Advertisement
ಹಳೆಯಂಗಡಿ: ಬೆಳೆಯುತ್ತಿರುವ ಪಟ್ಟಣದ ಸಾಲಿನಲ್ಲಿರುವ ಹಳೆಯಂಗಡಿ ಗ್ರಾ.ಪಂ.ನ ಹಳೆಯಂಗಡಿ ಗ್ರಾಮದಲ್ಲಿ ಪ್ರಮುಖ ಸಮಸ್ಯೆ ಎಂದರೆ ಇಲ್ಲಿನ ಇಂದಿರಾನಗರದ ರೈಲ್ವೇ ಗೇಟ್‌ನಲ್ಲಿ ಅಗತ್ಯವಾಗಿರುವ ಮೇಲ್ಸೇತುವೆ ಹಾಗೂ ಆದೇ ರಸ್ತೆಯ ವಿಸ್ತರಣೆ ಆಗಬೇಕಿರುವುದಾಗಿದೆ.ರಾಷ್ಟ್ರೀಯ ಹೆದ್ದಾರಿ 66ರಿಂದ ಪಕ್ಷಿಕೆರೆಯಾಗಿ ಕಿನ್ನಿ ಗೋಳಿ, ಕಟೀಲು, ಮೂಡುಬಿದಿರೆಯನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಹೆದ್ದಾರಿಯಿಂದ ಇಂದಿರಾನಗರದ ತಿರುವಿನ ವರೆಗೆ ಸುಮಾರು 500 ಮೀ. ಅಂತರದಲ್ಲಿ ಇರುವ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾತ್ರ ಸಾಗಿದ್ದು, ಈ ವರೆಗೆ ಸೂಕ್ತ ವ್ಯವಸ್ಥೆ ನಡೆದಿಲ್ಲ. ಈ ರಸ್ತೆಯು ರೈಲ್ವೇ ಗೇಟ್‌ನ ವರೆಗೆ ವಿಸ್ತರಣೆಯಲ್ಲಿದ್ದರೂ ಅನಂತರ ಖಾಸಗಿ ಜಮೀನು ಸಮಸ್ಯೆಯಿಂದ ಹೆದ್ದಾರಿಯ ಸಂಪರ್ಕದವರೆಗೆ ಕಿರಿದಾಗಿದೆ. ಈ ರಸ್ತೆಯಲ್ಲಿ ಅತೀ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಇಕ್ಕೆಲಗಳಲ್ಲಿ ಚರಂಡಿ ಸಮಸ್ಯೆಯೂ ಕಂಡು ಬಂದಿದೆ.
Related Articles
Advertisement
ಇತರ ಸಮಸ್ಯೆಗಳೇನು?– ಹಳೆಯಂಗಡಿಯ ಹೆದ್ದಾರಿ, ಸಾಗ್, ಇಂದಿರಾನಗರದಲ್ಲಿ ತ್ಯಾಜ್ಯ ಸಂಗ್ರಹ ಸಮಸ್ಯೆ ಎದ್ದುಕಾಣುತ್ತಿದೆ.
– ಸಾಗ್, ಇಂದಿರಾನಗರದ ಜನವಸತಿ ಪ್ರದೇಶದಲ್ಲಿ ಚರಂಡಿ ಸಮಸ್ಯೆಯಿಂದಾಗಿ ಮಳೆ ಬಂದಾಗ ರಸ್ತೆಯಲ್ಲೇ ನೀರು ಹರಿಯುತ್ತದೆ.
– ಹಳೆಯಂಗಡಿಯ ಮುಖ್ಯ ಜಂಕ್ಷನ್‌ನಲ್ಲಿ ಸರ್ವಿಸ್ ರಸ್ತೆಯ ನಿರ್ಮಾಣಕ್ಕೆ ಭೂಸ್ವಾಧೀನವಾಗಿದ್ದರೂ ಕಾಮಗಾರಿ ಆರಂಭವಾಗದೆ ಯೋಜನೆ ನನೆಗುದಿಗೆ ಬಿದ್ದಿದೆ.
– ಹಳೆಯಂಗಡಿ ಪೇಟೆಯಿಂದ ಸಸಿಹಿತ್ಲು, ಪಾವಂಜೆ, ಕೊಳುವೈಲು ಸಂಪರ್ಕಿಸುವ ಒಳ ಮಾರ್ಗವಾಗಿರುವ ಹರಿ ಭಟ್ ರಸ್ತೆಯ ವಿಸ್ತರಣೆಯಾಗಬೇಕಾಗಿದೆ.
– ಕರಿತೋಟ ಪ್ರದೇಶದಲ್ಲಿ ಕೃಷಿ ಭೂಮಿಗೆ ನೆರೆ ಹಾವಳಿ ಹಾಗೂ ಉಪ್ಪು ನೀರಿನಿಂದ ತೊಂದರೆಯಾಗುತ್ತಿದೆ. ಇದಕ್ಕೆ ತಡೆಗೋಡೆ ನಿರ್ಮಾಣವಾಗಬೇಕಾಗಿದೆ. ಸೇತುವೆ ಮರೀಚಿಕೆ
ಆರು ವರ್ಷಗಳ ಹಿಂದೆ ಸ್ಥಳೀಯ ಸಂಘಟನೆ ಯೊಂದು ಕಾರ್ಡ್ ಚಳವಳಿ, ಸಹಿ ಸಂಗ್ರಹ ಅಭಿಯಾನ ನಡೆಸಿತ್ತು. ಹಳೆಯಂಗಡಿ ಪಂ. ನಲ್ಲಿ ಹಕ್ಕೊತ್ತಾಯದ ನಿರ್ಣಯ ಕೈಗೊಂಡು 10 ವರ್ಷಗಳಾಗಿವೆ. ನಾಲ್ಕು ವರ್ಷಗಳ ಹಿಂದೆ ಕಿನ್ನಿಗೋಳಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯೋರ್ವಳು ನೇರವಾಗಿ ಪ್ರಧಾನಿಗೆ ಪತ್ರ ಬರೆದು ಬೆಳಕಿಗೆ ಬಂದಿದ್ದರೂ ಅಧಿಕಾರಿಗಳು ಬಂದರೇ ವಿನಃ ಸೇತುವೆ ಮರೀಚಿಕೆಯಾಗಿದೆ. ಕಿನ್ನಿಗೋಳಿ ಸರ್ವಿಸ್ ಬಸ್ ಸಂಘಟನೆಯು ಪ್ರತಿಭಟನೆಯನ್ನು ನಡೆಸಿತ್ತು. ರೈಲ್ವೇ ಗೇಟ್‌ನಲ್ಲಿ ರಸ್ತೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಂತಾ ರಾಷ್ಟ್ರೀಯ ಸಂಸ್ಥೆಯೊಂದು ರಸ್ತೆ ಸುರಕ್ಷೆಗಾಗಿ ನಿರ್ಮಿಸಿದ ತಡೆಗೋಡೆಗೆ ಹಾನಿ ಮಾಡ ಲಾಗಿದೆ. ಹತ್ತಾರು ವರ್ಷಗಳಿಂದ ಮೇಲ್ಸೇ ತುವೆ ರಚಿಸಲು ಸಂಸದರು, ಶಾಸಕರು, ಅಧಿಕಾರಿಗಳು, ಎಂಜಿನಿಯರ್‌ಗಳು ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸುವ ಕೆಲಸ ನಡೆಯುತ್ತಲೇ ಇದೆ. -ನರೇಂದ್ರ ಕೆರೆಕಾಡು