Advertisement

ಇಂದು ಮಾರ್ನಮಿಕಟ್ಟೆಯಿಂದ ರೈಲ್ವೇ ಸೇತುವೆ ಸಂಚಾರ ಸ್ಥಗಿತ

10:00 AM Jun 09, 2018 | Team Udayavani |

ಮಹಾನಗರ : ಗುರುವಾರ ಬೆಳಗ್ಗಿನಿಂದ ಸುರಿದ ಭಾರೀ ಮಳೆಗೆ ಮಾರ್ನಮಿಕಟ್ಟೆಯಿಂದ ರೈಲ್ವೇ ಸೇತುವೆ ಮೂಲಕ ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಒಳ ರಸ್ತೆಯಲ್ಲಿ ನೀರು ನಿಂತಿದ್ದು, ತುರ್ತು ಕಾಮಗಾರಿ ಸಲುವಾಗಿ ಶುಕ್ರವಾರ ರಾತ್ರಿಯಿಂದ ಶನಿವಾರ ರಾತ್ರಿವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ.

Advertisement

ಮಾರ್ನಮಿಕಟ್ಟೆಯಿಂದ ರೈಲ್ವೇ ಸೇತುವೆ ಮೂಲಕ ಜಪ್ಪಿನಮೊಗರು ರಾ.ಹೆದ್ದಾರಿ ಸಂಪರ್ಕಿಸುವ ಒಳ ರಸ್ತೆ ಇದಾಗಿದ್ದು, ತೊಕ್ಕೊಟ್ಟು, ಉಳ್ಳಾಲ, ಕಾಸರಗೋಡು, ಮುಡಿಪು ಪ್ರದೇಶಕ್ಕೆ ತೆರಳುವ ವಾಹನ ಸವಾರರು ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. ಇದೇ ಕಾರಣಕ್ಕೆ ಈ ರಸ್ತೆಯಲ್ಲಿ ಪ್ರತೀನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದೆ. ಆದರೆ, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಕಷ್ಟಪಡುತ್ತಿದ್ದಾರೆ.

ರಸ್ತೆಯಲ್ಲಿ 3 ಅಡಿ ನೀರು
ಒಂದು ಮಳೆ ಬಂದರೆ ಸಾಕು ಆದಿ ಮಹೇಶ್ವರಿ ವೈದ್ಯನಾಥ ದೇವಸ್ಥಾನದ ಹಿಂಭಾಗದಲ್ಲಿ ಸಾಗುವ ಈ ರಸ್ತೆಯಲ್ಲಿ ನೀರು ತುಂಬುತ್ತದೆ. ಮೇ 29ರಂದು ನಗರದಲ್ಲಿ ಬಂದಂತಹ ಮಹಾಮಳೆಗೆ ಈ ರಸ್ತೆ ಬ್ಲಾಕ್‌ ಆಗಿತ್ತು. ಗುರುವಾರ ಬೆಳಗ್ಗಿನಿಂದಲೇ ಮತ್ತೆ ಮಳೆ ಪ್ರಾರಂಭವಾಗಿತ್ತು. ಶುಕ್ರವಾರ ಈ ರಸ್ತೆಯಲ್ಲಿ ಸುಮಾರು 3 ಅಡಿ ನೀರು ನಿಂತಿದೆ. ಇದರಿಂದಾಗಿ ವಾಹನ ಸವಾರರು ಸಂಕಷ್ಟ ಎದುರಿಸಿದರು.

ಒಳಚರಂಡಿ ಇಲ್ಲ
ನೀರು ಹೋಗಲು ರಸ್ತೆಯ ಅಡಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಜತೆಗೆ ಸಮರ್ಪಕ ತೋಡಿನ ವ್ಯವಸ್ಥೆಯೂ ಇಲ್ಲ. ಇದೇ ಪ್ರದೇಶದಲ್ಲಿ ಕೊಂಕಣ ರೈಲ್ವೇ ಬ್ರಿಡ್ಜ್ ಬಳಿ ಇರುವಂತಹ ತೋಡಿಗೆ ಇತ್ತೀಚೆಗೆ ಮಣ್ಣು ಕುಸಿದು ಬಿದ್ದಿತ್ತು. ಇದರ ಕಾಮಗಾರಿ ಸದ್ಯ ನಡೆಯುತ್ತಿದ್ದು, ಮಳೆ ನೀರು ಹೋಗಲು ಸಾಧ್ಯವಾಗುತ್ತಿಲ್ಲ.

ಪಂಪ್‌ವೆಲ್‌ ಮೂಲಕ ತೆರಳಿ
ಈ ರಸ್ತೆ ಬ್ಲಾಕ್‌ ಆದರೆ ಜಪ್ಪಿನಮೊಗರು ಪರಿಸರಕ್ಕೆ ಆಗಮಿಸಲು ಕಂನಾಡಿ, ಪಂಪ್‌ ವೆಲ್‌, ರಾಷ್ಟ್ರೀಯ ಹೆದ್ದಾರಿ ಮೂಲಕ ಬರಬೇಕು. ಇದು ಪ್ರತೀ ಬಾರಿಯ ಮಳೆಗಾಲದ ಸಮಸ್ಯೆಯಾಗಿದ್ದು, ವಿಚಾರ ತಿಳಿದು ಮಹಾನಗರ ಪಾಲಿಕೆ ಮಳೆಗಾಲ ದಲ್ಲಿ ತಾತ್ಕಾಲಿಕ ಕಾಮಗಾರಿ ನಡೆಸುತ್ತದೆ. ಸ್ಥಳೀಯ ಕಾರ್ಪೊರೇಟರ್‌ಗೆ ಅನೇಕ ಬಾರಿ ಮನವಿ ಮಾಡಿದರೂ ಸಮಸ್ಯೆ ಇತ್ಯರ್ಥ ವಾಗಲಿಲ್ಲ. ನಮಗೆ ಶಾಶ್ವತ ಪರಿಹಾರ ಬೇಕು ಎನ್ನುತ್ತಾರೆ ಸ್ಥಳೀಯರು.

Advertisement

ವಾಹನ ಸಂಚಾರ ಸ್ಥಗಿತ
ಮಾರ್ನಮಿಕಟ್ಟೆಯಿಂದ ರೈಲ್ವೇ ಸೇತುವೆ ಮೂಲಕ ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಒಳ ರಸ್ತೆಯಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ರಾತ್ರಿವರೆಗೆ ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ ಈ ರಸ್ತೆಯಲ್ಲಿ ಶನಿವಾರ ವಾಹನ ಸಂಚಾರ ಸ್ಥಗಿತಗೊಳಿಸಿದ್ದೇವೆ. ಕಂಕನಾಡಿ, ಪಂಪ್‌ವೆಲ್‌ ಮೂಲಕ ಸಾಗಬೇಕು. ಈ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗದಂತೆ ಕ್ರಮ ಕೈಗೊಳ್ಳುತ್ತೇವೆ. ರವಿವಾರ ಎಂದಿನಂತೆ ಸಂಚಾರ ಇರಲಿದೆ.
 - ಮಂಜುನಾಥ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next