ಶಿವಮೊಗ್ಗ: ”ರಾಹುಲ್ ಗಾಂಧಿ ಗೆದ್ದು ಬಂದಿರುವುದು ಶೇಕಡಾ 60 ಮುಸ್ಲಿಂ ಮತದಾರರು ಇರುವ ಪ್ರದೇಶದಲ್ಲಿ,ಭಯೋತ್ಪಾದಕರು ಪಿಓಕೆಯಲ್ಲಿ ಅಡಗಿಕೂತ ಹಾಗೆ ಅಲ್ಪಸಂಖ್ಯಾತರು ಹೆಚ್ಚು ಇರುವೆಡೆ ಹೋಗಿದ್ದಾರೆ.ಬಿಜೆಪಿ ಅಲ್ಪಸಂಖ್ಯಾತ ವಿರೋಧಿಯಲ್ಲ.ಕಾಂಗ್ರೆಸ್ ಪಕ್ಷದಿಂದ ಬುದ್ಧಿ ಕಲಿಯಬೇಕಿಲ್ಲ” ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದ್ದಾರೆ.
ಬಿಜೆಪಿ ಯುವಮೋರ್ಚಾ ಆಯೋಜಿಸಿದ್ದ ಜಿಲ್ಲಾ ಯುವ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಈ ನಿಟ್ಟಿನಲ್ಲಿ ಎಲ್ಲ ಮೋರ್ಚಾಗಳ ಸಮಾವೇಶವನ್ನು ಮಾಡಬೇಕು ಎಂದು ನಾವು ತೀರ್ಮಾನಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಯುವ ಮೋರ್ಚಾ ಕಾರ್ಯಕರ್ತರ ಕರ್ತವ್ಯ ಈಗ ಪ್ರಾರಂಭವಾಗುತ್ತದೆ.ಬಿಜೆಪಿಯ ಭದ್ರಕೋಟೆಯಲ್ಲಿ ಭದ್ರಾವತಿಯನ್ನು ಗೆದ್ದು ತೋರಿಸಬೇಕು. ಅಲ್ಲಿವರೆಗೂ ನಮ್ಮ ಯುವ ಮೋರ್ಚಾದ ಕಾರ್ಯಕರ್ತರ ಕರ್ತವ್ಯ ಮುಗಿಯುದಿಲ್ಲ ಎಂದರು.
ಭಾರತ ಜಗತ್ತಿನಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲಬೇಕು ಎಂದರೇ ಅದು ಯುವಕರಿಗೆ ಶಕ್ತಿಯನ್ನು ನೀಡಬೇಕು. ಒಬ್ಬ ರಾಜಕಾರಣಿ ಮುಂದಿನ ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ. ಆದರೆ ಒಬ್ಬ ರಾಜಕೀಯ ಮುತ್ಸದ್ದಿ ಮುಂದಿನ ಪೀಳಿಗೆ ನೋಡುತ್ತಾನೆ. ಭಾರತ ದೇಶ ಈಗ ಬಡ ರಾಷ್ಟ್ರ ಎಂದ ಪಟ್ಟಿಯಿಂದ ಈಗ ಹೊರಬಂದಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಕೂತಲ್ಲಿ ನಿಂತಲ್ಲಿ ಟೀಕೆ ಮಾಡುತ್ತಾರೆ. ಕಾಂಗ್ರೆಸ್ ನ ಪಾಪದ ಕೂಸಾಗಿದ್ದ ಆರ್ಟಿಕಲ್ 370 ಸಾವಿರಾರು ಕುಟುಂಬಗಳನ್ನು ಬೀದಿಗೆ ತಂದಿತ್ತು. ಈಗ ಪ್ರಧಾನಿ ಮೋದಿ 370 ಕಿತ್ತು ಆದರ್ಶವಾಗಿದ್ದಾರೆ ಎಂದರು.
ಲಾಲ್ ಚೌಕ್ ನಲ್ಲಿ ಧೈರ್ಯವಾಗಿ ಭಾರತದ ಧ್ವಜವನ್ನು ಹಾರಿಸಲು ಶಕ್ತಿಕೊಟ್ಟಿದ್ದು ಬಿಜೆಪಿ. ಕಳೆದ ಎಂಟು ಒಂಬತ್ತು ವರ್ಷಗಳಿಂದ ನಕ್ಸಲ್ ಬಗ್ಗೆ ಕೇಳುತ್ತಿಲ್ಲ.ನಕ್ಸಲಿಸಂ ಬೆನ್ನು ಮೂಳೆ ಬಿಜೆಪಿ ಸರ್ಕಾರ ಮುರಿದಿದೆ. 3 ಲಕ್ಷ ಕಿಮೀ ಹೆದ್ದಾರಿ ನಿರ್ಮಾಣ ಮಾಡಲು ಪಣ ತೊಟ್ಟಿದೆ. ನಮ್ಮ ರಾಘವೇಂದ್ರ ಅವರು ಒಬ್ಬ ಯಶಸ್ವಿ ಲೋಕಸಭಾ ಸದಸ್ಯರಾಗಿದ್ದಾರೆ. ಒಟ್ಟಾರೆ ಶಿವಮೊಗ್ಗ ಜಿಲ್ಲೆಯ ಚಿತ್ರಣ ಬದಲಾಗಲು ಯಡಿಯೂರಪ್ಪ ಹಾಗೂ ಇಲ್ಲಿಯ ಶಾಸಕರು ಕಾರಣ ಎಂದರು.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಕೇವಲ 17 ಐಐಟಿಗಳಿದ್ದವು. ರಾಜ್ಯದಲ್ಲಿ ಗ್ಲೋಬಲ್ ಇನ್ವೆಸ್ಟ್ ಮೆಂಟ್ ನಲ್ಲಿ 8 ರಿಂದ 10 ಲಕ್ಷ ಒಡಂಬಡಿಕೆ ಹರಿದು ಬಂದಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಯೋಚನೆ ಹಾಗೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ ಹಾಗೆ ಕಾಂಗ್ರೆಸ್ ಪರಿಸ್ಥಿತಿ ಇದೆ ಎಂದರು.
ಈ ದೇಶದ ಬಡವರು ಬಡವರಾಗೆ ಇರಬೇಕು ಎಂಬ ನೀತಿಯಿಂದ ಕಾಂಗ್ರೆಸ್ ಗೆ ದಾರುಣ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಪುಕ್ಕಟೆ ನೀಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ಯುವಕರಿಗೆ ಉದ್ಯೋಗಗಳನ್ನು ನೀಡಿಲ್ಲ. ಯಡಿಯೂರಪ್ಪರವರು ರಾಜೀನಾಮೆ ಸಲ್ಲಿಸುವ ವೇಳೆಯು ಮನೆಯಲ್ಲಿ ಕೂರದೇ ಕೆಲಸ ಮಾಡಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು ಎಂದರು.