Advertisement

ರೈಲ್ವೆ ಎಲೆಕ್ಟ್ರಾನಿಕ್‌ ಪೋಲ್ಸ್‌ ಯೋಜನೆಗೆ ರೈತರ ಆಕ್ರೋಶ

03:56 PM Oct 28, 2022 | Team Udayavani |

ರಾಣಿಬೆನ್ನೂರ: ರೈಲ್ವೆ ಇಲಾಖೆಯವರು ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಎಲೆಕ್ಟ್ರಾನಿಕ್‌ ಪೋಲ್ಸ್‌ ಯೋಜನೆಯನ್ನು 15 ಅಡಿಯಿಂದ 25 ಅಡಿ ಎತ್ತರಕ್ಕೆ ಏರಿಸಬೇಕೆಂದು ಒತ್ತಾಯಿಸಿ, ರೈತರು ಗುರುವಾರ ತಾಲೂಕಿನ ಐರಣಿ ಮಾರ್ಗದ ರೈಲ್ವೆ ಗೇಟ್‌ ನಂ. 211ರ ವಡರಾಯನಹಳ್ಳಿ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ನಂತರ ದಾವಣಗೆರೆ ವಿಭಾಗದ ರೈಲ್ವೆ ಎಲೆಕ್ಟ್ರಿಕಲ್ಸ್‌ನ ಜ್ಯೂನಿಯರ್‌ ಎಂಜಿನಿಯರ್‌ ಹರಿವೀರಸಿಂಗ್‌ ಅವರ ಮುಖಾಂತರ ಡಿವಿಜಿನಲ್‌ ಮ್ಯಾನೇಜರ್‌ ಸೌಥ್‌ ವೆಸ್ಟರ್ನ್ ಮೈಸೂರು ಮತ್ತು ಎಕ್ಸ್‌ ಇಎನ್‌ ಕನ್ಸ್‌ಟ್ರಕ್ಷನ್‌ ದಾವಣಗೆರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ತುಂಗಭದ್ರ ನದಿ ಪ್ರದೇಶದ ಈ ಭಾಗದಲ್ಲಿ ರೈತರು ಕೃಷಿಯನ್ನೇ ಅವಲಂಬಿಸಿದ್ದು, ಕಬ್ಬ ಮತ್ತು ಭತ್ತವನ್ನು ಅತೀ ಹೆಚ್ಚಾಗಿ ಬೆಳೆಯುತ್ತಾರೆ. ಬೆಳೆದ ಮಾಲನ್ನು ಸಕ್ಕರೆ ಕಾರ್ಖಾನೆಗಳಿಗೆ ಮತ್ತು ಮಾರುಕಟ್ಟೆಗಳಿಗೆ ದೊಡ್ಡ ದೊಡ್ಡ ಲಾರಿಗಳಲ್ಲಿ ಸಾಗಿಸುವ ಸಂದರ್ಭದಲ್ಲಿ ರೈಲ್ವೆ ಇಲಾಖೆಯವರು ಅಳವಡಿಸುತ್ತಿರುವ ಈ ಅವೈಜ್ಞಾನಿಕ ಎಲೆಕ್ಟ್ರಿಕಲ್‌ ಪೋಲ್ಸ್‌ ಮತ್ತು ಹೈಟ್‌ ಗೇಜ್‌ನಿಂದ ಅಡೆತಡೆಯಾಗಿ ರೈತರಿಗೆ ಬಹಳಷ್ಟು ಆರ್ಥಿಕ ನಷ್ಟ ಮತ್ತು ಅಧಿಕ ಸಮಯ ವ್ಯರ್ಥವಾಗುತ್ತದೆ. ಕೂಡಲೇ ರೈಲ್ವೆ ಇಲಾಖೆಯವರು ನಿರ್ಮಿಸುತ್ತಿರುವ ಈ ಎಲೆಕ್ಟ್ರಿಕಲ್‌ ಪೋಲ್ಸ್‌ನ ಎತ್ತರವನ್ನು 15 ಅಡಿಯಿಂದ 25 ಅಡಿಗೆ ಏರಿಸಬೇಕೆಂದು ಒತ್ತಾಯಿಸಿದರು.

ರೈಲ್ವೆ ಇಲಾಖೆಯ ತಾಂತ್ರಿಕ ವರ್ಗದವರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ತಯಾರಿಸುವ ಯೋಜನೆಗಳೆಲ್ಲ ಅವೈಜ್ಞಾನಿಕವಾಗಿರುತ್ತವೆ. ಆ ಯೋಜನೆಯ ಜಾರಿಯಿಂದ ಸಾರ್ವಜನಿಕವಾಗಿ ಆಗುವ ತೊಂದರೆಯ ಬಗ್ಗೆ ಮತ್ತು ಅತಿಯಾದ ಸಾರ್ವಜನಿಕರ ವಿರೋಧದಿಂದ ಯೋಜನೆಯನ್ನು ರದ್ದು ಮಾಡಿ ಸಾರ್ವಜನಿಕರ ತೆರಿಗೆ ಹಣ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆಗುವ ಆರ್ಥಿಕ ನಷ್ಟಕ್ಕೆ ಅನೇಕ ಬಾರಿ ರೈಲ್ವೆ ಇಲಾಖೆಯ ತಾಂತ್ರಿಕ ವರ್ಗದ ಮುಖ್ಯಸ್ಥರು ಕಾರಣರಾಗಿದ್ದಾರೆ. ಅಂತಹ ಅಧಿ ಕಾರಿಗಳನ್ನು ಕೂಡಲೇ ಅಮಾನತು ಗೊಳಿಸಬೇಕೆಂದು ಒತ್ತಾಯಿಸಿದರು.

ಇದು ಕೇಂದ್ರ ಸರ್ಕಾರದ ಯೋಜನೆ ಆಗಿರುವುದರಿಂದ ನೂತನ ಜಿಲ್ಲಾ ಧಿಕಾರಿ ರಘುನಂದನ್‌ ಮೂರ್ತಿ ಮತ್ತು ಸಂಸದ ಶಿವಕುಮಾರ ಉದಾಸಿ ಅವರು ಖುದ್ದು ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಭಾಗದ ಸಾವಿರಾರು ರೈತರೊಂದಿಗೆ ಮುಂದಿನ ವಾರ ಉತ್ತರ ಕರ್ನಾಟಕದ ಹೆಬ್ಟಾಗಿಲು ಮಾಕನೂರು ಕ್ರಾಸ್‌ ಹತ್ತಿರ ಹೆದ್ದಾರಿ ತಡೆ ಮಾಡಿ ರೈಲ್ವೆ ಗೇಟ್‌ ನಂ. 211ರ ಬಳಿ ರೈಲು ರೋಖೋ ಚಳವಳಿ ಮಾಡುತ್ತೇವೆಂದು ಎಚ್ಚರಿಸಿದರು. ಅಲ್ಲದೇ, ಈ ಗೇಟ್‌ಗೆ ಮೇಲ್ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿದರು.

Advertisement

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ದಾವಣಗೆರೆ ವಿಭಾಗದ ರೈಲ್ವೆ ಎಲೆಕ್ಟ್ರಿಕಲ್ಸ್ ನ ಜ್ಯೂನಿಯರ್‌ ಎಂಜಿನಿಯರ್‌ ಹರಿವೀರಸಿಂಗ್‌ ಅವರು ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಚಂದ್ರಣ್ಣ ಬೇಡರ, ಬಸವರಾಜಪ್ಪ ವೇಗಳವಾನಿ, ಚಂದ್ರಪ್ಪ ಹಕ್ಕಿ, ನಿಂಗಪ್ಪ ಕಳ್ಳಿಮನಿ, ಚಂದ್ರಪ್ಪ ಬಣಕಾರ, ದೇವೇಂದ್ರಪ್ಪ ಕಟಗಿ, ದಿನೇಶ ಪಾಟೀಲ, ಮರಡೆಪ್ಪ ಚಳಗೇರಿ, ಮಾರುತಿ ಕುರಬರ, ಜಗದೀಶ ಕೋಟೆಗೌಡ್ರ, ಬಸನಗೌಡ ಚನ್ನಗೌಡ್ರ, ಕೊಟ್ರೇಶಪ್ಪ ಚಳಗೇರಿ, ಜಮಾಲಸಾಬ ಶೇತಸನದಿ, ಮಮ್ಮದ ಅಲಿಸಾಬ ದೊಡಮನಿ, ತಿರಕಪ್ಪ ಅಣ್ಣೇರ, ರಾಮಪ್ಪ ಬೆನ್ನೂರು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next