ರಾಯಚೂರು: ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡ, ಇತರೆ ಜನರಿಗೆ ರುದ್ರಭೂಮಿ ಸೌಲಭ್ಯ ಇಲ್ಲದಿದ್ದಲ್ಲಿ ಸರ್ಕಾರ ನಿಗದಿ ಮಾಡಿದ ಅನುದಾನದಡಿ ರೈತರಿಗೆ ಕೂಡಲೇ ಭೂಮಿ ಖರೀದಿಗೆ ಮುಂದಾಗುವಂತೆ ಅಪರ ಜಿಲ್ಲಾಧಿಕಾರಿ ದುರುಗೇಶ ತಿಳಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಭೂಮಿಗೆ ಬೆಲೆ ನಿರ್ಧರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಪ್ರದೇಶಗಳಲ್ಲಿ ರುದ್ರಭೂಮಿ ಸೌಲಭ್ಯ ಕಲ್ಪಿಸಲು ಸರ್ಕಾರ ನಿಗದಿ ಪಡಿಸಿದ ಬೆಲೆಗೆ ಅನುಗುಣವಾಗಿ ರೈತರಿಂದ ಭೂಮಿ ಖರೀದಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮದ ರೈತರನ್ನು ಸಂಪರ್ಕಿಸಿ. ಯಾರು ಭೂಮಿ ನೀಡಲು ಬರುವರೋ ಅವರಿಂದ ಪಡೆಯುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಸಾಕಷ್ಟು ಕಡೆ ರುದ್ರಭೂಮಿ ಇಲ್ಲದೆ ಜನ ಶವಸಂಸ್ಕಾರ ಮಾಡಲು ಪ್ರಯಾಸ ಪಡುವಂತಿದೆ. ಅಂಥ ಕಡೆ ಸೂಕ್ತ ಭೂಮಿ ಗುರುತಿಸಿ ಖರೀದಿಗೆ ಮುಂದಾಗಿದೆ. ಸ್ಥಳೀಯ ಮಟ್ಟದ ಸಿಬ್ಬಂದಿಯಿಂದ ಮಾಹಿತಿ ಪಡೆಯಿರಿ. ನೀರಾವರಿ ಭೂಮಿ, ತರಿ ಭೂಮಿ, ಖುಷ್ಕಿ ಭೂಮಿಗಳ ಆಧಾರದ ಮೇಲೆ ಒಂದೊಂದು ಭೂಮಿಗೆ ಬೇರೆ ಬೇರೆ ದರ ನಿಗದಿ ಮಾಡಲಾಗಿದೆ. ರೈತರು ಈ ಬೆಲೆಗೆ ಒಪ್ಪಿಗೆ ನೀಡಿದರೆ ಮಾತ್ರ ಭೂಮಿಯನ್ನು ನೇರವಾಗಿ ಖರೀದಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಬಲವಂತ ಮಾಡುವಂತಿಲ್ಲ ಎಂದರು.
ಇದೇ ವೇಳೆ ರೈತರ ಸಮ್ಮತಿ ಮೇರೆಗೆ ಭೂಮಿ ಖರೀದಿ ಪ್ರಕ್ರಿಯೆ ನಡೆಯಿತು. ಸಿಂಧನೂರು ತಾಲೂಕಿನ ಶಾಂತಿನಗರ ಗ್ರಾಮ ವ್ಯಾಪ್ತಿಯ ಭೀಮರಾಜ ಕ್ಯಾಂಪ್‌ನಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗಾಗಿ ರುದ್ರಭೂಮಿ ಉದ್ದೇಶಕ್ಕಾಗಿ ಶಾಂತಿನಗರ ಗ್ರಾಮದ ಜಮೀನಿನ ಸರ್ವೇ ನಂ.76/x/6 ಕ್ಷೇತ್ರ 1 ಎಕರೆ ಪೈಕಿ
30 ಗುಂಟೆ ಖಾಸಗಿ ಜಮೀನನ್ನು ಖರೀದಿಸಲಾಯಿತು. ಮಸ್ಕಿ ತಾಲೂಕಿನ ಸುಲ್ತಾನಪೂರ ಗೊಲ್ಲರಹಟ್ಟಿ ಗ್ರಾಮದ ಹನುಮವ್ವ ಗಂಡ ಹನುಮಂತು ಅವರಿಂದ 2 ಎಕರೆ ಖುಷ್ಕಿ ಭೂಮಿ, ಛತ್ರಮ್ಮ ಗಂಡ ದೊಡ್ಡ ಛತ್ರಪ್ಪ ದಂಡಿನ ಅವರಿಂದ 2 ಎಕರೆ ಖುಷ್ಕಿ ಭೂಮಿ, ತಿಮ್ಮಾಪುರ ಗ್ರಾಮದ ಶಾರದಾ ಗಂಡ ಹರಿಶ್ಚಂದ್ರ ರಾಠೊಡ್ ಇವರಿಂದ 1 ಎಕರೆ ಖುಷ್ಕಿ ಭೂಮಿಯನ್ನು ರುದ್ರಭೂಮಿಗಾಗಿ ಖರೀದಿಸಲಾಯಿತು.
ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದ ಯಲ್ಲಮ್ಮ ಗಂಡ ಕರಿಯಪ್ಪ ಮತ್ತು ದುರುಗಮ್ಮ ಗಂಡ ಕರೆಪ್ಪ ಅವರಿಂದ 18 ಗುಂಟೆ ತರಿ ಭೂಮಿ ಮತ್ತು ವಿರುಪಾಪುರ ಗ್ರಾಮದ ಕಂಟೆಪ್ಪ ತಂದೆ ಹುಸೇನಪ್ಪ ಇವರಿಂದ 35 ಗುಂಟೆ ತರಿ ಭೂಮಿ ಮತ್ತು ಸೋಮಲಾಪುರ ಗ್ರಾಮದ ನಾಗಮ್ಮ ಗಂಡ ಸೋಮಶೇಖರ್ ಅವರಿಂದ 01 ಎಕರೆ 20 ಗುಂಟೆ ತರಿ ಭೂಮಿ, ಗಾಂಧಿ ನಗರದ ಲಕ್ಷ್ಮೀಕಾಂತಮ್ಮ ಗಂಡ ವೀರವೆಂಕಣ್ಣ ಅವರಿಂದ 20 ಗುಂಟೆ ತರಿ ಭೂಮಿ, ಎ. ಮಂಗಾದೇವಿ ಗಂಡ ಕೊಂದರಿ ಶೀನು ಅವರಿಂದ 1 ಎಕರೆ 20 ಗುಂಟೆ ತರಿ ಭೂಮಿಯನ್ನು ರುಧ್ರಭೂಮಿಗಾಗಿ ಖರೀದಿಸಲಾಯಿತು. ಸಹಾಯಕ ಆಯುಕ್ತ ರಾಜಶೇಖರ್ ಡಂಬಳ, ರಾಯಚೂರು ತಹಶೀಲ್ದಾರ್ ಹಂಪಣ್ಣ ಸಜ್ಜನ್, ಸಿಂಧನೂರು ತಹಸೀಲ್ದಾರ್ ಮಂಜುನಾಥ, ಸಿಬ್ಬಂದಿ ವಿಲಾಸ್ ಸೇರಿ ಇತರರಿದ್ದರು.