ಕೊಲಂಬೊ: ಭುಜದ ನೋವಿನಿಂದ ಚೇತರಿಸಿಕೊಂಡು 4 ತಿಂಗಳ ಬಳಿಕ ಟೀಮ್ ಇಂಡಿಯಾಕ್ಕೆ ಬಂದ ಆರಂಭಕಾರ ಕೆ.ಎಲ್. ರಾಹುಲ್ ಈಗ ಮತ್ತೂಂದು ಸಮಸ್ಯೆಗೆ ಸಿಲುಕಿದ್ದಾರೆ. ಅವರು ತೀವ್ರ ಜ್ವರದಿಂದ ನರಳುತ್ತಿದ್ದು, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಸರಣಿಯ ಪ್ರಥಮ ಟೆಸ್ಟ್ ಬುಧವಾರದಿಂದ ಗಾಲೆಯಲ್ಲಿ ಆರಂಭವಾಗಲಿದೆ. ತಂಡದ ಉಳಿದ ಸದ್ಯಸರೆಲ್ಲ ಸೋಮವಾರ 3 ಗಂಟೆಗಳ ಬಸ್ ಪ್ರಯಾಣದ ಮೂಲಕ ಕೊಲಂಬೋದಿಂದ ಗಾಲೆ ತಲುಪಿದರೂ ರಾಹುಲ್ ಮಾತ್ರ ವೈದ್ಯಕೀಯ ತಪಾಸಣೆ ಹಾಗೂ ವಿಶ್ರಾಂತಿ ಪಡೆಯುವ ಸಲುವಾಗಿ ಕೊಲಂಬೋದಲ್ಲೇ ಉಳಿದಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ ರಾಹುಲ್ ನ್ಯುಮೋನಿಯಾ ಅಥವಾ ಡೆಂಗ್ಯೂಗೆ ಒಳಗಾಗಿದ್ದಾರೆಂದು ಶಂಕಿಸಲಾಗಿತ್ತು. ಆದರೆ ಇದು “ವೈರಲ್ ಫಿವರ್’ ಎಂಬುದಾಗಿ ತಂಡದ ವೈದ್ಯಕೀಯ ವರದಿ ತಿಳಿಸಿದೆ.
ರಾಹುಲ್ ಆಸ್ಟ್ರೇಲಿಯ ವಿರುದ್ಧ ಧರ್ಮಶಾಲಾದಲ್ಲಿ ಕೊನೆಯ ಸಲ ಟೆಸ್ಟ್ ಆಡಿದ್ದರು. ಅನಂತರ ಭುಜದ ಶಸ್ತ್ರಚಿಕಿತ್ಸೆಯಿಂದ ಐಪಿಎಲ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಆದರೆ ಶ್ರೀಲಂಕಾ ಅಧ್ಯಕ್ಷರ ಬಳಗದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಿದ್ದ ರಾಹುಲ್ 58 ಎಸೆತಗಳಿಂದ 54 ರನ್ ಬಾರಿಸಿ ತಮ್ಮ ಫಾರ್ಮ್ಗೆ ಯಾವುದೇ ಧಕ್ಕೆ ಆಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದರು. ಜತೆಗೆ ತಾನು ಫಿಟ್‌ನೆಸ್ ಸಮಸ್ಯೆಯಿಂದ ಪೂರ್ತಿ ಮುಕ್ತನಾಗಿಲ್ಲ ಎಂಬ ಸೂಚನೆಯನ್ನೂ ರವಾನಿಸಿದ್ದರು.
ರಾಹುಲ್ ಗೈರಿನಿಂದಾಗಿ ಭಾರತ ಇಬ್ಬರು ಆರಂಭಿಕರ ಸೇವೆಯಿಂದ ವಂಚಿತವಾದಂತಾಗಿದೆ. ಇದಕ್ಕೂ ಮುನ್ನ ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ಮುರಳಿ ವಿಜಯ್ ಗಾಯಾಳಾಗಿ ತಂಡದಿಂದ ಬೇರ್ಪಟ್ಟಿದ್ದರು. ವಿಜಯ್ ಬದಲು ಶಿಖರ್ ಧವನ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಗಾಲೆ ಟೆಸ್ಟ್‌ನಲ್ಲಿ ಶಿಖರ್ ಧವನ್ ಮತ್ತು ಅಭಿನವ್ ಮುಕುಂದ್ ಭಾರತದ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.