ರಾಯಚೂರು: ಬೇಸಿಗೆಯಲ್ಲಿ ಭರ್ಜರಿ ವ್ಯಾಪಾರ ಮಾಡಿಕೊಳ್ಳುತ್ತಿದ್ದ ರಾಜಸ್ಥಾನಿಗಳು ಬಿಡಿಗಾಸು ಆದಾಯವಿಲ್ಲದೇ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಹುರಿಗಡಲೆ ಖರ್ಚಾದಂತೆ ಮಾರಾಟವಾಗುತ್ತಿದ್ದ ಮಣ್ಣಿನ ಸಾಮಗ್ರಿಗಳನ್ನು ಈಗ ಕೇಳುವವರಿಲ್ಲದಾಗಿದೆ.
ದೀಪಾವಳಿ ಮತ್ತು ಬೇಸಿಗೆ ವೇಳೆ ಬರುವ ಇವರು ಒಂದೆರಡು ತಿಂಗಳಲ್ಲಿ ತಂದ ಸಾಮಗ್ರಿಗಳನ್ನೆಲ್ಲ ಖಾಲಿ ಮಾಡಿಕೊಂಡು ಹೋಗುತ್ತಿದ್ದರು. ಕಳೆದ ದೀಪಾವಳಿಯಲ್ಲೂ ಅಷ್ಟೊಂದು ವ್ಯಾಪಾರ ನಡೆಯಲಿಲ್ಲ. ಬೇಸಿಗೆಯಲ್ಲಿ ಉತ್ತಮ ವ್ಯಾಪಾರ ನಿರೀಕ್ಷೆಯಲ್ಲಿದ್ದ ಇವರಿಗೆ ಕೋವಿಡ್ ಕಾರ್ಮೋಡ ಕವಿದಿದೆ. ನಿತ್ಯ 4-5 ಸಾವಿರ ವ್ಯಾಪಾರ ಮಾಡುತ್ತಿದ್ದವರು, ಇಂದು ತಮ್ಮ ಊಟದ ಖರ್ಚಿಗೂ ಪರದಾಡುವಂತಾಗಿದೆ. ಕಳೆದ 20 ದಿನಗಳಿಂದ ಜನ ಹೊರಗೆ ಬರುತ್ತಿಲ್ಲ. ಹೀಗಾಗಿ ನಮಗೆ ಬಿಡಿಗಾಸು ವ್ಯಾಪಾರವಾಗುತ್ತಿಲ್ಲ. ಈ ಬಾರಿ ತಂದಸಾಮಗ್ರಿಗಳಲ್ಲಿ ಯಾವುದೂ ಖರ್ಚಾಗಿಲ್ಲ ಎನ್ನುತ್ತಾರೆ ರಾಜಸ್ಥಾನದ ವ್ಯಾಪಾರಿ ಬ್ರಿಜೇಶ್.
ಅಲ್ಲಿಂದ ತಂದ ದವಸ ಧಾನ್ಯವೆಲ್ಲ ಖರ್ಚಾಗಿದೆ. ನಿತ್ಯದ ಊಟಕ್ಕೂ ಸಮಸ್ಯೆಯಾಗಿದೆ. ಊರಿಗೆ ಹೋಗಬೇಕು ಎಂದರೂ ಆಗುತ್ತಿಲ್ಲ. ಅಲ್ಲಿಂದ ಯಾರು ಬರಲು ಅವಕಾಶವಿಲ್ಲ. ಹೀಗಾಗಿ ದಿನ ದೂಡುವುದೇ ಕಷ್ಟವಾಗುತ್ತಿದೆ. ಪಡಿತರ ಚೀಟಿ ಕೂಡ ತಂದಿಲ್ಲ ಎಂದು ನೊಂದು ನುಡಿಯುತ್ತಾರೆ ಬ್ರಿಜೇಶನ ಪತ್ನಿ ಲಾಕ್‌ಡೌನ್ ತೆರವಾದ್ರೆ ದಾರಿ ಹಿಡಿತೀವಿ..
ಇನ್ನೂ ಮಹಾರಾಷ್ಟ್ರದಿಂದ ಕೇವಲ ಗಡಿಗೆಗಳನ್ನು ತಂದಿದ್ದ ರಾಹುಲ್‌ಗೂ ನಷ್ಟದ ಬಿಸಿ ತಟ್ಟಿದೆ. ಪ್ರತಿ ವರ್ಷ ಒಂದು ಲೋಡ್ ಖಾಲಿಯಾಗುತ್ತಿದ್ದಂತೆ ಮತ್ತೊಂದು ಲೋಡ್ ತರಿಸಲಾಗುತ್ತಿತ್ತು. ಆದರೆ, ಈ ಬಾರಿ ಒಂದನೇ ಲೋಡ್ ಹಾಗೆಯೇ ಉಳಿದಿದೆ. ಲಾಕ್‌ಡೌನ್ ಬೇಗ ತೆರವಾದರೆ ಈಗ ತಂದಿರುವಷ್ಟು ಗಡಿಗೆಗಳನ್ನಾದರೂ ಖರ್ಚು ಮಾಡಿಕೊಂಡು ಊರಿನ ದಾರಿ ಹಿಡಿಯುತ್ತೇವೆ ಎನ್ನುತ್ತಾರೆ ರಾಜಸ್ಥಾನಿಗಳು.
ಸಿದ್ದಯ್ಯಸ್ವಾಮಿ ಕುಕನೂರ