ರಾಯಚೂರು: ಹೈಕೋರ್ಟ್ ನಿರ್ದೇಶನದ ಮೇರೆಗೆ ಜೂ.25ರಿಂದ ಜು.4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮಾರ್ಚ್ ಅಂತ್ಯಕ್ಕೆ ನಡೆಯಬೇಕಿದ್ದ ಪರೀಕ್ಷೆಗಳು ಲಾಕ್‌ಡೌನ್ ಕಾರಣ ಮುಂದೂಡಲ್ಪಟ್ಟಿವೆ. ಕೇಂದ್ರ ಗೃಹ ಸಚಿವಾಲಯ ಪರೀಕ್ಷೆ ನಡೆಸಲು ಸಮ್ಮತಿ ತೋರಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ 8,48,203 ವಿದ್ಯಾರ್ಥಿ ಗಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ಪರೀಕ್ಷಾರ್ಥಿಗಳಿಗೆ ಮಾಸ್ಕ್ ನೀಡಲಾಗುವುದು. ಅದಕ್ಕಾಗಿ ಸ್ಕೌಟ್ಸ್ ಮತ್ತು ಗೈಡ್ಸ್‌ನವರು 8.5 ಲಕ್ಷ ಮಾಸ್ಕ್ ನೀಡಿದ್ದಾರೆ. ಸ್ವಯಂ ಸೇವಾ ಸಂಘ-ಸಂಸ್ಥೆಗಳು, ದಾನಿಗಳು, ಜನಪ್ರತಿನಿಧಿಗಳು ಮಾಸ್ಕ್ ನೀಡಲು ಮುಂದೆ ಬಂದಿದ್ದಾರೆ ಎಂದು ವಿವರಿಸಿದರು. ರಾಜ್ಯದ ಪ್ರಮುಖ ಸಂಸ್ಥೆ 75 ಲಕ್ಷ ರೂ. ಮೌಲ್ಯದ ಸ್ಯಾನಿಟೈಸರ್ ಪೂರೈಸುತ್ತಿದೆ. ಪ್ರತಿ ಡೆಸ್ಕ್ನಿಂದ ಡೆಸ್ಕ್ಗೆ 3.5 ಅಡಿ ಅಂತರ ಪಾಲಿಸಲಾಗುತ್ತಿದೆ. ಪರೀಕ್ಷೆ ವೇಳೆ ಅನಾರೋಗ್ಯ ಕಂಡು ಬಂದರೆ ಆ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿಸಿ ಪರೀಕ್ಷೆ ಬರೆಸುವುದಾಗಿ ತಿಳಿಸಿದರು.
ಪರೀಕ್ಷಾ ಮೇಲ್ವಿಚಾರಕರು ಕೂಡ ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಧರಿಸಬೇಕು. ಪೋಷಕರಿಗೆ ಶಾಲಾ ಆವರಣ ಪ್ರವೇಶವಿಲ್ಲ. ಆದರೆ, ನಕಲು ಮಾಡಿದವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವರು ಎಂದರು. ಪರೀಕ್ಷೆ ಬರೆಯಲು ಬರುವ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಕುರಿತು ಜೂ.10 ರೊಳಗೆ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರೀಕ್ಷಾರ್ಥಿಗಳು ಮನೆಯಿಂದಲೇ ನೀರು, ಊಟ, ಉಪಹಾರ ತರಬೇಕು ಎಂದರು.
ಡಿಡಿಪಿಐ ಎಚ್.ಬಿ.ಗೋನಾಳ ಮಾತನಾಡಿ, ಜಿಲ್ಲಾದ್ಯಂತ 30,413 ಮಕ್ಕಳು ಪರೀಕ್ಷೆ ಬರೆಯುವರು. 77 ಕೇಂದ್ರಗಳು, 9 ಉಪ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 757 ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರ ಬದಲಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆ 70 ಸಾವಿರ ಮಾಸ್ಕ್ ನೀಡಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿದರು.ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.
ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಕೆ.ಶಿವನಗೌಡ ನಾಯಕ, ಡಾ| ಶಿವರಾಜ ಪಾಟೀಲ, ವೆಂಕಟರಾವ್ ನಾಡಗೌಡ, ದದ್ದಲ್ ಬಸನಗೌಡ, ಎಂಎಲ್‌ಸಿ ಎನ್.ಎಸ್.ಬೋಸರಾಜು, ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಕಲಬುರಗಿ ಶಿಕ್ಷಣ ಇಲಾಖೆ ಅಪರ ಆಯುಕ್ತ ನಲಿನ್ ಅತುಲ್, ಸಹಾಯಕ ಆಯುಕ್ತರಾದ ಸಂತೋಷ ಕಾಮಗೌಡ ಸೇರಿ ಇತರರಿದ್ದರು.