Advertisement

ಪ್ರವಾಸಿತಾಣ ಪುನಶ್ಚೇತನಕ್ಕೆ ಸೂಚನೆ

05:19 PM Jan 05, 2020 | Naveen |

ರಾಯಚೂರು: ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ಸಕಲ ರೀತಿಯ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಅವುಗಳನ್ನು ಪುನಶ್ಚೇತನಗೊಳಿಸಬೇಕೆಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಮೊದಲು ಗುರುತಿಸಿ, ಆ ನಂತರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಅವುಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಮಾತ್ರ ಅಲ್ಲಿನ ನೈಜ ಸ್ಥಿತಿ ಅರಿವಾಗುತ್ತದೆ. ಆದ ಕಾರಣ ಪ್ರತಿಯೊಂದು ಪ್ರವಾಸಿ ತಾಣಗಳಿಗೆ ಅಧಿ ಕಾರಿಗಳೇ ಖುದ್ದು ಭೇಟಿ ನೀಡಬೇಕು. ಇಲ್ಲಿಯವರೆಗೆ ಎಷ್ಟು ಪ್ರವಾಸಿ ತಾಣಗಳನ್ನು ಭೇಟಿ ನೀಡಿದ್ದೀರಾ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶರಣುಬಸವ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಗುಂಡಲಬಂಡಾ ಜಲಪಾತ, ಶ್ರೀ ರಾಘವೇಂದ್ರ ಸ್ವಾಮಿ ಏಕಶಿಲಾ ಬೃಂದಾವನ ಬಿಚ್ಚಾಲಿ, ಲಿಂಗಸುಗೂರು ತಾಲೂಕಿನ ಅಂಕಲಿ ಮಠ, ಸಜ್ಜಲಗುಡ್ಡ ಶ್ರೀ ಜಗನ್ಮಾತೆ ಶರಣಮ್ಮ ತಾಯಿ ದೇವಸ್ಥಾನ, ಶ್ರೀ ನರಸಿಂಹ ದೇವಸ್ಥಾನ, ದೇವಸುಗೂರಿನ ಶ್ರೀ ಸೂಗೂರೇಶ್ವರ ದೇವಸ್ಥಾನ, ಶ್ರೀ ದತ್ತಾತ್ರೇಯ ದೇವಸ್ಥಾನ ಕುರ್ವಾಪುರ, ಗುರಗುಂಟಾದ ಶ್ರೀ ಅಮರೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಲಾಗಿದ್ದು, ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಪ್ರವಾಸಿ ತಾಣಗಳ ಬಗ್ಗೆ ಜಿಲ್ಲೆಯ ಬಸ್‌ ಹಾಗೂ ರೈಲು ನಿಲ್ದಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಹಾಕಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಬೇಕು. ಫಲಕಗಳು ವರ್ಣರಂಜಿತವಾಗಿ ಕಾಣಬೇಕು. ತಾಣ ಇರುವ ಸ್ಥಳ ಮತ್ತು ಸಂಪರ್ಕಿಸಬೇಕಾದ ನಂಬರ್‌ ಗಳನ್ನು ಬೋರ್ಡ್‌ನಲ್ಲಿ ವಿವರವಾಗಿ ತಿಳಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ 2017-18ನೇ ಸಾಲಿನ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ, ಅವುಗಳನ್ನು ವಿಳಂಬಕ್ಕೆ ಆಸ್ಪದ ನೀಡದಂತೆ ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದವರು ತಿಳಿಸಿದರು.

Advertisement

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗದ್ರಟಗಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನ ಕ್ಷೇತ್ರದಲ್ಲಿ ಯಾತ್ರಿನಿವಾಸ ನಿರ್ಮಾಣ, ಸಜ್ಜಲಗುಡ್ಡ ಗ್ರಾಮದ ಶ್ರೀ ಜಗನ್ಮಾತೆ ಶರಣಮ್ಮ ತಾಯಿ ದೇವಸ್ಥಾನ ಕ್ಷೇತ್ರದಲ್ಲಿ ಯಾತ್ರಿನಿವಾಸ ನಿರ್ಮಾಣ, ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನ ಕ್ಷೇತ್ರದಲ್ಲಿ ಯಾತ್ರಿನಿವಾಸ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೂಡಲೇ ಆರಂಭವಿಸುವಂತೆ ತಾಕೀತು ಮಾಡಿದರು.

ನಗರದ ಪುರಾತನ ಕೋಟೆಯನ್ನು ಪುನಶ್ಚೇತನಗೊಳಿಸಿ ಪ್ರವಾಸಿಗರ ತಾಣವಾಗಿ ಅಭಿವೃದ್ಧಿ ಪಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಐತಿಹಾಸಿಕ ಮಾವಿನ ಕೆರೆಯನ್ನು ಪ್ರವಾಸಿಗರ ತಾಣವಾಗಿ ಗುರುತಿಸಿ ಅಭಿವೃದ್ಧಿ ಪಡಿಸಲು 22 ಕೋಟಿ ರೂ. ಅನುದಾನದ ಅವಶ್ಯಕತೆ ಇದ್ದು, ಅದನ್ನು ಸಂಬಂಧಿ ಸಿದ ಇಲಾಖೆಗಳಿಂದ ಪಡೆದು ಅಭಿವೃದ್ದಿಗೊಳಿಸಲು ಕ್ರಮ ವಹಿಸುವಂತೆ ಹಾಗೂ ಮಾವಿನ ಕೆರೆ ಸುತ್ತಮುತ್ತಲ ಬೆಳದಿರುವ ಎಲ್ಲ ಜಾಲಗಿಡಗಳನ್ನು ತರೆವುಗೊಳಿಸಿ ಶುಚಿತ್ವ ಕಾಪಾಡಬೇಕೆಂದು ನಿರ್ದೇಶನ ನೀಡಿದರು.

ಅಪರ ಜಿಲ್ಲಾಧಿಕಾರಿ ದುರುಗೇಶ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಪಿ.ಎಸ್‌. ಕುಲಕರ್ಣಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶರಣಪ್ಪ ಪಟ್ಟೇದ, ವೆಂಕಟಸಿಂಗ್‌ ಹಜಾರ್‌, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next