ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ (ಸೆಂಟ್ರಲ್) ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ನಟ ಪ್ರಕಾಶ ರೈ ತಿಳಿಸಿದ್ದಾರೆ. ಹಾಗೇ ಚುನಾವಣೆ ನಂತರ ರಾಷ್ಟ್ರಮಟ್ಟದ ಮಹಾಘಟಬಂಧನ್ ಜತೆ ಕೈ ಜೋಡಿಸುವುದಾಗಿಯೂ ಘೋಷಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ವಿದ್ಯಾಭ್ಯಾಸ ಪೂರೈಸಿ ರಂಗಭೂಮಿ ಹಾಗೂ ಸಿನಿಮಾ ಪಯಣ ಆರಂಭಿಸಿದ್ದು ಕೂಡ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿಯೇ. ನನ್ನ ಬೇರು ಇಲ್ಲಿದೆ. ಕುಟುಂಬದವರು, ಆಪ್ತರು ಮತ್ತು ಗೆಳೆಯರು ಇಲ್ಲೇ ನೆಲೆಸಿದ್ದಾರೆ. ಹೀಗಾಗಿ ಸ್ಪರ್ಧೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ,’ ಎಂದು ಹೇಳಿದರು.
ಜನರ ಪ್ರಣಾಳಿಕೆ ತಯಾರಿಸುವೆ: “ನನ್ನ ತಂಡದ ಸದಸ್ಯರು 20 ದಿನಗಳ ಕಾಲ ಬೆಂಗಳೂರು ಕೇಂದ್ರದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದಾರೆ. ನಾನು ಚುನಾವಣೆ ಪ್ರಣಾಳಿಕೆ ಬದಲಿಗೆ ಜನರ ಪ್ರಣಾಳಿಕೆ ತಯಾರಿಸುವೆ,’ ಎಂದು ಹೇಳಿದ ಪ್ರಕಾಶ್ ರೈ, “ಇಷ್ಟು ದಿನ “ಜಸ್ಟ್ ಆಸ್ಕಿಂಗ್’ ಎಂದು ಪ್ರಶ್ನೆಗಳನ್ನು ಕೇಳಿದ್ದಾಯಿತು. ಈಗ ನಾನು ಉತ್ತರ ನೀಡುವ ಸರದಿ. ಇನ್ನೂ ಮುಂದೆ ಏನಿದ್ದರೂ “ಜಸ್ಟ್ ಆನ್ಸರಿಂಗ್’. ಜ.20ರಿಂದ ಚುನಾವಣಾ ಪ್ರಚಾರ ಆರಂಭಿಸಲಾಗುವುದು,’ ಎಂದು ಮಾಹಿತಿ ನೀಡಿದರು.
ಸಂಸತ್ತಿನಲ್ಲಿ ಜನರ ಧ್ವನಿಯಾಗಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಕೋಮುವಾದದ ವಿರುದ್ಧ ಯಾರೇ ಹೋರಾಡಿದರೂ ನನ್ನ ಬೆಂಬಲವಿದೆ. ಈ ನಿಟ್ಟಿನಲ್ಲಿ ಮಹಾಘಟಬಂಧನ್ ಜತೆ ಕೈಜೋಡಿಸಲಿದ್ದೇನೆ.
-ಪ್ರಕಾಶ್ ರೈ, ನಟ