ರಾಯಚೂರು: ನಿತ್ಯ ಬಳಸಿ ಎಸೆಯುವ ಪ್ಲಾಸ್ಟಿಕ್‌ಗಳನ್ನೇ ಪರಿಸರ ಸ್ನೇಹಿಯಾಗಿ ಬಳಸುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಆರಂಭಿಕ ಯಶಸ್ಸು ಕಂಡಿದ್ದಾರೆ. ನಿತ್ಯ ಮನೆಗಳಲ್ಲಿ ಬಳಸಿದ ನಂತರ ಉಳಿಯುವ ನಿರುಪಯುಕ್ತ ಪ್ಲಾಸ್ಟಿಕ್ ಪ್ಯಾಕೆಟ್‌ಗಳಿಗೆ ಮಣ್ಣು ತುಂಬಿ ಅದರಲ್ಲಿ ವಿವಿಧ ಬೀಜಗಳನ್ನು ನೆಟ್ಟು ಸಸಿ ಬೆಳೆಸುತ್ತಿದ್ದಾರೆ.
ನಗರದ ಎಸ್‌ಪಿ ಕಚೇರಿ ಆವರಣದಲ್ಲಿ ಈಗಾಗಲೇ ಇಂಥ ಏಳು ಸಾವಿರ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಿದ್ದು, 15 ದಿನಗಳಲ್ಲಿ ಸರಿಸುಮಾರು 200ಕ್ಕೂ ಅಧಿಕ ಪ್ಯಾಕೇಟ್‌ಗಳಲ್ಲಿ ಸಸಿ ಮೊಳಕೆ ಬಂದಿವೆ. ಮೂರ್‍ನಾಲ್ಕು ತಿಂಗಳಲ್ಲಿ ಕನಿಷ್ಟ ಒಂದು ಲಕ್ಷ ಸಸಿಗಳನ್ನು ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ.
ಪರಿಸರ ಕಾಳಜಿಗೆ ಸಾಥ್: ಪ್ರತಿ ವಾರ ಎಸ್‌ಪಿಯೇ ಖುದ್ದು ವಿವಿಧ ವಾರ್ಡ್‌ಗಳಿಗೆ ತೆರಳಿ ಗಿಡಗಳನ್ನು ನೆಡುವುದು ಸ್ವತ್ಛತಾ ಕಾರ್ಯ ಕೈಗೊಳ್ಳುವುದು, ಕಲ್ಯಾಣಿಗಳ ಸ್ವತ್ಛತಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಯಾವುದೇ ಸಭೆ ಸಮಾರಂಭಗಳಿಗೆ ಹೋದರೂ ಪರಿಸರ ಕಾಳಜಿ ವಹಿಸುವಂತೆ ಮನವಿ ಮಾಡುತ್ತಾರೆ. ಮನೆಯಲ್ಲಿ ಬಳಸಿದ ಮೇಲೆ ಪ್ಲಾಸ್ಟಿಕ್‌ಗಳನ್ನು ಎಸೆಯದೆ ಪರಿಸರಕ್ಕೆ ಉಪಯುಕ್ತ ರೀತಿಯಲ್ಲಿ ಬಳಸಿ ಎಂದು ಕೇಳುತ್ತಿದ್ದಾರೆ. ಇದಕ್ಕೆ ಗ್ರೀನ್ ರಾಯಚೂರು, ವಿವಿಧ ಶಾಲಾ ಕಾಲೇಜುಗಳ ಎನ್ನೆಸ್ಸೆಸ್, ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತಂಡಗಳು ಸಾಥ್ ನೀಡುತ್ತಿವೆ. ನಗರಸಭೆಯಲ್ಲಿನ ಪ್ಲಾಸ್ಟಿಕ್ ನಿಯಂತ್ರಣ ಸಮಿತಿ ಈಗ ಪ್ಲಾಸ್ಟಿಕ್‌ಗಳನ್ನು ಒದಗಿಸುತ್ತಿದೆ. ರಜಾ ದಿನಗಳಲ್ಲಿ ಕಚೇರಿ ಆವರಣದಲ್ಲಿಯೇ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಪ್ಲಾಸ್ಟಿಕ್‌ಗೆ ಮಣ್ಣು, ಗೊಬ್ಬರ ಹಾಕಿ ಮತ್ತು ಬೀಜಗಳನ್ನು ಹಾಕಿಡಲಾಗುತ್ತಿದೆ.
ನಿತ್ಯೋಪಯೋಗಿ ಸಸಿಗಳು: ಮುಖ್ಯವಾಗಿ ಈ ಪ್ಲಾಸ್ಟಿಕ್‌ಗಳಲ್ಲಿ ನಿತ್ಯ ಮನೆಗೆ ಉಪಯೋಗವಾಗುವಂತ ಸಸಿಗಳನ್ನೇ ಹೆಚ್ಚಾಗಿ ಹಾಕಲಾಗುತ್ತಿದೆ. ನಿಂಬೆ, ತುಳಸಿ, ಸಪೋಟ, ದಾಳಿಂಬೆ, ಕರಿಬೇವು, ಪೇರಲ, ಹೊಂಗೆ ಸೇರಿದಂತೆ ಮನೆ ಅಕ್ಕಪಕ್ಕ ಬೆಳೆಯುವಂತ ಸಸಿಗಳನ್ನೇ ತಯಾರಿಸಲಾಗುತ್ತಿದೆ. ಇಲ್ಲಿನ ಆಲ್ಕೂರು ಸ್ವಾಮೀಜಿ ಈಗ ಬೇಕಿರುವ ಗೋಶಾಲೆಯಿಂದ ಗೊಬ್ಬರ ಕಳುಹಿಸಿದ್ದಾರೆ. ಯಾಪಲದಿನ್ನಿ ಭಾಗದಿಂದ ಕರಿ ಮತ್ತು ಕೆಂಪು ಮಣ್ಣು ತರಿಸಿ ಒಂದೆಡೆ ಹದ ಮಾಡಲಾಗಿದೆ. ಅದನ್ನು ಚಿಕ್ಕ ಪ್ಯಾಕೆಟ್‌ಗಳಲ್ಲಿ ತುಂಬಿಡಲಾಗುತ್ತಿದೆ. ಪ್ರತಿಯೊಂದಕ್ಕೂ ನೀರುಣಿಸುವ ಕೆಲಸ ಸಾಧ್ಯವಿಲ್ಲದ್ದು. ಹೀಗಾಗಿ 25 ಸಾವಿರ ರೂ. ಖರ್ಚು ಮಾಡಿ ಸ್ಪಿಂಕ್ಲರ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಎಲ್ಲ ಸಸಿಗಳಿಗೆ ಏಕಕಾಲಕ್ಕೆ ಸ್ಪಿಂಕ್ಲರ್ ಮೂಲಕ ನೀರು ಸಿಂಪರಣೆ ಮಾಡಬಹುದಾಗಿದೆ.
100 ಪಾಕೆಟ್ ಕೊಟ್ಟರೆ ಬಹುಮಾನ: ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪರಿಸರ ರಕ್ಷಣೆ ಮತ್ತು ಬೆಳೆಸುವ ಬಗ್ಗೆ ಮಾತನಾಡುವ ಎಸ್ಪಿ; ಈ ಅಭಿಯಾನಕ್ಕೂ ನೆರವು ಕೇಳುತ್ತಿದ್ದಾರೆ. ನೀವು ಮನೆಯಲ್ಲಿಯೇ ಈ ಪ್ರಯೋಗ ಮಾಡಬಹುದು. ಇಲ್ಲವಾದರೆ 100 ಪ್ಲಾಸ್ಟಿಕ್ ಪಾಕೆಟ್ ಸಂಗ್ರಹಿಸಿ ನಮಗೆ ನೀಡಿದರೆ ನಿಮಗೆ ಸೂಕ್ತ ಬಹುಮಾನ ಕೊಡುತ್ತೇವೆ ಎಂದೂ ಮಕ್ಕಳನ್ನು
ಪ್ರೇರೇಪಿಸುತ್ತಿದ್ದಾರೆ.
ಮನೆಗಳಲ್ಲಿ ನಿತ್ಯ ಬಳಸುವ ಪ್ಲಾಸ್ಟಿಕ್ ವಸ್ತುಗಳನ್ನು ಪರಿಸರಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಹಾಲು, ಎಣ್ಣೆ ಪಾಕೆಟ್‌ಗಳಲ್ಲಿ ವಿವಿಧ ತಳಿಯ ಸಸಿಗಳನ್ನು ನೆಡುವ ಆಲೋಚನೆ ಬಂತು. ಎಸ್‌ಪಿ ಕಚೇರಿ ಆವರಣದಲ್ಲಿ 7 ಸಾವಿರಕ್ಕೂ ಅಧಿಕ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಲಾಗಿದೆ. ಒಂದು ಲಕ್ಷ ಗುರಿ ಹೊಂದಲಾಗಿದೆ. ಬೇಗ ಗುರಿ ತಲುಪಿದರೆ ಅಭಿಯಾನ ಮುಂದುವರಿಸಲಾಗುವುದು. ಮದುವೆ, ಸಭೆ ಸಮಾರಂಭಗಳಲ್ಲಿ ನೆಂಟರಿಗೆ ಅತಿಥಿಗಳಿಗೆ ಉಡುಗೊರೆ ನೀಡಲು ಈ ಸಸಿಗಳನ್ನು ಕೇಳುತ್ತಿದ್ದಾರೆ.
ಡಾ| ಸಿ.ಬಿ.ವೇದಮೂರ್ತಿ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ