ರಾಯಚೂರು: ಒಂದು ಕಾಲದಲ್ಲಿ ಬೀದಿ ಬದಿ ದಿನವಿಡೀ ವ್ಯಾಪಾರ ಮಾಡಿದರೂ 800-1000 ರೂ. ದುಡಿಯಲು ಕಷ್ಟಪಡುತ್ತಿದ್ದ ವ್ಯಕ್ತಿ ಆನ್‌ಲೈನ್ ವ್ಯವಸ್ಥೆಯಿಂದ ಕೇವಲ ಎರಡು ತಿಂಗಳಲ್ಲಿ ಬರೋಬ್ಬರಿ 2,400 ಕೆ.ಜಿ ಹಣ್ಣು ಮಾರಾಟ ಮಾಡಿದ್ದಾನೆ!
Advertisement
ತಾಲೂಕಿನ ಮಂಡಲಗೇರಾ ಗ್ರಾಮದ ರೈತ ಗುಡಿಪಾಡು ಆಂಜನೇಯ ತನ್ನ ನಾಲ್ಕೂವರೆ ಎಕರೆ ಜಮೀನಿನಲ್ಲಿ ಉತ್ತಮ ಇಳುವರಿ ಜತೆಗೆ ಲಾಭದ ಮುಖ ನೋಡಿದ್ದಾನೆ. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಅಭಿವೃದ್ಧಿಪಡಿಸಿದ “ಕರ್ ಸಿರಿ’ ಆನ್‌ಲೈನ್ ತಂತ್ರಾಂಶವೇ ಇದಕ್ಕೆ ಮುಖ್ಯ ಕಾರಣ. ರಾಜ್ಯದ 180 ರೈತರು ಈ ವೆಬ್‌ಸೈಟ್ ನಲ್ಲಿದ್ದಾರೆ. ಬೇರೆ ರೈತರು 400 ಕೆಜಿವರೆಗೆ ಮಾರಿದರೆ ಆಂಜನೇಯ 2,400 ಕೆಜಿ ಮಾರಾಟ ಮಾಡಿದ್ದಾರೆ.
Related Articles
Advertisement
ಆದರೆ, ಅದರ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದ ಆಂಜನೇಯ ಏನು ಮಾಡಬೇಕು ಎಂದು ತೋಚದಾದಾಗ ಅಧಿ ಕಾರಿಗಳೇ ಮಾರ್ಗದರ್ಶನ ನೀಡಿ “ಹರಿದ್ವಾರ್ ಆರ್ಗನಿಕ್ ಎಂಟರ್‌ಪ್ರೈಸೆಸ್’ ಮೂಲಕ “ಕರ್ ಸಿರಿ’ ತಂತ್ರಾಂಶದಲ್ಲಿ ಹೆಸರುನೋಂದಾಯಿಸಿಕೊಟ್ಟರು. ಅದರಲ್ಲಿ ಮಾವಿನ ತಳಿಗಳ ಸಹಿತ ಎಲ್ಲ ಮಾಹಿತಿ, ವಿಳಾಸ ಪ್ರಕಟಿಸಿದ್ದಾರೆ. ಹಣ್ಣುಗಳ ರುಚಿಗೆ ಜನ ಮಾರು ಹೋಗಿದ್ದು, ಸಾಕಷ್ಟು ಬೇಡಿಕೆ ಬಂದಿವೆ. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಮಂಗಳೂರಿಗೆ ಕಳುಹಿಸಿದ ಹಣ್ಣನ್ನು ಅಲ್ಲಿನ ವ್ಯಾಪಾರಿ ಸಿಂಗಾಪುರಗೆ ಕಳುಹಿಸಿದ್ದು ಸಾಕಷ್ಟು ಬೇಡಿಕೆ ಬಂದಿದೆ. ಬೆಂಗಳೂರಿನಿಂದ ಕೊಲ್ಕತ್ತಾ ಸೇರಿದಂತೆ ಬೇರೆ ಭಾಗಗಳಿಗೂ ರಫ್ತಾಗುತ್ತಿದೆ. ಪ್ಯಾಕಿಂಗ್ ಕೋರಿಯರ್ ವೆಚ್ಚ ಸೇರಿಸಿ ಒಂದು ಕೆ.ಜಿ 150 ರೂ. ಶುಲ್ಕ ವಿಧಿಸುತ್ತಿದ್ದಾರೆ ಆಂಜನೇಯ. ಮೂರು ಕೆ.ಜಿಯಿಂದ 40 ಕೆ.ಜಿವರೆಗೆ ಮಾರಾಟ ಮಾಡಿದ್ದಾರೆ. ಅಂಚೆ ಇಲಾಖೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಜಿಲ್ಲಾಧಿಕಾರಿ ಪ್ರೋತ್ಸಾಹ
ನೀನು ಬೆಳೆದ ಹಣ್ಣುಗಳನ್ನು ಗಣ್ಯರಿಗೆ ತಲುಪಿಸಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವಂತೆ ಮಹಾರಾಷ್ಟ್ರದ ಕಾಡಸಿದ್ಧೇಶ್ವರರು ಸಲಹೆ ನೀಡಿದ್ದರು. ಅದರಂತೆ ಮಾಡಿದ್ದರಿಂದ ಸ್ಥಳೀಯವಾಗಿ ಬೇಡಿಕೆ ಸೃಷ್ಟಿಯಾಯಿತು. ಜತೆಗೆ ಸಾವಯವ ಪದ್ಧತಿಯಡಿ ಬೆಳೆದ ಹಣ್ಣು ಎಂದು ಬ್ಯಾನರ್ ಮಾಡಿಸಿ ಡಿಸಿ ಮನೆ ಪಕ್ಕದಲ್ಲೇ ಮಾರಾಟ ಮಾಡುತ್ತಿದ್ದರು. ಇದನ್ನು ಗಮನಿಸಿದ ಆಗಿನ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಖುದ್ದಾಗಿ ಬಂದು ವಿಚಾರಣೆ ಮಾಡಿದ್ದರು. ಮಾವು ಮೇಳಗಳಲ್ಲಿ ಪಾಲ್ಗೊಳ್ಳಲು ಅನುಕೂಲ ವಾಗಲು ಪ್ರಮಾಣಪತ್ರ ನೀಡಿದರು. ಅಲ್ಲಿಂದ ಆಂಜನೇಯ ಬೆಳೆದ ಮಾವುಗಳಿಗೆ ಬೇಡಿಕೆ ಹೆಚ್ಚಿತು. ನಾನು ಬೆಳೆದ ಹಣ್ಣಿಗೆ ರಾಜ್ಯ ಮಾತ್ರವಲ್ಲದೇ ವಿದೇಶದಿಂದಲೂ ಬೇಡಿಕೆ ಇದೆ. ಈ ಬಾರಿ ಎರಡೂವರೆ ಟನ್ ಮಾವು ಮಾರಾಟವಾಗಿದೆ. ಇದು ನನ್ನೊಬ್ಬನಿಂದ ಸಾಧ್ಯವಾಗಿಲ್ಲ. ಕುಟುಂಬ ಸದಸ್ಯರ ಸಹಕಾರದಿಂದ ಮಾಡುತ್ತಿದ್ದೇವೆ.
ಗುಡಿಪಾಡು ಆಂಜನೇಯ, ಮಾವು ಬೆಳೆಗಾರ