Advertisement

ರಾಯಿ: ವಿದ್ಯುತ್‌ ಸಂಪರ್ಕ ತಪ್ಪಿಸಿದ್ದರೂ ಗ್ರೈಂಡರ್ ಸ್ಫೋಟ!

03:45 AM Jul 14, 2017 | Team Udayavani |

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ರಾಯಿ ಸಮೀಪದ ಸೀತಾಳದಲ್ಲಿ ಮಹಿಳೆಯೊಬ್ಬರು ನೂತನವಾಗಿ ಖರೀದಿಸಿದ ಹೊಸ ಗ್ರೈಂಡರ್ ಒಂದು ಆಕಸ್ಮಿಕವಾಗಿ ಸ್ಫೋಟಗೊಂಡು ಸುಟ್ಟು ಕರಕಲಾದ ಘಟನೆ ಸಂಭವಿಸಿದೆ.

Advertisement

ಇಲ್ಲಿನ  ನಿವಾಸಿ ಸುಂದರಿ ಸಪಲ್ಯ ಅವರು ಸೊಸೆ ರೇಖಾ ಕೃಷ್ಣ ಅವರ ಮೂಲಕ  ಖರೀದಿಸಿದ್ದ  ಹೊಸ ಗ್ರೈಂಡರ್
ಜು.8ರಂದು ಮನೆಯಲ್ಲಿ ಏಕಾಏಕಿ ಸ್ಫೋಟಗೊಂಡು ಮನೆಯ ವರನ್ನು ಭಯಭೀತರನ್ನಾಗಿಸಿದೆ.

ಐದು ವರ್ಷಗಳ ಗ್ಯಾರಂಟಿ
ಸುಂದರಿ ಸಪಲ್ಯ ಅವರ ಮನೆ ಯಲ್ಲಿ ಒಟ್ಟು 14 ಮಂದಿಯ ಅವಿಭಕ್ತ ಕುಟುಂಬ ಕೃಷಿ ಚಟುವಟಿಕೆಯಲ್ಲಿ ಜೀವನ ನಡೆಸುತ್ತಿದ್ದು, ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಭತ್ತದ ಕೃಷಿ ಆರಂಭಿಸುತ್ತಿದ್ದಾರೆ.  ಅವರ ಮನೆ ಯಲ್ಲಿ ವಿದ್ಯುತ್‌ ರಹಿತ ದೊಡ್ಡ ಅರೆಯುವ ಕಲ್ಲೊಂದು ಇದ್ದರೂ ಕೃಷಿ ಚಟುವಟಿಕೆ ವೇಳೆ ಅನುಕೂಲ ವಾಗಲೆಂದು ಜು. 4ರಂದು ಪ್ರತಿಷ್ಠಿತ ಕಂಪೆನಿಯ ಹೊಸ ವಿದ್ಯುತ್‌  ಗ್ರೈಂಡರ್ ಖರೀದಿಸಿದ್ದಾರೆ. ಇದೇ ವೇಳೆ ಐದು ವರ್ಷಗಳ ಗ್ಯಾರಂಟಿ ಕಾರ್ಡ್‌ ಕೂಡ ನೀಡಲಾಗಿದೆ.
 
ಕಾರಣ ನಿಗೂಢ!
ಜು. 8ರಂದು ಬೆಳಗ್ಗೆ ಮನೆಯಲ್ಲಿ ಹೊಸ ಗ್ರೈಂಡರ್ ನಲ್ಲಿ ಅಕ್ಕಿ ಅರೆದು ಬಳಿಕ ವಿದ್ಯುತ್‌ ಸಂಪರ್ಕದ ಪ್ಲಗ್‌ ಕಳಚಿಟ್ಟು ಗ್ರೈಂಡರ್ ಶುಚಿಗೊಳಿಸಿ ಬಟ್ಟೆ ಮುಚ್ಚಿದ್ದರು. ಅಂದು ಮನೆ ಮಂದಿಯಲ್ಲಿ ಕೆಲವರು ಸಂಬಂಧಿಕರ ಮನೆಯಲ್ಲಿ ನಡೆದ ಶುಭ ಕಾರ್ಯಕ್ರಮಕ್ಕೆ ತೆರಳಿದ್ದು, ಉಳಿದಂತೆ ಇತರರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದರು. ಸುಮಾರು 10.45 ಗಂಟೆಯ ಹೊತ್ತಿಗೆ ಮನೆಯಲ್ಲಿ  ಸುಂದರಿ ಸಪಲ್ಯ ಅವರು ಮತ್ತು ಎರಡೂವರೆ ವರ್ಷದ ಪುಟ್ಟಮಗು ಶ್ರೇಯಸ್‌ ಮಾತ್ರ ಇದ್ದ ವೇಳೆ ಮನೆಯ ಅಡುಗೆ ಕೋಣೆಯಲ್ಲಿ ದಿಢೀರನೆ ಭಾರೀ ಸದ್ದು ಕೇಳಿಸಿದೆ. ಈ ಸ್ಥಳದಲ್ಲಿದ್ದ  ಮಗು ಬೊಬ್ಬೆ ಹಾಕುತ್ತಾ ಹೊರಗೆ ಓಡಿ ಬಂದಿದೆ. ತತ್‌ಕ್ಷಣವೇ ಸುಂದರಿ ಅವರು ಓಡಿ ಹೋಗಿ ನೋಡಿದಾಗ  ಗ್ರೈಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿ ಉರಿಯುತ್ತಿತ್ತು. ಸ್ಫೋಟದ ರಭಸಕ್ಕೆ ಗ್ರೈಂಡರ್ ಸುಟ್ಟು ಕರಕಲಾಗಿದ್ದು, ಇದರ ಮೇಲ್ಭಾಗದಲ್ಲಿ ಗೋಡೆಯಲ್ಲಿ ಅಳವಡಿಸಲಾಗಿದ್ದ ಮರದ ಹಲಗೆ ಮತ್ತು ಅದರ ಮೇಲಿನ ಸಾಂಬಾರು ಪದಾರ್ಥಗಳು ನೆಲದಲ್ಲಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿದ್ದವು. 

ಈ ಸದ್ದು ಮತ್ತು ಮಗುವಿನ ಕಿರುಚಾಟ ಕೇಳಿದ ನೆರೆಮನೆಯವರು ಧಾವಿಸಿ ಬಂದಿದ್ದಾರೆ. ಅಷ್ಟರಲ್ಲಿ ಭಯಭೀತ ಗೊಂಡಿದ್ದರೂ ಸುಂದರಿ ಅವರು ನೀರು ಹಾಕಿ ಬೆಂಕಿ ನಂದಿಸುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. 

ಅಡುಗೆ ಕೋಣೆ ಮೇಲ್ಭಾಗದಲ್ಲಿ 15 ಗೋಣಿ ಅಕ್ಕಿ ಸಂಗ್ರಹಿಸಿಡಲಾಗಿದ್ದು, ಪಕ್ಕದಲ್ಲೇ ತೆರೆದ ಕೋಣೆಯಲ್ಲಿ ಅಡುಗೆ ಸಿಲಿಂಡರ್‌ ಕೂಡ ಇತ್ತು ಎಂದು ತಿಳಿಸಿದ್ದಾರೆ. ಅಂದು ಮಳೆ, ಗುಡುಗು, ಮಿಂಚು ಯಾವುದೂ ಇಲ್ಲದೆ ಬಿಸಿಲಿನ ವಾತಾವರಣ ಇತ್ತು. ಇನ್ನೊಂದೆಡೆ ವಿದ್ಯುತ್‌ ಸಂಪರ್ಕ ತೆಗೆದಿಟ್ಟಿರುವ ಗ್ರೈಂಡರ್ ಸ್ಫೋಟಗೊಂಡಿರುವುದು ಮನೆಯವರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next