಋತ್ಯ ರೈಲ್ವ ವಿಭಾಗದ ಕೆಎಸ್‌ಆರ್ ಹಾಗೂ ಕಂಟೋನ್ಮೆಂಟ್ ನಿಲ್ದಾಣದಲ್ಲಿ ಒಟ್ಟು ಮೂರು ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಯುಪಿಐ ಪಾವತಿ ಕೌಂಟರ್‌ಗಳನ್ನು ತೆರೆಯಲಾಗಿದೆ. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
-ತ್ರಿನೇತ್ರ, ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ ವಿಭಾಗ.
ಕೆಎಸ್‌ಆರ್ ರೈಲ್ವೇ ನಿಲ್ದಾಣದಲ್ಲಿ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪಾವತಿಗೆ ಅವಕಾಶ ಕಲ್ಪಿಸಿರುವುದರಿಂದ ಚಿಲ್ಲರೆ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಜತೆಗೆ ಇದು ಪ್ರಯಾಣಿಕರಿಗೆ ಕಾಲ ವಿಳಂಬವಿಲ್ಲದೇ ಟಿಕೆಟ್ ಪಡೆಯಲು ಸಹಕಾರಿಯಾಗಿದೆ.
-ರೂಪಾ ನಾಗರಾಜ್, ಪ್ರಯಾಣಿಕರು