ರಾಯಚೂರು: ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಶನ್ ಅನುಷ್ಠಾನಕ್ಕಾಗಿ 700 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಿದ್ದು, ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ಜಿಪಂ ಸಿಇಒ ಜಿ. ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.
ನಗರದ ಜಿಪಂ ಸಿಇಒ ಕಚೇರಿಯಲ್ಲಿ ಶುಕ್ರವಾರ ನಡೆದ ಜಲ ಜೀವನ್ ಮಿಷನ್ ಸಭೆಯಲ್ಲಿ ಅವರು ಮಾತನಾಡಿದರು. ಶೇ.80ರಷ್ಟು ಭೂಮಿ ಮೇಲಿನ ಭಾಗದ ನೀರಿನ ಮೂಲ ಬಳಸಿಕೊಂಡು ಯೋಜನೆ ರೂಪಿಸಲಾಗಿದೆ. ಅಗತ್ಯವಿರುವೆಡೆ ಮಾತ್ರ ಅಂರ್ತಜಲದ ಮೂಲಕ ನೀರು ಪಡೆಯಲಾಗುವುದು. ಪೈಪ್‌ಲೈನ್ ಅಳವಡಿಸಿ ಪ್ರತಿ ಮನೆಗೂ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.
ಜುಲೈನಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದ್ದು, ಜೆಜೆಎಂ ಮಾರ್ಗಸೂಚಿಗಳನ್ವಯ 2023-24ರೊಳಗೆ ಮುಗಿಸುವ ಗುರಿ ಹೊಂದಲಾಗಿದೆ. ಶೇ.45ರ ಅನುದಾನವನ್ನು ಕೇಂದ್ರ ಸರ್ಕಾರ, ಶೇ.45ರಷ್ಟು ರಾಜ್ಯ ಸರ್ಕಾರ ಹಾಗೂ ಶೇ.10ರಷ್ಟು ಅನುದಾನವನ್ನು ಗ್ರಾಪಂ ಭರಿಸಲಿವೆ. ಯೋಜನೆ ಯಶಸ್ವಿಯಾದಲ್ಲಿ ಗ್ರಾಪಂಗಳಿಗೆ ಖರ್ಚು ಮಾಡಿದ ಶೇ.10ರಷ್ಟು ಹಣ ಹಿಂದಿರುಗಿಸಲಾಗುವುದು ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಗಣಪತಿ ಸಾಕರೆ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 16,90,665 ಜನಸಂಖ್ಯೆ ಇದೆ. 3,46,022 ಮನೆಗಳಿವೆ. ಇವುಗಳ ಪೈಕಿ 34,438 ಮನೆಗಳಿಗೆ ನಳದ ಸಂಪರ್ಕವಿದ್ದು, 3,11,584 ಮನೆಗಳಿಗೆ ಕಲ್ಪಿಸಬೇಕಿದೆ ಎಂದು ವಿವರಿಸಿದರು. ಜಿಪಂ ಉಪ ಕಾರ್ಯದರ್ಶಿ ಮಹ್ಮದ್ ಯೂಸೂಫ್, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಎಚ್.ಆರ್. ಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಸ್. ಅಬೀದ್, ಡಿಡಿಪಿಐ ಹರೀಶ ಗೋನಾಳ ಸಭೆಯಲ್ಲಿದ್ದರು.