Advertisement
ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿ.ಪಂ. ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ರೈಲ್ವೇ ಇಲಾಖೆಯ ಕುಂದುಕೊರತೆ ಹಾಗೂ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು, ಡಬ್ಲಿಂಗ್ ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲಿಯೇ ಕೆಲಸ ಪ್ರಾರಂಭಗೊಳ್ಳಲಿದೆ. ಸುಮಾರು 38 ಕೋಟಿ ರೂ. ವೆಚ್ಚದ ಈ ಯೋಜನೆ ಇನ್ನೆರಡು ವರ್ಷಗಳಲ್ಲಿ ಪೂರ್ತಿಯಾಗುವ ನಿರೀಕ್ಷೆ ಇದೆ ಎಂದರು. ಇದೇ ವೇಳೆ ಕೊಂಕಣ ರೈಲ್ವೇ ಹಳಿಯ ವಿದ್ಯುದೀಕರಣದ ಬಗ್ಗೆ ವಿವರಿಸಿದ ಅವರು, ಇದಕ್ಕೆ ಸಂಬಂಧಿತ ಕೆಲಸಗಳು ಪ್ರಗತಿಯಲ್ಲಿದ್ದು, 2020ಕ್ಕೆ ಕೊನೆಗೊಳ್ಳಲಿದೆ ಎಂದರು.
ಸಭೆಯಲ್ಲಿ ಪಡೀಲಿನ ರೈಲ್ವೇ ಕೆಳಸೇತುವೆಯಲ್ಲಿ ನೀರು ನಿಂತು ಪ್ರಯಾಣಕ್ಕೆ ತೊಂದರೆಯಾಗುವ ವಿಷಯವೂ ಪ್ರಸ್ತಾವವಾಯಿತು. ಕಂಕನಾಡಿ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ವಿಚಾರದ ಬಗ್ಗೆ ಚರ್ಚೆ ನಡೆಯಿತಾದರೂ ಅಗತ್ಯವಿರುವಷ್ಟು ಜಾಗ ಇಲ್ಲದ ಕಾರಣದಿಂದಾಗಿ ಪ್ರಸ್ತಾವ ನನೆಗುದಿಗೆ ಬಿದ್ದಿರುವುದು ಸ್ಪಷ್ಟವಾಯಿತು. ರೈಲು ಮುಂಬಯಿಗೆ ವಿಸ್ತರಿಸಿ
ಮಂಗಳೂರು – ಮಡ್ಗಾಂವ್ ನಡುವಿನ ರೈಲನ್ನು ಮುಂಬಯಿಗೆ ವಿಸ್ತರಿಸಬೇಕೆಂಬ ಬೇಡಿಕೆ ಕೂಡ ಕೇಳಿ ಬಂತು. ಕಾಸರಗೋಡು- ಬೈಂದೂರು ಪ್ಯಾಸೆಂಜರ್ ರೈಲನ್ನು ಭಟ್ಕಳದವರೆಗೆ ವಿಸ್ತರಿಸಿದರೆ ಪ್ರಯಾಣಿಕರ ಕೊರತೆ ನೀಗಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದೇ ರೀತಿ ಇಂಟರ್‌ಸಿಟಿ ರೈಲನ್ನು ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿ ಮುಂಬಯಿಗೆ ವಿಸ್ತರಿಸಬೇಕು,ಮಂಗಳೂರು-ಕಬಕ ಪುತ್ತೂರು ರೈಲನ್ನು ರಾತ್ರಿ ಸುಬ್ರಹ್ಮಣ್ಯ ಮಾರ್ಗ ವರೆಗೆ ವಿಸ್ತರಿಸಬೇಕು ಎಂದು ರೈಲ್ವೇ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು.
Related Articles
ಸಭೆಯ ಪ್ರಾರಂಭದಲ್ಲಿ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಮಾತನಾಡಿ, ವಿಮಾನ ನಿಲ್ದಾಣದ ರನ್ ವೇ ಆವರಣದ ಗೋಡೆ ಕುಸಿದು ತಗ್ಗುಪ್ರದೇಶದ ಮನೆಗಳಿಗೆ ತೊಂದರೆ ಉಂಟಾದ ಪ್ರಕರಣ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ತಡೆಗೋಡೆ ಕಾಮಗಾರಿ ವೇಳೆ ಚರಂಡಿಗೆ ಅವಕಾಶ ಕಲ್ಪಿಸದಿರುವುದೇ ಇದಕ್ಕೆಲ್ಲ ಕಾರಣ ಎಂದರು. ಬಜಪೆ, ಆದ್ಯಪಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳನ್ನು ಎನ್.ಐ.ಟಿ.ಕೆ ಸೇರಿದಂತೆ ತಾಂತ್ರಿಕ ತಜ್ಞರು ಪರಿಶೀಲಿಸಿ ವರದಿ ನೀಡಬೇಕು ಎಂದು ಸಂಸದ ನಳಿನ್ ಹೇಳಿದರು.
Advertisement
ಮಳೆಹಾನಿಗೆ ಸಂಬಂಧಿಸಿದ ಕಾಮಗಾರಿಗಳಿಗೆ 15 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಿರುವುದಾಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಎಂಜಿನಿಯರ್ ತಿಳಿಸಿದರು. ಎಂ.ಎಸ್.ಇ.ಝಡ್. ಪ್ರದೇಶಗಳಲ್ಲೂ ಮಳೆಹಾನಿಗೆ ಸಂಬಂಧಿಸಿ ವರದಿ ನೀಡಬೇಕೆಂದು ಅವರು ಸೂಚಿಸಿದರು.
ಶಾಸಕರಾದ ಉಮಾನಾಥ ಕೋಟ್ಯಾನ್, ಡಾ| ಭರತ್ ಶೆಟ್ಟಿ, ರಾಜೇಶ್ ನಾಯಕ್ ಉಪಸ್ಥಿತರಿದ್ದರು. ಪಾಲ್ಗಾಟ್ ರೈಲ್ವೇ ವಿಭಾಗೀಯ ಅಧಿಕಾರಿ ಪ್ರತಾಪ್ ಸಿಂಗ್ ಶಮಿ, ಕೊಂಕಣ ರೈಲ್ವೇ ವಿಭಾಗೀಯ ಅಧಿಕಾರಿ ಮಹಮ್ಮದ್ ಸುಲೇಮಾನ್, ಎನ್‌ಐಟಿಕೆ ನಿರ್ದೇಶಕ ಉಮಾಶಂಕರ್ ಹಾಜರಿದ್ದರು.
24 ತಾಸು ಅಟೋರಿಕ್ಷಾ ಪ್ರಿಪೇಯ್ಡ್ ಕೌಂಟರ್ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ರೈಲ್ವೇ ನಿಲ್ದಾಣಗಳಲ್ಲಿ ಅಟೋರಿಕ್ಷಾ ಪ್ರಿಪೇಯ್ಡ್ ಕೌಂಟರ್ ಇದ್ದರೂ ಸರಿಯಾಗಿ ಕೆಲಸ ನಿರ್ವಹಿಸದ ಕುರಿತು ವಿಷಯ ಪ್ರಸ್ತಾವವಾಯಿತು. ನಾಗರಿಕ ಹಿತರಕ್ಷಣ ವೇದಿಕೆಯ ಅಧ್ಯಕ್ಷ ಹನುಮಂತ ಕಾಮತ್ ಮಾತನಾಡಿ, ಹಗಲಿಗಿಂತಲೂ ಹೆಚ್ಚಾಗಿ ಪ್ರಿಪೇಯ್ಡ್ ಆಟೋ ಕೌಂಟರಿನ ಆವಶ್ಯಕತೆ ಇರುವುದು ರಾತ್ರಿ. ಆದರೆ ಆಗ ಈ ವ್ಯವಸ್ಥೆ ಇರುವುದಿಲ್ಲ. ಇದರಿಂದ ಪ್ರಯಾಣಿಕರು ತೊಂದರೆಗೀಡಾಗುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಸದ ನಳಿನ್, ದಿನದ 24 ಗಂಟೆಯೂ ಕೆಲಸ ನಿರ್ವಹಿಸುವಂತಾದರೆ ಮಾತ್ರ ಈ ಪ್ರಿಪೇಯ್ಡ್ ಕೌಂಟರಿನ ಪ್ರಯೋಜನ ಪ್ರಯಾಣಿಕರಿಗೆ ದೊರೆತಂತಾಗುತ್ತದೆ. ಅದಕ್ಕಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು.