ರಾಯಚೂರು: ಬೇಸಿಗೆ ಬಂದರೆ ಸಾಕು ಭುಗಿಲೇಳುತ್ತಿದ್ದ ಕುಡಿವ ನೀರಿನ ಸಮಸ್ಯೆ ಈ ಬಾರಿ ಕೊರೊನಾ ನೆಪದಲ್ಲಿ ಮೆರೆಯಾಗಿದೆ. ಶಾಶ್ವತ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳು ಹೊರತುಪಡಿಸಿ ಜಿಲ್ಲೆಯ 179 ಹಳ್ಳಿಗಳಲ್ಲಿ ಕುಡಿಯುವ ಸಮಸ್ಯೆ ಎದುರಿಸಿವೆ.
ಬಿರು ಬೇಸಿಗೆಯಲ್ಲಿ ಜನ ಜಾನುವಾರು ನೀರಿಗಾಗಿ ಪರಿತಪಿಸುವ ಸನ್ನಿವೇಶ ಜಿಲ್ಲೆಯ ಮಟ್ಟಿಗೆ ಹೊಸದೇನಲ್ಲ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರಿನ ಬಳಕೆ ಹೆಚ್ಚಿದರೂ ಸಮಸ್ಯೆ ಅಷ್ಟಾಗಿ ಕಂಡು ಬಂದಿಲ್ಲ. ಜಿಲ್ಲೆಯ 1,457 ಗ್ರಾಮಗಳ ಪೈಕಿ 179 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿತ್ತು. ಈ ಪೈಕಿ 69 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗಿದೆ. ಉಳಿದ ಗ್ರಾಮಗಳಲ್ಲಿ ಬೋರ್‌ವೆಲ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ರಾಯಚೂರು ತಾಲೂಕಿನ ಬಿಜನಗೇರಾ ಮತ್ತು ದೇವದುರ್ಗ ತಾಲೂಕಿನ ಭೂಮನಮರಡಿ ಹಾಗೂ ದೇವರ ಮಲ್ಲಾಪೂರ ಎಸ್‌ಸಿ ಕಾಲೋನಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ.
ಜಲಾಶಯಗಳಲ್ಲಿ ಸಂಗ್ರಹ ಹೆಚ್ಚಳ: ಕಳೆದ ವರ್ಷ ಸಂಭವಿಸಿದ ನೆರೆ ಹಾವಳಿಯಿಂದ ತುಂಗಭದ್ರಾ, ನಾರಾಯಣಪುರ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಮುಂಗಾರು ಮುನ್ನ ತಲಸ್ಪರ್ಶಿಯಾಗುತ್ತಿದ್ದ ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 6.2 ಟಿಎಂಸಿ ನೀರಿನ ಲಭ್ಯತೆ ಇದೆ. ತುರ್ತು ಸಂದರ್ಭದಲ್ಲಿ ಕುಡಿಯುವ ನೀರಿಗೆಂದೇ ಮೂರು ಟಿಎಂಸಿ ಮೀಸಲಿಡಲಾಗುತ್ತದೆ. ಹೀಗಾಗಿ ಸಿಂಧನೂರು, ಮಾನ್ವಿ, ರಾಯಚೂರು ಜನರಿಗೆ ಕುಡಿಯುವ ನೀರಿನ ಬಾಧೆ ತುಸು ಕಡಿಮೆಯಾಗಿದೆ.
ಇನ್ನೂ ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ಅರ್ಧ ಭಾಗ ಕೃಷ್ಣಾ ನದಿ ಅವಲಂಬಿಸಿದ್ದು, ಅಲ್ಲಿಯೂ ನೀರಿನ ಲಭ್ಯತೆ ಇರುವುದು ಅನುಕೂಲವಾಗಿದೆ. ನಾರಾಯಣಪುರ ಜಲಾಶಯದಲ್ಲಿ 3.5 ಟಿಎಂಸಿ, ಆಲಮಟ್ಟಿಯಲ್ಲಿ 4 ಟಿಎಂಸಿ ನೀರು ಕುಡಿಯಲೆಂದೇ ಮೀಸಲಿಡಲಾಗಿದೆ. ಅಚ್ಚರಿ ಎಂದರೆ, ಎರಡನೇ ಬೆಳೆಗೆ ನೀರು ಹರಿಸಿದರೂ ಈ ಬಾರಿ ನೀರಿನ ಕೊರತೆ ಕಂಡು ಬಂದಿಲ್ಲ. ಕಳೆದ ವರ್ಷ ಇಷ್ಟೊತ್ತಿಗಾಗಲೇ ಎಲ್ಲೆಡೆ ಜಲಕ್ಷಾಮ ಎದುರಾಗಿತ್ತು.
ನೀರು ತರುವುದೇ ಕಾಯಕ: ಬೇಸಿಗೆ ಶುರುವಾಗುತ್ತಿದ್ದಂತೆ ಕೊರೊನಾ ಲಾಕ್‌ಡೌನ್ ಶುರುವಾಯಿತು. ಹೀಗಾಗಿ ಕೆಲಸವಿಲ್ಲದೇ ಎಲ್ಲರೂ ಮನೆ ಸೇರಿದರು. ಹಳ್ಳಿಗಳಲ್ಲೂ ಕೂಲಿ ಕೆಲಸಕ್ಕೆ ಬರ ಎದುರಾದರೆ, ಗುಳೆ ಹೋದವರು ಮರಳಿ ಊರುಗಳಿಗೆ ಬಂದಿದ್ದಾರೆ. ಹೀಗಾಗಿ ಕುಡಿಯುವ ನೀರು ತರುವುದೇ ನಿತ್ಯ ಕಾಯಕ ಮಾಡಿಕೊಂಡಿದ್ದರು. ತಾಲೂಕಿನ ಮನ್ಸಲಾಪುರ, ಅತ್ತನೂರು, ದೇವದುರ್ಗ ತಾಲೂಕಿನ ಬುಂಕಲದೊಡ್ಡಿ ಸೇರಿದಂತೆ ಅನೇಕ ತಾಂಡಾಗಳು, ಲಿಂಗಸೂಗೂರು ತಾಲೂಕಿನ ವಿವಿಧ ಹಳ್ಳಿಗಳಿಗೆ ಸಮಸ್ಯೆ ಎದುರಾಯಿತು.
ಈ ಬಾರಿ ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಮಸ್ಯೆ ಕಂಡು ಬಂದಿಲ್ಲ. ಸಹಾಯವಾಣಿ ಕೇಂದ್ರ ಆರಂಭಿಸಿದ್ದು ದೂರು ಬಂದ ಕೂಡಲೇ ಸ್ಪಂದಿಸಲಾಗಿದೆ. ಎರಡು ಜಲಾಶಯಗಳ ವ್ಯಾಪ್ತಿಯ 160ಕ್ಕೂ ಅಧಿ ಕ ಕೆರೆಗಳನ್ನು ತುಂಬಿಸಿದ್ದು, ನೀರಿನ ಪೂರೈಕೆಗೆ ತೊಂದರೆ ಆಗಿಲ್ಲ. ಆದರೆ, ಸಾಂಪ್ರದಾಯಿಕ ಸಮಸ್ಯೆಗಳಿರುವ ಊರುಗಳಿಗೆ ಖಾಸಗಿ ಬೋರ್‌ವೆಲ್ ಮೂಲಕ ನೀರು ನೀಡಲಾಗಿದೆ. ಕೇವಲ ಮೂರು ಹಳ್ಳಿಗೆ ಮಾತ್ರ ಟ್ಯಾಂಕ್ ನೀರು ಸರಬರಾಜು ಮಾಡಲಾಗಿದೆ.
ಗಣಪತಿ ಸಾಕ್ರೆ,
ಇಇ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ
ಸಿದ್ದಯ್ಯಸ್ವಾಮಿ ಕುಕುನೂರು