ರಾಯಚೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದ ಕೆಲ ಜಿಲ್ಲೆಗಳು ಮೊದಲ ಸ್ಥಾನ ಪಡೆಯಬೇಕು ಎಂಬ ತುಡಿತದೊಂದಿಗೆ ಪೈಪೋಟಿ ನಡೆಸಿದರೆ ರಾಯಚೂರು ಜಿಲ್ಲೆ ಮಾತ್ರ ಕೊನೆ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದೆ. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮತ್ತೆ ನಾಲ್ಕು ಸ್ಥಾನ ಕುಸಿತ ಕಂಡಿರುವ ಜಿಲ್ಲೆ 33ನೇ ಸ್ಥಾನದಲ್ಲಿ ವಿರಾಜಮಾನವಾಗಿದೆ.
ಫಲಿತಾಂಶ ಸುಧಾರಣೆಗೆ ಏನೆಲ್ಲ ಪ್ರಯಾಸ ಪಟ್ಟರೂ ಯಾವುದೇ ಪ್ರಯೋಜನ ಮಾತ್ರ ಕಾಣುತ್ತಿಲ್ಲ. 2016-17ನೇ ಸಾಲಿನಲ್ಲಿ 30ನೇ ಸ್ಥಾನದಲ್ಲಿದ್ದ ಜಿಲ್ಲೆ 2017-18ನೇ ಸಾಲಿನಲ್ಲಿ 29ನೇ ಸ್ಥಾನಕ್ಕೇರಿತ್ತು. ಆದರೆ, ಈ ಬಾರಿ 33ನೇ ಸ್ಥಾನ ಪಡೆಯುವ ಮೂಲಕ ಕೆಳಗಿನಿಂದ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಜಿಲ್ಲೆಯಲ್ಲಿ 27,768 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 16,214 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.65.33ರಷ್ಟು ಫಲಿತಾಂಶ ದೊರಕಿದೆ.
ದೇವದುರ್ಗ ತಾಲೂಕಿನಲ್ಲಿ 3,801 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 2,558 ವಿದ್ಯಾರ್ಥಿಗಳು ಪಾಸಾಗಿದ್ದರೆ, ಲಿಂಗಸುಗೂರು ತಾಲೂಕಿನಲ್ಲಿ 5,484ರಲ್ಲಿ 3,502, ಮಾನ್ವಿ ತಾಲೂಕಿನಲ್ಲಿ 5,055ರಲ್ಲಿ 3,002, ರಾಯಚೂರು ತಾಲೂಕಿನಲ್ಲಿ 8,233ರಲ್ಲಿ 4,210 ಮತ್ತು ಸಿಂಧನೂರು ತಾಲೂಕಿನಲ್ಲಿ 5,195ರಲ್ಲಿ 2,942 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 407 ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿದ್ದು, ಇವುಗಳಲ್ಲಿ ಖಾಸಗಿ ಶಾಲೆ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣಗೊಂಡಿದ್ದಾರೆ. ಒಟ್ಟು 220 ಸರ್ಕಾರಿ ಶಾಲೆಗಳಲ್ಲಿ ಶೇ.65.52ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದು, 30 ಅನುದಾನಿತ ಶಾಲೆಗಳಲ್ಲಿ ಶೇ.58.89ರಷ್ಟು ಮಕ್ಕಳು ಪಾಸಾಗಿದ್ದಾರೆ. ಇನ್ನು 157 ಖಾಸಗಿ ಶಾಲೆಗಳಲ್ಲಿ 70.46ರಷ್ಟು ಮಕ್ಕಳು ಪಾಸಾಗಿದ್ದಾರೆ.
ಜಿಲ್ಲೆಯ 13 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದರೆ, ಒಂದು ಖಾಸಗಿ ಶಾಲೆಗೆ ಸೊನ್ನೆ ಫಲಿತಾಂಶ ಲಭಿಸಿದೆ. ಶೇ.100 ಸಾಧನೆ ಮಾಡಿದ 13ರಲ್ಲಿ 6 ಸರ್ಕಾರಿ, 1 ಅನುದಾನಿತ ಮತ್ತು 6 ಖಾಸಗಿ ಶಾಲೆಗಳು ಸೇರಿವೆ.
ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮುಂದಿದ್ದಾರೆ. ಕನ್ನಡ, ಆಂಗ್ಲ, ಉರ್ದು ಮತ್ತು ಹಿಂದಿ ಮಾಧ್ಯಮದಲ್ಲಿ ಒಟ್ಟು 23,168 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 15,347 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ 17,561 ವಿದ್ಯಾರ್ಥಿಗಳ ಪೈಕಿ 11,215 ವಿದ್ಯಾರ್ಥಿಗಳು (ಶೇ.63.86) ಪಾಸಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 5,047 ಪೈಕಿ 3,851 ವಿದ್ಯಾರ್ಥಿಗಳು (ಶೇ.76.3) ಪಾಸಾಗಿದ್ದಾರೆ. 519 ಉರ್ದು ವಿದ್ಯಾರ್ಥಿಗಳಲ್ಲಿ 256 ವಿದ್ಯಾರ್ಥಿಗಳು (ಶೇ.49.33) ಪಾಸಾಗಿದ್ದರೆ, ಹಿಂದಿ ಭಾಷೆಯ 41 ವಿದ್ಯಾರ್ಥಿಗಳಲ್ಲಿ 25 (ಶೇ.60.98) ವಿದ್ಯಾರ್ಥಿಗಳು ಉತ್ತೀರ್ಣಹೊಂದಿದ್ದಾರೆ.