ನಂಜನಗೂಡು: ತಾಲೂಕಿನ ಕೋಡಿನರಸೀಪುರದ ಮುಖ್ಯರಸ್ತೆಯನ್ನು ಮುಚ್ಚುವ ರೈಲ್ವೆ ಅಧಿಕಾರಿಗಳ ಅವೈಜ್ಞಾನಿಕ ಕ್ರಮಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ಮುಖ್ಯರಸ್ತೆ ಹಾಗೂ ಹೊಸದಾಗಿ ನಿರ್ಮಾಣ ಮಾಡಿರುವ ಮೇಲ್ಸೇತುವೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ಅವರು ಗ್ರಾಮಸ್ಥರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥರು, ಗ್ರಾಮದ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ರೈಲ್ವೆ ಮಾರ್ಗದಲ್ಲಿ ಮಾನವ ಸಹಿತ ಗೇಟ್ ನಿರ್ಮಿಸದೇ ಅಧಿಕಾರಿಗಳು ಲೋಪ ಎಸಗಿದ್ದಾರೆ.
ವಾಹನ ಸಂಚಾರವೇ ಇಲ್ಲದ ತಗಡೂರು ರಾಮಚಂದ್ರ ರಾವ್ ನಾಲೆಯ ಏರಿಯಲ್ಲಿ ಮಾನವ ಸಹಿತ ಗೇಟ್ ನಿರ್ಮಿಸಿದ್ದಾರೆ. ನಾಲೆಯ ಏರಿಗೆ ಮೇಲ್ಸೇತುವೆ ನಿರ್ಮಿಸಿದ್ದು, ಈ ಸೇತುವೆ ಮಾರ್ಗ ಗ್ರಾಮ ಸಂಪರ್ಕಕ್ಕೆ ಯೋಗ್ಯವಲ್ಲ ಎಂಬ ಅರಿವಿದ್ದರೂ ತಮ್ಮ ತಪ್ಪು ಮುಚ್ಚಿಕೊಳ್ಳಲು ಹಾಲಿ ರಸ್ತೆಯನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆ. ಇದನ್ನು ನಾವು ಒಪ್ಪುವುದಿಲ್ಲ. ಗ್ರಾಮಸ್ಥರನ್ನು ದಾರಿ ತಪ್ಪಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅವೈಜ್ಞಾನಿಕ: ರೈಲ್ವೆ ಅಧಿಕಾರಿಗಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ರೂಪಿಸಿರುವ ಮಾರ್ಗವು ಸಂಪೂರ್ಣ ಅವೈಜ್ಞಾನಿಕವಾಗಿದೆ. ಹಾಲಿ ಮಾರ್ಗದ ಹೊರತಾಗಿ ಬೇರೆ ಮಾರ್ಗ ಈ ಗ್ರಾಮಕ್ಕೆ ಇಲ್ಲ. ಹೀಗಾಗಿ ಹಾಲಿ ರಸ್ತೆಗೆ ಮಾನವ ಸಹಿತ ಗೇಟ್ ನಿರ್ಮಾಣ ಮಾಡುವುದು ಸೂಕ್ತ ಎಂದು ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಸಂಸದ ಆರ್.ಧ್ರುವನಾರಾಯಣ ಕೂಡ ರಸ್ತೆ ಉಳಿಸಿಕೊಡುವ ನಿಟ್ಟಿನಲ್ಲಿ ಸ್ಪಂದಿಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ರಸ್ತೆ ಮುಚ್ಚಲು ಗ್ರಾಮಸ್ಥರು ಅವಕಾಶ ನೀಡುವುದಿಲ್ಲ. ಒಂದು ವೇಳೆ ರೈಲ್ವೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭರವಸೆ: ಈ ಕುರಿತು ಪ್ರತಿಕ್ರಿಯಿಸಿದ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗ್, ಗ್ರಾಮಸ್ಥರಿಗೆ ನೆರವಾಗುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ರೈಲ್ವೆ ವಿಭಾಗೀಯ ಎಂಜಿನಿಯರ್ ಆನಂದ್ ಭಾರತಿ, ಎಇಇ ಆನಂದ್ ಬೆನ್ನೂರು, ಆರ್‌ಪಿಎಫ್ ಇನ್ಸ್‌ಪೆಕ್ಟರ್ ಶಿವರಾಜು, ಗ್ರಾಮದ ಮುಖಂಡರಾದ ಮಹದೇವಮೂರ್ತಿ, ಕೆ.ಎಂ.ರಾಮು, ನಾರಾಯಣಮೂರ್ತಿ, ಗುರುಮೂರ್ತಿ, ನಾಗಮ್ಮ, ಉಮೇಶ್, ಮಹೇಂದ್ರ ಇತರರಿದ್ದರು.