ರಾಯಚೂರು: ವಿವಿಧ ಬಡಾವಣೆಗಳ ನಿವಾಸಿಗಳು ಸ್ವ ಪ್ರೇರಣೆಯಿಂದ ತಮ್ಮ ಏರಿಯಾಗಳ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಹೊರಗಿನಿಂದ ಯಾವುದೇ ವಾಹನಗಳು ಬಾರದಂತೆ ಕ್ರಮ ಕೈಗೊಂಡಿದ್ದಾರೆ.
ಶುಕ್ರವಾರವಷ್ಟೇ ಜಿಲ್ಲಾದ್ಯಂತ ಪೊಲೀಸ್ ಇಲಾಖೆ ನಾಲ್ಕು ಸಾವಿರ ಬ್ಯಾರಿಕೇಡ್ ಹಾಕಿತ್ತು. ಶನಿವಾರ ಬೆಳಗೆ ನಗರದ ವಿವಿಧ ಬಡಾವಣೆಗಳ ಜನ ಕಟ್ಟಿಗೆ, ಹಳೇ ಬ್ಯಾರಲ್, ಹಳೇ ಪೆಟ್ಟಿಗೆಗಳು ಸೇರಿದಂತೆ ವಿವಿಧ ಸಾಮಗ್ರಿಗಳಿಂದ ರಸ್ತೆ ಬಂದ್ ಮಾಡಿದ್ದರು. ಬೆಳ್ಳಂಬೆಳಗ್ಗೆ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಬರುತ್ತಿದ್ದ ಜನರನ್ನು ಪೊಲೀಸರು ಚದುರಿಸಿದರು. ಬೆಳಗ್ಗೆ ಅಂಗಡಿ ಮುಂಗಟ್ಟುಗಳನ್ನು ತೆಗೆಯದಂತೆ ಎಚ್ಚರಿಕೆ ನೀಡಲಾಯಿತು.
ಜಿಲ್ಲೆಯಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗಾಗಿ ಪಾಸ್ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ. ದೇವದುರ್ಗ ತಾಲೂಕಿನ ಹಿರೆರಾಯಕುಂಪಿ ಮಹಿಳೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗಕ್ಕೆ ಚಿಕಿತ್ಸೆ ಪಡೆದಿದ್ದರು. ಮಾತ್ರೆಗಳಿಲ್ಲದೇ ಬಳಲುತ್ತಿದ್ದರು. ಸ್ಪೀಡ್ ಪೋಸ್ಟ್ ಮಾಡಲೂ ಆಗುತ್ತಿರಲಿಲ್ಲ. ವಿಷಯ ತಿಳಿದ ಕೂಡಲೇ ಅಧಿಕಾರಿ ಬೆಂಗಳೂರಿನಿಂದ ಬರುತ್ತಿದ್ದ ಆಂಬುಲೆನ್ಸ್ ಮೂಲಕ ಮಾತ್ರ ತರಲು ಕ್ರಮ ಕೈಗೊಂಡಿದ್ದಾರೆ.
ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧೆಡೆಯಿಂದ ಬರುತ್ತಿರುವ ಜನರನ್ನು ಕ್ವಾರೇಂಟೇನ್‌ಗಳಲ್ಲಿ ಉಳಿಸಲಾಗಿದೆ. ಆದರೆ, ಅಲ್ಲೆಲ್ಲ ಸೂಕ್ತ ಸೌಕರ್ಯ ಕಲ್ಪಿಸಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಚಂದ್ರಬಂಡಾ ರಸ್ತೆಯಲ್ಲಿನ ಕ್ವಾರೇಂಟೇನ್ ನಲ್ಲಿ ಸ್ವಚ್ಚತೆಗೆ ಆದ್ಯತೆ ಕಲ್ಪಿಸಿಲ್ಲ. ಮಾಸ್ಕ್ಗಳು ನೀಡಿಲ್ಲ. ಸರಿಯಾಗಿ ನೀರಿನ ಸೌಲಭ್ಯವಿಲ್ಲ ಎಂದು ಅಲ್ಲಿರುವವರು ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಬೇರೆ ರಾಜ್ಯದಿಂದ ಬಂದವರನ್ನು, ಸ್ಥಳೀಯರನ್ನು ಒಂದೆಡೆ ಉಳಿಸಲಾಗಿದೆ. ಸಾಮಾಜಿಕ ಅಂತರವಂತೂ ಕಾಯ್ದುಕೊಳ್ಳುತ್ತಿಲ್ಲ. ಇದರಿಂದ ಕಾಯಿಲೆ ಇಲ್ಲದವರಿಗೂ ಸೋಂಕು ತಗಲುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿನ ಜನ ಅಸಮಾಧಾನ ಹೊರಹಾಕಿದ್ದಾರೆ.