Advertisement

3 ವರ್ಷದಲ್ಲಿ ರೈಲಿಗೆ ಸಿಲುಕಿ 1,455 ಆತ್ಮಹತ್ಯೆ

12:16 PM Aug 07, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹಿಂದಿನ 3 ವರ್ಷಗಳಲ್ಲಿ ರೈಲಿಗೆ ಸಿಲುಕಿ 1,455 ಮಂದಿ ಆತ್ಮಹತ್ಯೆಗೆ ಶರಣಾದರೆ, 7 ವರ್ಷಗಳಲ್ಲಿ ರೈಲ್ವೆ ಅಪಘಾತಕ್ಕೆ 5,210ಕ್ಕೂ ಹೆಚ್ಚಿನ ಜನ ಬಲಿಯಾಗಿದ್ದಾರೆ. 2020ರಲ್ಲಿ 413 ಮಂದಿ ರೈಲಿನಡಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರೆ, 2021ರಲ್ಲಿ ಇದರ ಪ್ರಮಾಣ 668ಕ್ಕೆ ಏರಿಕೆಯಾಗಿದೆ. 6 ತಿಂಗಳಿನಲ್ಲಿ 374 ಮಂದಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಈ ಪೈಕಿ ಪುರುಷರು 1,305ರಷ್ಟಿದ್ದರೆ, ಮಹಿಳೆಯರ ಸಂಖ್ಯೆ 150 ರಷ್ಟಿದೆ ಎಂದು ರೈಲ್ವೆ ಪೊಲೀಸ್‌ ಅಧಿಕಾರಿಗಳೇ ಉದಯವಾಣಿಗೆ ದೃಢಪಡಿಸಿದ್ದಾರೆ. ಪ್ರತಿ ತಿಂಗಳು ಸರಾಸರಿ 55- 60 ಮಂದಿ ರೈಲ್ವೆ ಅಪಘಾತದಿಂದ ಸಾವಿಗೀಡಾಗುತ್ತಿದ್ದು,  ಆತಂಕಕಾರಿ ಬೆಳವಣಿಗೆಯಾಗಿದೆ. ಹಳಿ ದಾಟುವುದು, ಇಯರ್‌ ಫೋನ್‌ ಹಾಕಿಕೊಂಡು ಹಳಿ ಮೇಲೆ ಓಡಾಡುವುದು, ಖಾಲಿ ಇರುವ ರೈಲ್ವೆ ಹಳಿಗಳಲ್ಲಿ ನಿದ್ರಿಸುವುದು, ಹಳಿಗಳಲ್ಲಿ ವಾಯು ವಿಹಾರ ಮಾಡುವುದು, ರೈಲು ಬರುವ ವೇಳೆ ಸೆಲ್ಫಿ ತೆಗೆಯುವ ವೇಳೆ ರೈಲ್ವೆ ಅಪಘಾತದಿಂದ ಸಾವಿರಾರು ಮಂದಿ ಮೃತಪಟ್ಟಿದ್ದಾರೆ.

ಇಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ 654, 2018ರಲ್ಲಿ 487, 2019ರಲ್ಲಿ 614 ಹಾಗೂ 2020, 2021 ಹಾಗೂ 2022 (ಜೂ.) 826ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ರೈಲಿಗೆ ಸಿಲುಕಿ ಆತ್ಮಹತ್ಯೆ ಏಕೆ? ಖಿನ್ನತೆ, ಪ್ರೇಮ ವೈಫ‌ಲ್ಯ, ಸಾಲಬಾಧೆ, ಪತಿಯ ಕಿರುಕುಳ, ಪರೀಕ್ಷೆಯಲ್ಲಿ ಫೈಲ್‌ ಆಗುವುದು, ವರದಕ್ಷಿಣೆ ಕಿರುಕುಳದ ಕಾರಣಕ್ಕಾಗಿಯೇ ಶೇ.90 ಪ್ರಕರಣಗಳಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಅಂಶ ತನಿಖೆಯಲ್ಲಿ ಗೊತ್ತಾಗಿದೆ. ಈ ಪೈಕಿ ಯುವಕರ ಸಂಖ್ಯೆಯೇ ಅಧಿಕವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಕಂಡುಕೊಂಡಿರುವ ವಿವಿಧ ಮಾರ್ಗಗಳಲ್ಲಿ ರೈಲಿಗೆ ತಲೆ ಕೊಡುವುದೂ ಒಂದು. ಇತ್ತೀಚೆಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳು ವವರ ಪ್ರಮಾಣ ಹೆಚ್ಚುತ್ತಿದೆ. ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡರೆ ಖಂಡಿತವಾಗಿಯೂ ಸತ್ತೆ ಸಾಯುತ್ತೇವೆ ಎಂಬ ಭಾವನೆಯಿಂದಾಗಿ ಬಹುತೇಕ ಮಂದಿ ಆತ್ಮಹತ್ಯೆಗೆ ಈ ಮಾರ್ಗ ಕಂಡುಕೊಂಡಿದ್ದಾರೆ ಎಂದು ಮನಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆತ್ಮಹತ್ಯೆ ಬೆಳಕಿಗೆ ಬರುವುದು ಹೇಗೆ?: ಆತ್ಮಹತ್ಯೆ ಮಾಡಿಕೊಳ್ಳುವವರು ರೈಲಿಗೆ ತಲೆ ಕೊಡುವ ದೃಶ್ಯ ಲೋಕೊ ಪೈಲೆಟ್‌ಗಳ ಗಮನಕ್ಕೆ ಬಂದರೂ, ಅತೀ ವೇಗವಾಗಿ ರೈಲು ಚಲಿಸುತ್ತಿರುವ ಹಿನ್ನೆಲೆಯಲ್ಲಿ ಏಕಾಏಕಿ ರೈಲನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಯಾರಾದರೂ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದ ಕೂಡಲೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಈ ಮಾಹಿತಿ ಆಧರಿಸಿ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಇನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಮೃತದೇಹವನ್ನು ಹಳಿ ಮೇಲೆ ಎಸೆದು ಹೋಗಿರುವ ಹಲವು ನಿದರ್ಶನಗಳಿವೆ ಎಂದು ರೈಲ್ವೆ ಪೊಲೀಸ್‌ ಮೂಲಗಳು ತಿಳಿಸಿವೆ.

ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಬೇಕು. ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ಚಲಿಸುತ್ತಿರುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳನ್ನು ರೈಲ್ವೆ ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಡಿ.ಆರ್‌.ಸಿರಿಗೌರಿ, ಎಸ್‌ಪಿ, ರೈಲ್ವೆ ಪೊಲೀಸ್‌ ವಿಭಾಗ

Advertisement

 

ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next