Advertisement

Raichur: ಗಗನೆಕ್ಕೇರಿದ ಭತ್ತದ ಬೆಲೆ- ಅಕ್ಕಿ ಬೆಲೆಯೂ ತುಟ್ಟಿ ಖಚಿತ

02:40 PM Dec 08, 2023 | Team Udayavani |

ರಾಯಚೂರು: ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲೂ ಎರಡನೇ ಬೆಳೆಗೆ ನೀರು ಸಿಗುವ ಸಾಧ್ಯತೆ ಕಡಿಮೆಯಾಗುತ್ತಿದ್ದಂತೆ ಭತ್ತದ ಬೆಲೆ ಗಗನಕ್ಕೇರಿದ್ದು, ಕ್ವಿಂಟಲ್‌ಗೆ 3550 ರೂ. ದಾಟಿದೆ. ಇದರಿಂದ ರಾಯಚೂರು ಎಪಿಎಂಸಿ ಆಂಧ್ರ, ತೆಲಂಗಾಣದ ರೈತರು ದಾಂಗುಡಿ ಇಡುತ್ತಿದ್ದಾರೆ.

Advertisement

ಕಳೆದ ವಾರ ಒಂದೇ ದಿನ 72 ಸಾವಿರ ಕ್ವಿಂಟಲ್‌ ಭತ್ತ ಆವಕವಾಗುವ ಮೂಲಕ ದಾಖಲೆ ನಿರ್ಮಿಸಿದೆ. ದಿನದಿಂದ ದಿನಕ್ಕೆ ಭತ್ತದ ಬೆಲೆ ಹೆಚ್ಚಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಗುರುವಾರ ಕೂಡ ಎಪಿಎಂಸಿಗೆ 42 ಸಾವಿರ ಕ್ವಿಂಟಲ್‌ಗಿಂತ ಹೆಚ್ಚು ಭತ್ತ ಬಂದಿದೆ. 2ನೇ ಬೆಳೆಗೆ ನೀರು ಸಿಗುವುದಿಲ್ಲ ಎಂಬ ನೋವು ಕೊಂಚ ಮರೆಯಾದಂತಾಗಿದೆ.

ರಾಯಚೂರು ಎಪಿಎಂಸಿಗೆ ನಿತ್ಯ ಆಂಧ್ರ ಮತ್ತು ತೆಲಂಗಾಣದಿಂದಲೇ ಶೇ.90ರಷ್ಟು ಭತ್ತ ಆವಕವಾಗುತ್ತಿದೆ. ಕರ್ನಾಟಕದಲ್ಲಿ ಈಗಷ್ಟೇ ಭತ್ತ ಕಟಾವು ಕೆಲಸಗಳು ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಬೆಲೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ಸೋನಾ ಮಸೂರಿ, ಆರ್‌ಎನ್‌ಆರ್‌ ಭತ್ತದ ಬೆಲೆ ಕ್ವಿಂಟಲ್‌ ಗೆ 3550 ರೂ. ನಿಗದಿಯಾಗಿದೆ. ಕನಿಷ್ಟ ದರ 2005 ನಿಗದಿಯಾಗಿದೆ. ಆದರೆ, ಖರೀದಿ ಕೇಂದ್ರಗಳಲ್ಲೂ 2200 ರೂ. ಆಸುಪಾಸು ದರ ನಿಗದಿಯಾಗಿದ್ದರಿಂದ ಮುಕ್ತ ಮಾರುಕಟ್ಟೆಯಲ್ಲಿಯೇ ಹೆಚ್ಚು ಮಾರಾಟವಾಗುತ್ತಿದೆ. ತುಂಗಭದ್ರಾ, ಆಲಮಟ್ಟಿಯಲ್ಲಿ ನೀರಿನ ಅಭಾವ
ಎದುರಾಗಿರುವುದು ಭತ್ತದ ಬೆಲೆ ಏರಿಕೆಗೆ ಕಾರಣವಾಗಿದೆ.

ಮಿಚಾಂಗ್‌ ಎಫೆಕ್ಟ್!: ಆಗಲೇ ಎರಡನೇ ಬೆಳೆಗೆ ನೀರಿಲ್ಲದ ಕಾರಣ ಭತ್ತದ ಅಭಾವ ಸೃಷ್ಟಿಯಾಗುವ ಎಲ್ಲ ಸಾಧ್ಯತೆಗಳಿದ್ದವು. ಅದರ ಜತೆಗೆ ಈಚೆಗೆ ಬೀಸಿದ ಮಿಚಾಂಗ್‌ ಚಂಡಮಾರುತದ ಎಫೆಕ್ಟ್ ಚೆನ್ನೈ ಮತ್ತು ಆಂಧ್ರದ ಕೆಲ ಭಾಗದಲ್ಲಿ ಜೋರಾಗಿದ್ದು, ಭತ್ತ
ನೆಲಕಚ್ಚಿ ಹಾಳಾಗಿದೆ. ಇದರಿಂದ ಇನ್ನಷ್ಟು ಅಭಾವ ಸೃಷ್ಟಿಸುವ ಸಾಧ್ಯತೆಗಳಿವೆ. ಆದರೆ, ಹೆಚ್ಚಾಗಿ ಊಟಕ್ಕೆ ಬಳಸುವ ಸೋನಾ,
ಆರ್‌ಎನ್‌ಆರ್‌ ಬೆಳೆ ತುಂಗಭದ್ರಾ ನದಿ ತೀರದಲ್ಲಿ ಬೆಳೆಯುತ್ತಿದ್ದು, ಈ ಕಡೆ ಉತ್ತಮ ಇಳುವರಿ ಸಿಕ್ಕಿದ್ದು, ಬೆಳೆ ಮೇಲೆ ಅಷ್ಟಾಗಿ ಪರಿಣಾಮವಾಗಿಲ್ಲ.

Advertisement

ರೈಸ್‌ ಮಿಲ್ಲರ್ ಮುನ್ನೆಚ್ಚರಿಕೆ
ಮುಂದಿನ ದಿನಗಳಲ್ಲಿ ಭತ್ತಕ್ಕೆ ಅಭಾವ ಸೃಷ್ಟಿಯಾಗುವ ಮುನ್ಸೂಚನೆ ಅರಿತ ರೈಸ್‌ ಮಿಲ್ಲರ್ಗಳು ಈಗಾಗಲೇ ಅಧಿಕ ಬೆಲೆಗೆ ಭತ್ತ ಖರೀದಿಸಿ ಗೋದಾಮುಗಳಲ್ಲಿ ಸಂಗ್ರಹಿಸುತ್ತಿದ್ದಾರೆ. ಎರಡನೇ ಬೆಳೆ ಇಲ್ಲದ ಕಾರಣ ಮಿಲ್‌ಗ‌ಳಿಗೆ ಹಲ್ಲಿಂಗ್‌ ಕೆಲಸ ಇಲ್ಲದಂತಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಅಲ್ಲದೇ, ಒಂದು ಕ್ವಿಂಟಲ್‌ ಅಕ್ಕಿ ಉತ್ಪಾದನೆಗೆ 1.60 ಕ್ವಿಂಟಲ್‌ ಭತ್ತ ಬೇಕಾಗಲಿದೆ. ಈಗಲೇ ಭತ್ತದ ದರ 3,500 ದಾಟಿದ್ದು, ಅಕ್ಕಿ ದರ ಸಹಜವಾಗಿ ಹೆಚ್ಚಲಿರುವ ಕಾರಣ ರೈಸ್‌ ಮಿಲ್ಲರ್ಗೂ ಲಾಭದ ನಿರೀಕ್ಷೆಯಲ್ಲಿದ್ದಾರೆ.

ರಾಯಚೂರು ಎಪಿಎಂಸಿಗೆ ಅತಿ ಹೆಚ್ಚು ಭತ್ತ ಆವಕ ಆಗುತ್ತಿದೆ. ಖರೀದಿ ಪ್ರಕ್ರಿಯೆಗೆ ತೊಂದರೆಯಾಗುತ್ತಿರುವ ಕಾರಣ ಎರಡು ಬಾರಿ ಖರೀದಿ ಸ್ಥಗಿತಗೊಳಿಸಲಾಗಿದೆ. ನೆರೆಯ ಆಂಧ್ರ, ತೆಲಂಗಾಣದಿಂದ ಶೇ.90ರಷ್ಟು ಭತ್ತ ಬರುತ್ತಿದೆ. ಜಿಲ್ಲೆಯಲ್ಲಿ ಡಿ.10ರ ಬಳಿಕ ಭತ್ತ ಕಟಾವು ಹೆಚ್ಚಾಗಲಿದ್ದು, ಇನ್ನೂ ಹೆಚ್ಚಿನ ಪ್ರಮಾಣದ ಭತ್ತ ಬರುವ ನಿರೀಕ್ಷೆ ಇದೆ. ಆಂಧ್ರ, ಚೆನ್ನೈನಲ್ಲಿ ತೂಫಾನ್‌
ಪರಿಣಾಮದಿಂದ ಭತ್ತ ಹಾಳಾಗಿದ್ದು, ಸ್ಥಳೀಯವಾಗಿ ಬೇಡಿಕೆ ಹೆಚ್ಚಾಗಿದೆ.
*ಆದೆಪ್ಪ, ಕಾರ್ಯದರ್ಶಿ, ಎಪಿಎಂಸಿ, ರಾಯಚೂರು

 

Advertisement

Udayavani is now on Telegram. Click here to join our channel and stay updated with the latest news.

Next