Advertisement

ಜನಪ್ರತಿನಿಧಿಗಳಿಂದಲೇ ನಿಷೇಧಾಜ್ಞೆ ಉಲ್ಲಂಘನೆ

03:57 PM Apr 12, 2020 | Naveen |

ರಾಯಚೂರು: ಒಂದೆಡೆ ಜಿಲ್ಲಾಡಳಿತ ಕೋವಿಡ್ ಹರಡದಂತೆ ನಿಯಂತ್ರಿಸಲು ನಾನಾ ಪಡಿಪಾಟಲು ಪಡುತ್ತಿದ್ದರೆ, ಜನರಿಗೆ ಬುದ್ಧಿ ಹೇಳಬೇಕಾದ ಜನಪ್ರತಿನಿಧಿ ಗಳೇ ನಿಷೇಧಾಜ್ಞೆ ಉಲ್ಲಂಘಿಸುತ್ತಿದ್ದಾರೆ. ಕೆಲ ಜನಪ್ರತಿನಿಧಿಗಳು, ಪಕ್ಷಗಳು, ಸಂಘ ಸಂಸ್ಥೆಗಳು ದಿನಬಳಕೆ ವಸ್ತುಗಳ ವಿತರಣೆಗೆ ನಾ ಮುಂದು.. ತಾ ಮುಂದು.. ಎನ್ನುತ್ತಿದ್ದು, ಸಾಮಗ್ರಿ ಪಡೆಯಲು ನೂಕುನುಗ್ಗಲು ಏರ್ಪಡುತ್ತಿದೆ. ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾಗುತ್ತಿದ್ದರೆ, ಜನನಾಯಕರ ಬೆಂಬಲಿಗರು ಮಾತ್ರ ಕ್ಷಣಾರ್ಧದಲ್ಲಿ ಜನರನ್ನು ಗುಂಪುಗೂಡಿಸುತ್ತಿದ್ದಾರೆ.

Advertisement

ಶುಕ್ರವಾರ ಸಂಜೆ ಶಾಸಕರ ಬೆಂಬಲಿಗರು 33ನೇ ವಾರ್ಡಿನ ಯರಮರಸ್‌ನಲ್ಲಿ ತರಕಾರಿ ವಿತರಿಸುತ್ತಿದ್ದು, ಜನ ಮುಗಿಬಿದ್ದಿದ್ದರು. ಶನಿವಾರ ಒಂದು ಪಕ್ಷದ ನಾಯಕರೆಲ್ಲ ಗುಂಪು ಗೂಡಿ ಮನೆಮನೆಗೆ ತೆರಳಿ ಪಡಿತರ ಹಂಚಿದ್ದಾರೆ. ಅವರ ಹಿಂದೆ ಹತ್ತಾರು ಬೆಂಬಲಿಗರು ಜಮಾಯಿಸಿದ್ದು, ಸಾಮಾಜಿಕ ಅಂತರದ ನಿಯಮ ಗಾಳಿಗೆ ತೂರಲಾಗಿತ್ತು. ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಪಾಸಿಟಿವ್‌ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಸೀಲ್‌ ಡೌನ್‌ ಅಲ್ಲದಿದ್ದರೂ ಲಾಕ್‌ಡೌನ್‌ ಮುಂದುವರಿಸುವ ಸಾಧ್ಯತೆ ದಟ್ಟವಾಗಿದೆ. ಪಾಸಿಟಿವ್‌ ಬಂದಿಲ್ಲವೆಂಬ ನೆಪವಿಟ್ಟುಕೊಂಡು ಓಡಾಡುವವರಿಗೆ ಇನ್ನೂ ಕಡಿವಾಣ ಬೀಳುವ ಸಾಧ್ಯತೆಗಳಿವೆ.

ಶನಿವಾರ ಯಾವುದೇ ಶಂಕಿತರ ಗಂಟಲು ಮತ್ತು ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಿಲ್ಲ. ಈವರೆಗೆ 65 ಜನರ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, 61 ವರದಿಗಳು ನೆಗೆಟಿವ್‌ ಬಂದಿವೆ. ನಾಲ್ಕು ಬಾಕಿ ಉಳಿದಿದ್ದು, ಬರಬೇಕಿದೆ. ಇನ್ನೂ ಸರ್ಕಾರಿ ಕ್ವಾರಂಟೈನ್‌ನಲ್ಲಿ 89 ಜನರನ್ನು ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next