Advertisement

ರಾಹುಲ್‌ ಟೆಂಪಲ್‌ ಪ್ರವಾಸ?

10:08 AM Jan 03, 2018 | Team Udayavani |

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಠಗಳು ಮತ್ತು ದೇವಸ್ಥಾನಗಳ ಭೇಟಿಗೆ ಮುಂದಾಗಿದ್ದಾರೆ. ಗುಜರಾತ್‌ನಲ್ಲಿ ಚುನಾವಣೆ ಸಂದರ್ಭದಲ್ಲಿ ಹಿಂದೂ ದೇವಾಲಯಗಳ ಭೇಟಿ ಮಾಡಿದ್ದರು. ಇದು ಪಕ್ಷಕ್ಕೆ ಪರೋಕ್ಷ
ಲಾಭವಾಗಿದ್ದರಿಂದ ರಾಜ್ಯದಲ್ಲೂ ಮೃದು ಹಿಂದೂ ಧೋರಣೆ ಅನುಸರಿಸಲು ರಾಹುಲ್‌ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Advertisement

ಈಗಿರುವ ಮಾಹಿತಿ ಪ್ರಕಾರ ಜನವರಿ 20 ರಿಂದ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿರುವ ರಾಹುಲ್‌ ಗಾಂಧಿ ಪ್ರಮುಖವಾಗಿ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಶೃಂಗೇರಿಯಲ್ಲಿ ಆಚರಿಸಲು ಕಾಂಗ್ರೆಸ್‌ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ
ಮೊದಲು ಶೃಂಗೇರಿ ಶಾರದಾಂಬೆಗೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಅದರಂತೆ ರಾಜ್ಯದ ಪ್ರಸಿದ್ಧ ಮಠಗಳಾದ ಆದಿ ಚುಂಚನಗಿರಿ, ತುಮಕೂರಿನ ಸಿದ್ಧಗಂಗಾ ಮಠ, ಮೈಸೂರಿನ ಸುತ್ತೂರು ಮಠ, ಹುಬ್ಬಳ್ಳಿ ಸಿದ್ದಾರೂಢ ಮಠ ಸೇರಿ ಪ್ರಮುಖ ಮಠಗಳು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಲು ಕಾರ್ಯಕ್ರಮಗಳನ್ನು ರಾಹುಲ್‌ ಗಾಂಧಿ ಆಲೋಚಿಸಿದ್ದು, ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲೊಮ್ಮೆ ಮಠ, ದೇವಸ್ಥಾನಗಳಿಗೆ ಭೇಟಿ ನೀಡಿ, ಕಾಂಗ್ರೆಸ್‌ ಕೂಡ ಹಿಂದುಗಳ ಪರವಾಗಿದೆ ಎನ್ನುವುದನ್ನು ಬಿಂಬಿಸುವ ಪ್ರಯತ್ನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌, ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೂ ಗಾಂಧಿ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ರಾಹುಲ್‌ ಗಾಂಧಿ ಭೇಟಿ ನೀಡಿದರೆ ತಪ್ಪೇನೂ ಇಲ್ಲ ಎಂದರು. ಇದೇ ವೇಳೆ, ಕೂಡ್ಲಗಿ ಶಾಸಕ ಬಿ. ನಾಗೇಂದ್ರ ಕಾಂಗ್ರೆಸ್‌ ಸೇರಿದರೆ ಪಕ್ಷಕ್ಕೆ ದೊಡ್ಡ ಶಕ್ತಿ ಬರುತ್ತದೆ. ಆತ ನನ್ನ ಆತ್ಮೀಯ ಸ್ನೇಹಿತ ಎಂದರು. ಇನ್ನು ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಈ ಬಗ್ಗೆ ಬೆಟ್‌ ಕಟ್ಟಲೂ ಸಿದ್ಧ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next