Advertisement

ಅಖಂಡ ಭಾರತ ಕನಸು ನನಸು

12:17 PM Jan 27, 2020 | Naveen |

ರಾಯಚೂರು: ನಗರ ಸೇರಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ 71ನೇ ಗಣರಾಜ್ಯೋತ್ಸವವನ್ನು ರವಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಡಿಎಆರ್‌ ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

Advertisement

ಬಳಿಕ ವಿವಿಧ ಕವಾಯತು ಪಡೆಗಳಿಂದ ಧ್ವಜವಂದನೆ ಸ್ವೀಕರಿಸಿದರು. ನೆರೆದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಕಾಶ್ಮೀರ ಸೇರಿದಂತೆ ಅಖಂಡ ಭಾರತ ಗಣರಾಜ್ಯೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ನಿರ್ಣಯದಿಂದ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾಗಿದೆ. ಬಹುಶಃ ಇದರಿಂದ ಸಂವಿಧಾನ ರಚಿಸಿದ ಡಾ| ಬಿ.ಆರ್‌.ಅಂಬೇಡ್ಕರ್‌ ಆತ್ಮವೂ ಶಾಂತಿಸಿದೆ ಎಂದು ಭಾವಿಸುತ್ತೇನೆ ಎಂದರು.

ಚಿಕ್ಕ ರಾಜ್ಯಗಳಾಗಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಟ್ಟುಗೂಡಿಸಲಾಯಿತು. ಅದಕ್ಕಾಗಿ ಸಾಕಷ್ಟು ಹೋರಾಟಗಾರರು ತಮ್ಮ ಜೀವನವನ್ನೇ ಸವೆಸಿದ್ದಾರೆ. ಇವತ್ತು ನಿಜಕ್ಕೂ ಮಹತ್ವದ ದಿನ. ಇಡೀ ಭಾರತದ ನಾಗರಿಕರಿಗೆ ಸಮಗ್ರ ಸಾಮಾಜಿಕ ನ್ಯಾಯ ಕೊಟ್ಟ ದಿನ. ವಿಶ್ವಕ್ಕೇ ಮಾದರಿಯಾದ ಸಂವಿಧಾನ ಸಮರ್ಪಣೆಯಾದ ದಿನ. ಸಂವಿಧಾನವೇ ನಮಗೆ ಬೃಹತ್‌ ಗ್ರಂಥ ಎಂದರು.

ಬಿಡಿಬಿಡಿಯಾಗಿದ್ದ 565 ಸಂಸ್ಥಾನಗಳನ್ನು ಒಗ್ಗೂಡಿಸಿದ್ದು ಸರ್ದಾರ್‌ ವಲ್ಲಭಭಾಯ್‌ ಪಟೇಲರು. ಈವರೆಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದ ರೀತಿ ನಡೆದುಕೊಂಡು ಬಂದಿದ್ದೇವೆ. ಅದೇ ನಮ್ಮ ಸಾಧನೆ. ಇಡೀ ವಿಶ್ವವೇ ಇವತ್ತು ಭಯೋತ್ಪಾದನೆ ಬಗ್ಗೆ ಭಯಪಡುತ್ತಿದೆ. ಆದರೆ, ಕಳೆದ ಐದು ವರ್ಷದಲ್ಲಿ ಒಂದೇ ಒಂದು ದಾಳಿ ಆಗಿಲ್ಲ ಎಂದರೆ ನಮ್ಮ ದೇಶ ಸುಭದ್ರವಾಗಿದೆ ಎಂದರ್ಥ ಎಂದರು.

ಆಯುಷ್ಮಾನ್‌ ಭಾರತ್‌ ಯೋಜನೆ ಜಗತ್ತಿನ ಅತ್ಯಂತ ದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದೆ. ಜನೌಷಧಿ ಕೇಂದ್ರಗಳಿಂದ ಲಕ್ಷಾಂತರ ಜನರಿಗೆ ಉಪಯೋಗವಾಗುತ್ತಿದೆ. ಭಾರತ ಅದರಲ್ಲೂ ಕರ್ನಾಟಕ ವೈದ್ಯಕೀಯ ಹಬ್‌ ಆಗಿ ಮಾರ್ಪಾಟ್ಟಿದೆ. ಹೃದಯ ಸಂಬಂಧಿ ಚಿಕಿತ್ಸೆಗೆ ಇಡೀ ವಿಶ್ವದಿಂದ ಜನ ಇವತ್ತು ಭಾರತಕ್ಕೆ, ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದರು.

Advertisement

2017-18ರಲ್ಲಿ 277.49 ದಶಲಕ್ಷ ಟನ್‌ ಆಹಾರ ಉತ್ಪಾದಿಸಿರುವುದು ದಾಖಲೆಯೇ ಸರಿ. ಇದು ಅನ್ನದಾತರ ಸಾಧನೆ. ಇಡೀ ದೇಶದಲ್ಲಿ 3.6 ಲಕ್ಷ ಹಳ್ಳಿಗಳಲ್ಲಿ ಸುಮಾರು 7.25 ಕೋಟಿ ಶೌಚಗೃಹಗಳು ನಿರ್ಮಾಣಗೊಂಡಿವೆ. ಪ್ರತಿ ಹಳ್ಳಿ ಹಳ್ಳಿಗೆ ಕುಡಿಯುವ ನೀರು, ವಿದ್ಯುತ್‌, ರಸ್ತೆ ಸೌಲಭ್ಯ ಸಿಗುತ್ತಿದೆ. ದೇಶದ 28.5 ಲಕ್ಷ ಹೆಕ್ಟೇರ್‌ ಒಣಭೂಮಿ ಇವತ್ತು ನೀರಾವರಿ ಆಗಿದೆ ಎಂದು ಹೇಳಿದರು. ಶಾಸಕ
ಡಾ| ಶಿವರಾಜ ಪಾಟೀಲ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಎಂಎಲ್‌ಸಿ ಎನ್‌.ಎಸ್‌.ಬೋಸರಾಜ್‌, ಡಿಸಿ ಆರ್‌.ವೆಂಕಟೇಶಕುಮಾರ, ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಎಸ್ಪಿ ಡಾ| ಸಿ.ಬಿ.ವೇದಮೂರ್ತಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಇಲಾಖೆ ಅಧಿ ಕಾರಿಗಳು ಪಾಲ್ಗೊಂಡಿದ್ದರು.

ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ; ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ ನಡೆಯಿತು. ಕೇಸರಿ ಬಿಳಿ ಹಸಿರು ಬಣ್ಣದ ಬಟ್ಟೆಗಳನ್ನು ತೊಟ್ಟಿದ್ದ ನೂರಾರು ವಿದ್ಯಾರ್ಥಿಗಳು ನೃತ್ಯದ ಮೂಲಕ ಗಮನ ಸೆಳೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next