ದಾವಣಗೆರೆ: ಅಶೋಕ ಚಿತ್ರಮಂದಿರದ ಬಳಿಯ ರೈಲ್ವೆ ಗೇಟ್‌ನಿಂದಾಗಿ ಸಾರ್ವಜನಿಕರು ಹಾಗೂ ವಾಹನ ಚಾಲಕರು ಪ್ರತಿದಿನ ಅನುಭವಿಸುತ್ತಿರುವ ಸಮಸ್ಯೆಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹೊಸ ಪರಿಹಾರ ಸೂತ್ರ ಮುಂದಿಟ್ಟಿದ್ದಾರೆ. ಆ ಜಾಗದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ತಾಂತ್ರಿಕ ಅಡಚಣೆ ಹಿನ್ನೆಲೆಯಲ್ಲಿ ಪರ್ಯಾಯ ಪರಿಹಾರ ಯೋಜನೆ ಅನಿವಾರ್ಯವಾಗಿದ್ದು, ಅದರ ಅನ್ವಯ ಪರ್ಯಾಯ ರಸ್ತೆ, ಸಣ್ಣ ಅಂಡರ್ ಪಾಸ್ ನಿರ್ಮಾಣ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮೇಲ್ಸೇತುವೆ ನಿರ್ಮಾಣಕ್ಕೆ ಜೆಡಿಎಸ್ ಯುವ ಘಟಕದ ಕಾರ್ಯಕರ್ತರು ಸತತ 14 ದಿನಗಳಿಂದ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ರಮೇಶ್‌ರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಧರಣಿನಿರತರೊಂದಿಗೆ ಮಾತುಕತೆ ನಡೆಸಿದರು.
ಅಶೋಕ ಚಿತ್ರಮಂದಿರ ಭಾಗದಿಂದ ಈರುಳ್ಳಿ ಮಾರುಕಟ್ಟೆ ಅಂಡರ್ ಪಾಸ್ ಕಡೆ ಹೋಗಲು ರಸ್ತೆ ನಿರ್ಮಾಣದ ಜೊತೆಗೆ ಪದ್ಮಾಂಜಲಿ ಚಿತ್ರಮಂದಿರ ಮುಂಭಾಗದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವ ಕುರಿತು ಚಿಂತನೆ ನಡೆಯುತ್ತಿದೆ ಎಂದರು. ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ತಾಂತ್ರಿಕ ತೊಂದರೆ ಇದೆ. ರೈಲ್ವೆ ಇಲಾಖೆ ಒದಗಿಸಿರುವ ನೀಲಿ ನಕಾಶೆಯಂತೆ ಮೇಲ್ಸೇತುವೆ ನಿರ್ಮಿಸುವುದರಿಂದ ಕೆಲ ತೊಂದರೆ ಆಗುತ್ತವೆ. ಇದನ್ನು ಮನಗಂಡು ಪರ್ಯಾಯ ವ್ಯವಸ್ಥೆಗೆ ಚಿಂತಿಸಲಾಗುತ್ತಿದೆ.
ಪುಷ್ಪಾಂಜಲಿ, ಪದ್ಮಾಂಜಲಿ ಚಿತ್ರಮಂದಿರ ರಸ್ತೆಯು ರೈಲ್ವೆ ಹಳಿಗೆ ಸಮನಾಂತರವಾಗಿ ಇದೆ. ಇದೇ ರೀತಿ ಉತ್ತರ ಭಾಗದಲ್ಲೊಂದು ಸಮನಾಂತರ ರಸ್ತೆ ನಿರ್ಮಿಸಿದರೆ ಸಮಸ್ಯೆ ಪರಿಹಾರ ಆಗಲಿದೆ. ಇನ್ನು ಕಾರ್, ಬೈಕ್ ಮುಂತಾದ ಸಣ್ಣ ವಾಹನಗಳ ಸಂಚಾರಕ್ಕೆ ಪದ್ಮಾಂಜಲಿ ಚಿತ್ರಮಂದಿರ ಮುಂಭಾಗ ಸಣ್ಣದೊಂದು ಅಂಡರ್ ಪಾಸ್ ನಿರ್ಮಾಣ ಮಾಡುವ ಆಲೋಚನೆ ಇದೆ ಎಂದು ಅವರು ಧರಣಿನಿರತರಿಗೆ ತಿಳಿಸಿದರು.
ಅಶೋಕ ಚಿತ್ರಮಂದಿರ ರೈಲ್ವೆ ಗೇಟ್‌ನ ರಸ್ತೆ ಮೂಲಕ ಎಪಿಎಂಸಿಗೆ ಲಾರಿಗಳು ತೆರಳುತ್ತವೆ. ಒಂದು ವೇಳೆ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಲಾರಿಗಳ ಸಂಚಾರಕ್ಕೂ ಸಮಸ್ಯೆ ಆಗಬಹುದು. ಅದಲ್ಲದೆ, ತಾಂತ್ರಿಕವಾಗಿ ಸುಸಜ್ಜಿತ ಮೇಲ್ಸೇತುವೆ ನಿರ್ಮಾಣಕ್ಕೆ ಲಭ್ಯ ಇರುವ ಜಾಗ ಸಾಕಾಗುವುದಿಲ್ಲ. ಮುಂದೆ ವಿಸ್ತೃತ ವರದಿ ತಯಾರಿಸಿ, ಹೆಚ್ಚಿನ ಅನುದಾನ ಪಡೆದು ಹೊಸ ಮೇಲ್ಸೇತುವೆ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಅಂಡರ್ ಪಾಸ್, ಸಮನಾಂತರ ರಸ್ತೆ ನಿರ್ಮಾಣಕ್ಕೆ ತಕ್ಷಣ ಕಾರ್ಯ ಯೋಜನೆ ರೂಪಿಸಿ, ಬಂದ ಅನುದಾನದಲ್ಲೇ ಈ ಕಾಮಗಾರಿ ಕೈಗೊಳ್ಳಲುಬೇಕಾದ ಕ್ರಮ ವಹಿಸಲಾಗುವುದು. ಇದಕ್ಕೆ ಸಂಬಂಧಪಟ್ಟ ನೀಲ ನಕಾಶೆ, ಕಾರ್ಯ ಯೋಜನೆ ಸಿದ್ಧಪಡಿಸುವಂತೆ ತಮ್ಮ ಜತೆಯಲ್ಲಿದ್ದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ್‌ರಿಗೆ ಅವರು ಸೂಚಿಸಿದರು.
ಧರಣಿ ನೇತೃತ್ವವಹಿಸಿರುವ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಜೆ. ಅಮಾನುಲ್ಲಾ ಖಾನ್, ರೈಲು ಸಂಚರಿಸುವಾಗ ವಾಹನ ಸವಾರರು ಸುಡು ಬಿಸಿಲಲ್ಲಿ ಇಂದು ತಾಸುಗಟ್ಟಲೆ ವಾಹನ ನಿಲ್ಲಿಸಿಕೊಂಡು ನಿಲ್ಲುವಂತಹ ಸ್ಥಿತಿ ಇದೆ. ದಿನಕ್ಕೆ ಸುಮಾರು 40 ಬಾರಿ ಇದೇ ಸ್ಥಿತಿ ಇರುತ್ತದೆ. ಜಿಲ್ಲಾಡಳಿತ ಇದನ್ನು ಮನಗಾಣಬೇಕು. ಸರ್ಕಾರ ಅನುದಾನ ಕೊಟ್ಟು ಮೂರು ವರ್ಷ ಕಳೆದರೂ ಕಾಮಗಾರಿ ಕೈಗೊಳ್ಳದೇ ಇರುವುದು ಸಮಂಜಸವಲ್ಲ ಎಂದು ಸಮಸ್ಯೆ ಕುರಿತು ವಿವರಿಸಿದರು.
ಯೋಜಿತ ಮೇಲ್ಸೇತುವೆ ನಿರ್ಮಾಣ ಸಾಧ್ಯವಿಲ್ಲ ಎನ್ನುವುದಾದರೆ ಅದಕ್ಕೊಂದು ಪರ್ಯಾಯ ಯೋಜನೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಿ ಪಡೆದುಕೊಳ್ಳಿ. ಇದಕ್ಕೂ ಸಹ ಅವಕಾಶ ಇದೆ. ಆದರೆ, ಯಾವುದೇ ಕಾರಣಕ್ಕೂ ರೈಲ್ವೆ ಗೇಟ್ ಸಮಸ್ಯೆ ಪರಿಹಾರಕ್ಕೆ ವಿಳಂಬ ನೀತಿ ಅನುಸರಿಸಬಾರದು ಎಂದು ಅವರು ಆಗ್ರಹಿಸಿದರು. ಟಿ. ಅಸರ್, ದಾದಾಪೀರ್, ಎ. ಶ್ರೀನಿವಾಸ್, ಖಾದರ್ ಬಾಷ, ಮೊಹಮದ್ ಗೌಸ್, ಧರಣಿನಿರತ ಕಾರ್ಯಕರ್ತರು ಹಾಜರಿದ್ದರು.