Advertisement

Udupi; ಜಾನುವಾರುಗಳ ಲಸಿಕೆ ಅಭಿಯಾನ ಖಾತ್ರಿಗೆ “ಭಾರತ್‌ ಪಶುಧನ್‌’ ಆ್ಯಪ್‌

12:59 AM Apr 22, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ಜಾನುವಾರುಗಳ ಕಾಲುಬಾಯಿ ರೋಗ ನಿರೋಧಕ ಲಸಿಕೆ ಅಭಿಯಾನ ನಡೆಯುತ್ತಿದ್ದು, ಈ ಬಾರಿ ಲಸಿಕೆ ಅಭಿಯಾನಕ್ಕೆ ಹೊಸದಾಗಿ ಭಾರತ್‌ ಪಶುಧನ್‌ ಆ್ಯಪ್‌ ಪರಿಚಯಿಸಲಾಗಿದೆ.

Advertisement

ಆ್ಯಪ್‌ ಆಧಾರಿತವಾಗಿ ನಡೆಯುತ್ತಿರುವ ಲಸಿಕೆ ಅಭಿಯಾನ ವನ್ನು ಮತ್ತಷ್ಟು ವೈಜ್ಞಾನಿಕ ವಾಗಿ, ವ್ಯವಸ್ಥಿತವಾಗಿ ನಡೆಸಲು ಇಲಾಖೆಯಿಂದ ಮುತುವರ್ಜಿ ವಹಿಸಲಾಗಿದೆ. ಇದರಿಂದ ಜಾನುವಾರುಗಳು ಲಸಿಕೆ ಪಡೆದ ಖಾತ್ರಿ ಜತೆಗೆ ಜಾನುವಾರುಗಳ ಆರೋಗ್ಯ ಮಾಹಿತಿ ದತ್ತಾಂಶ ಒಂದೆಡೇ ಶೇಖರಣೆಯಾಗಲಿದೆ. ಲಸಿಕೆ ನೀಡಲು ತೆರಳುವ ಸಿಬಂದಿ, ಜಾನುವಾರುಗಳ ಮಾಲಕರ ಹೆಸರು, ವಿಳಾಸ, ಜಾನುವಾರು ಆರೋಗ್ಯದ ಸ್ಥಿತಿಗತಿ, ಅದಕ್ಕೆ ಲಸಿಕೆ ನೀಡುವುದು ಅಥವಾ ಲಸಿಕೆ ನೀಡದಿರುವ ಕಾರಣ ಸಹಿತ ಸಮಗ್ರ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.

ಆರೇಳು ತಿಂಗಳ ಹಿಂದೆ ಜಾನುವಾರುಗಳ ಕಾಲುಬಾಯಿ ರೋಗ ಲಸಿಕೆ ಅಭಿಯಾನ ಪೂರ್ಣಗೊಂಡಿದ್ದು, ಇದೀಗ ಎರಡನೇ ಹಂತದ ಅಭಿಯಾನ ನಡೆಯುತ್ತಿದೆ. ಈ ಹಿಂದೆ ಅಭಿಯಾನಗಳಲ್ಲಿ ಜಾನುವಾರುಗಳಿಗೆ ಲಸಿಕೆ ನೀಡಿದ್ದರೂ ದಾಖಲೆಗಳ ಡಿಜಿಟಲೀಕರಣ ಸಮರ್ಪಕ ವಾಗಿರಲಿಲ್ಲ. ಈಗ ಪಶುಧನ್‌ ಆ್ಯಪ್‌ನಲ್ಲಿಯೇ ಜಾನುವಾರುಗಳ ಸಮಗ್ರ ಮಾಹಿತಿ ಸಂಗ್ರಹವಾಗಲಿದೆ. ಜಿಲ್ಲೆಯ 7 ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಜಾನುವಾರು ಇರುವ ಮನೆಗಳಿಗೆ ತೆರಳಿ ಲಸಿಕೆ ನೀಡುವ ಕಾರ್ಯದಲ್ಲಿ ಪಶು ವೈದ್ಯಕೀಯ ಸಿಬಂದಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಪಶುಸಖೀಯರು ಸಹಕಾರ ನೀಡುತ್ತಿದ್ದಾರೆ.

ಆ್ಯಪ್‌ನ ಅನುಕೂಲಗಳೇನು ?: ಹೊಸ
ಆ್ಯಪ್‌ನಲ್ಲಿ ಸಮಗ್ರ ಮಾಹಿತಿ ದಾಖಲಿಸಿರು ವುದರಿಂದ ಸಾಕಷ್ಟು ಅನುಕೂಲಗಳಿದ್ದು, ಜಾನುವಾರಿಗೆ ಯಾವ ಲಸಿಕೆ
ಗಳನ್ನು ನೀಡಲಾಗಿದೆ. ಆರೋಗ್ಯ ಸ್ಥಿತಿ, ಹಾಲು ನೀಡುವ ಜಾನುವಾರು ಗಳ ಸಂಖ್ಯೆ, ಅನುತ್ಪಾದಕ ರಾಸುಗಳ ಸಂಖ್ಯೆ ಹೀಗೆ ಹಲವಾರು ಅಂಶಗಳು ಆ್ಯಪ್‌ನಲ್ಲಿ ಸಂಗ್ರಹ ವಿರುತ್ತದೆ. ಜಾನುವಾರುಗಳಿಗೆ ಹೊಸ ಯೋಜನೆ, ಆಯವ್ಯಯ ರೂಪಿಸುವ ಸಂದರ್ಭ ಈ ಬಗೆಯ ದತ್ತಾಂಶ ಅನುಕೂಲವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಾಲುಬಾಯಿ ರೋಗಕ್ಕೆ ಲಸಿಕೆ ಅಭಿಯಾನ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಪಶುಧನ್‌ ಆ್ಯಪ್‌ನಲ್ಲಿ ಎಲ್ಲ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನೂರಾರು ಮಂದಿ ವೈದ್ಯರು, ಸಿಬಂದಿ ತಂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
– ಡಾ| ರೆಡ್ಡಪ್ಪ,
ಉಪ ನಿರ್ದೇಶಕರು, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next