Advertisement

ವ್ಯಸನಿಗಳ ದೌರ್ಬಲ್ಯವೇ ಆದಾಯದ ಮೂಲ

03:39 PM May 10, 2020 | Naveen |

ರಾಯಚೂರು: ಲಾಕ್‌ಡೌನ್‌ನಿಂದ ಎಷ್ಟೋ ಜನ ತಿನ್ನಲು ಅನ್ನವಿಲ್ಲದೇ ಪರದಾಡಿದರೆ, ಕೆಲ ವರ್ತಕರು ಮಾತ್ರ ವ್ಯಸನಿಗಳ ದೌರ್ಬಲ್ಯ ಅಡ್ಡವಾಗಿಟ್ಟುಕೊಂಡು ಲಕ್ಷ ಲಕ್ಷ ರೂ. ಲಾಭ ಗಳಿಸಿಕೊಳ್ಳುತ್ತಿದ್ದಾರೆ. ಮದ್ಯ, ಗುಟ್ಕಾ, ಸಿಗರೇಟ್‌ನಂಥ ವಸ್ತುಗಳನ್ನು ನಾಲ್ಕೈದು ಪಟ್ಟು ಅಧಿಕ ದರಕ್ಕೆ ಮಾರುವ ಮೂಲಕ ಅಕ್ರಮ ಸ್ವತ್ತು ಗಳಿಸುತ್ತಿದ್ದಾರೆ.

Advertisement

ಮಾ.22ರಂದು ಜನತಾ ಕರ್ಫ್ಯೂ ಘೋಷಿಸಿದ ಸರ್ಕಾರ ಮರುದಿನದಿಂದಲೇ ಎಲ್ಲೆಡೆ ಲಾಕ್‌ಡೌನ್‌ ಜಾರಿಗೆ ತಂದಿತು.ಆದರೆ, ಈ ಬಗ್ಗೆ ಯಾರಿಗೂ ಪೂರ್ವಾಪರ ಗೊತ್ತಿಲ್ಲದ ಕಾರಣ ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು. ಯಾವಾಗ ಎರಡನೇ ಹಂತದ ಲಾಕ್‌ಡೌನ್‌ ಜಾರಿಗೊಳಿಸುವ ಸೂಚನೆ ಬರುತ್ತಿದ್ದಂತೆ ಎಲ್ಲ ವಸ್ತುಗಳ ದರ ಹೆಚ್ಚಿಸಲಾಯಿತು. ಅದರಲ್ಲೂ ಮಾದಕ ವಸ್ತುಗಳ ದರವಂತೂ ಗಗನಕ್ಕೇರಿತು. ಆರಂಭದಲ್ಲಿ ದುಪ್ಪಟ್ಟು ಹಣ ಪಡೆದರೆ, 2ನೇ ಲಾಕ್‌ ಡೌನ್‌ ಜಾರಿಯಾಗುತ್ತಿದ್ದಂತೆ ನಾಲ್ಕೈದು ಪಟ್ಟು ಅಧಿಕ ದರಕ್ಕೆ ಮಾರಲಾಯಿತು. ಕೇಳಿದರೆ ಲಾಕ್‌ ಡೌನ್‌ನಿಂದ ಯಾವುದೇ ವಸ್ತು ಬರುತ್ತಿಲ್ಲ ಎಂದು ನೆಪ ಹೇಳಿ ಜನರಿಂದ ವರ್ತಕರು ಸುಲಿಗೆ ಮಾಡಿದರು.

ಮದ್ಯ-ಗುಟ್ಕಾ ದರ ಗಗನಕ್ಕೆ: ನಿಜವಾಗಿಯೂ ಲಾಕ್‌ಡೌನ್‌ ವರವಾಗಿರುವುದು ಮದ್ಯ ಮತ್ತು ಗುಟ್ಕಾ ಸಿಗರೇಟ್‌ ವರ್ತಕರಿಗೆ. ದೊಡ್ಡ ಬ್ಲಾಕ್‌ ಮಾರ್ಕೆಟ್‌ ತಯಾರಾಗಿ ಒಂದಕ್ಕೆ ಐದು ಪಟ್ಟು ದರ ಹೆಚ್ಚಿಸಲಾಯಿತು. ಕೇವಲ 5 ರೂ.ಗೆ ಸಿಗುತ್ತಿದ್ದ ಗುಟ್ಕಾ ಈಗ 30 ರೂ. ಮಾರಾಟವಾದರೆ, ಸಿಗರೇಟ್‌ ದರ ಕೂಡ ನಾಲ್ಕೈದು ಪಟ್ಟು ಹೆಚ್ಚಾಗಿತ್ತು. 700 ರೂ. ಮೌಲ್ಯದ ಮದ್ಯದ ಬಾಟಲಿ 5 ಸಾವಿರ ರೂ. ವರೆಗೂ ಮಾರಾಟ ಮಾಡಿದ್ದಾರೆ ಎಂದು ತಿಳಿಸುತ್ತವೆ ಮೂಲಗಳು. ಇದಕ್ಕೆ ಕೆಲ ಮದ್ಯ ವರ್ತಕರೇ ಮಧ್ಯವರ್ತಿಗಳಂತೆ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಂಜೆ ವೇಳೆ ಯಾರು ಹೆಚ್ಚು ಹಣ ನೀಡುತ್ತಾರೋ ಅವರಿಗೆ ಮಾರುವ ಮೂಲಕ ಏಕಮುಖೀ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಇನ್ನೂ ಕೆಲ ಮದ್ಯದಂಗಡಿ ಮಾಲೀಕರೇ ತಮ್ಮ ಅಂಗಡಿ ಕಳವಿಗೆ ಕುಮ್ಮಕ್ಕು ನೀಡಿ ಅದೇ ಮದ್ಯ ಬ್ಲಾಕ್‌ನಲ್ಲಿ ಮಾರಿದ ಘಟನೆಗಳು ನಡೆದಿದೆ.

ಅನ್ವಯಿಸದ ದರನೀತಿ: ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಹಣ್ಣು ವ್ಯಾಪಾರಿಗಳು ದುಪ್ಪಟ್ಟು ದರಕ್ಕೆ ಮಾರಾಟ ಮಾಡುವ ಸಂಗತಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ದರ ನೀತಿ ಪ್ರಕಟಿಸಿತು. ತರಕಾರಿ, ಹಣ್ಣು, ದಿನಸಿಗಳು ಇಷ್ಟೇ ದರಕ್ಕೆ ಮಾರಬೇಕು. ಆದೇಶ ಮೀರಿದಲ್ಲಿ ಅಂಗಡಿ ಪರವಾನಗಿ ರದ್ದು ಮಾಡುವ ಸೂಚನೆ ನೀಡಿತು. ಆದರೆ, ಮದ್ಯ, ಗುಟ್ಕಾ, ಸಿಗರೇಟ್‌ ಗಳು ಅಗತ್ಯ ವಸ್ತುಗಳ ಸಾಲಿಗೆ ಸೇರದ ಕಾರಣ ದರ ನೀತಿ ಪ್ರಕಟಿಸಲು ಬರುವುದಿಲ್ಲ ಎಂದು ಅಧಿಕಾರಿಗಳು ಕೈಚೆಲ್ಲಿದರು. ಇದೇ ಕಾರಣಕ್ಕೆ ದಿನಸಿ ಅಂಗಡಿಗಳಲ್ಲೇ ರಾಜಾರೋಷವಾಗಿ ಗುಟ್ಕಾ, ಸಿಗರೇಟ್‌ ಮಾರುತ್ತಿದ್ದರು. ಎಲ್ಲೆಡೆ ಮದ್ಯದಂಗಡಿ ಬದ್‌ ಇದ್ದಾಗ್ಯೂ ಹಳ್ಳಿಗಳಲ್ಲಿ ಕಡಿಮೆ ದರದ ಮದ್ಯ ಸಿಗುತ್ತಿತ್ತು. ಯಾವಾಗ ಸರ್ಕಾರ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಿತೋ ಆಗಲೇ ಮದ್ಯಪ್ರಿಯರು ನಿಟ್ಟುಸಿರು ಬಿಟ್ಟರು. ಆದರೆ, ಸರಕು ಸಾಗಣೆ ಮುಕ್ತವಾಗಿಲ್ಲದ ಕಾರಣ ಗುಟ್ಕಾ ಮಾತ್ರ ಇನ್ನೂ ಅದೇ ದರಕ್ಕೆ ಮಾರಾಟವಾಗುತ್ತಿದೆ.

ಲಾಕ್‌ಡೌನ್‌ ವೇಳೆ ಅಕ್ರಮ ಮದ್ಯ ಮಾರಾಟ, ಸೇಂದಿ, ಕಳ್ಳಬಟ್ಟಿ, ಮದ್ಯದ ಅಂಗಡಿ ಕಳವು ಸೇರಿದಂತೆ 100ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ವಿಸ್ಕಿ, ಬೀಯರ್‌, ಕಳ್ಳಭಟ್ಟಿ, ಸೇಂದಿ, ಸಿಎಚ್‌ ಪೌಡರ್‌ ಸೀಜ್‌ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.
ಕೆ. ಪ್ರಶಾಂತಕುಮಾರ,
ಅಬಕಾರಿ ಇಲಾಖೆ ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next