Advertisement

ಪ್ರಶ್ನಿಸಬೇಕಿರುವುದು ರಾಹುಲ್‌ರನ್ನು, ಮೋದಿಯನ್ನಲ್ಲ!

02:13 AM Dec 22, 2017 | |

ಗುಜರಾತ್‌ನಲ್ಲಿ ಜಾತಿ ರಾಜಕಾರಣ ಮಾಡುತ್ತಾ ಬಂದಿರುವ ಹಾರ್ದಿಕ್‌ ಪಟೇಲ್‌ ಮತ್ತು ಜಿಗ್ನೇಶ್‌ ಅದೇಕೆ ಮಾಧ್ಯಮಗಳಿಗೆ ಹೀರೋಗಳಾದರೋ ನಮಗಂತೂ ತಿಳಿಯುತ್ತಿಲ್ಲ. ಮಾಧ್ಯಮಗಳಂತೂ ಹಾರ್ದಿಕ್‌-ಜಿಗ್ನೇಶ್‌ ಬಲಿಷ್ಠರಾಗುತ್ತಿರುವ ಬಗ್ಗೆ ಮಾತನಾಡುತ್ತಿವೆ. ಹೇಗೆ ಹಾರ್ದಿಕ್‌ ಮೋದಿ ವಿರುದ್ಧ ತೊಡೆ ತಟ್ಟುತ್ತಿದ್ದಾರೆ ಎಂದು ಇವು ಬಣ್ಣಿಸುತ್ತವಾದರೂ, ಇದೇ ಹಾರ್ದಿಕ್‌ ಪಟೇಲ್‌, ಜಿಗ್ನೇಶ್‌ ಗುಜರಾತ್‌ನಲ್ಲಿ ಜಾತಿ ರಾಜಕೀಯ ಮಾಡುತ್ತಿರುವ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ. ಕೋಮು ರಾಜಕೀಯ ಮಾಡುತ್ತಿರುವುದಕ್ಕಾಗಿ ಬಿಜೆಪಿಯ ಮೇಲೆ ಮುಗಿಬೀಳುವುದಾದರೆ, ಬಹಿರಂಗವಾಗಿಯೇ ಜಾತಿ ರಾಜಕಾರಣ ಮಾಡುವವವರನ್ನು ಈ ಮಾಧ್ಯಮಗಳು, ವಿಶ್ಲೇಷಕರು ಏಕೆ ಎಂದಿಗೂ ಹಿಡಿದು ಜಾಡಿಸೋದಿಲ್ಲ?

Advertisement

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಸತತ ಆರನೇ ಬಾರಿ ಅಲ್ಲಿ ಸರ್ಕಾರವನ್ನು ಸ್ಥಾಪಿಸಲಿದೆ. ಇದರ ಹೊರತಾಗಿಯೂ ಮಾಧ್ಯಮಗಳ ಒಂದು ಬಹುದೊಡ್ಡ ವರ್ಗ ಹಾಗೂ ಖುದ್ದು ಕಾಂಗ್ರೆಸ್‌ ಪಕ್ಷ ಬಹಳ ಚಾಲಾಕಿತನದಿಂದ ಚುನಾವಣೆ ಫ‌ಲಿತಾಂಶವನ್ನು “ಬಿಜೆಪಿಗೆ ಆಘಾತ ಮತ್ತು ರಾಹುಲ್‌ ಗಾಂಧಿಯ ಉದಯ’ ಎಂದು ಬಿಂಬಿಸುವಲ್ಲಿ ವ್ಯಸ್ತವಾಗಿವೆ. ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನಗಳು ಸಿಗಲಿಲ್ಲ ಎನ್ನುವುದೇನೋ ನಿಜ, ಆದರೂ ಸತತ ಆರನೆಯ ಬಾರಿಯೂ ಆ ಪಾರ್ಟಿ ಗುಜರಾತಲ್ಲಿ ಸರ್ಕಾರ ನಿರ್ಮಿಸಲು ಹೊರಟರುವಾಗ ಅದನ್ನು “ಆಘಾತ’ ಅಂತ ಅದ್ಹೇಗೆ ಕರೆಯುತ್ತೀರಿ? ನಿಜಕ್ಕೂ ಆಘಾತ ವುಂಟುಮಾಡುವ ಸಂಗತಿಯೆಂದರೆ, ಈಗ ಮತ್ತೂಂದು ಚುನಾ ವಣೆಯಲ್ಲಿ ಸೋಲು ಕಂಡಿರುವ ರಾಹುಲ್‌ ಗಾಂಧಿಯವರನ್ನು ಪ್ರಶ್ನಿಸುವುದನ್ನು ಬಿಟ್ಟು, ಬಿಜೆಪಿ ಕೆಲವು ಕಡಿಮೆ ಸೀಟು ಗಳಿಸಿರು ವುದನ್ನೇ ಪ್ರಮುಖ ವಿಷಯವಾಗಿಸಿ ಚರ್ಚೆಯನ್ನು ಅದರ ಸುತ್ತಲೇ ಗಿರಕಿಹೊಡೆಸಲು ಪ್ರಯತ್ನಿಸಲಾಗುತ್ತಿದೆ ಎನ್ನುವುದು.  

ಒಂದು ವಿಷಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಬಿಜೆಪಿ ಈ ಬಾರಿ ಹಿಂದಿನ ಎಲ್ಲಾ ಚುನಾವಣೆಗಳಿಗಿಂತಲೂ ಭಿನ್ನವಾದ ಮತ್ತು ಹೆಚ್ಚು ಸವಾಲುಭರಿತ ಪರಿಸ್ಥಿತಿಯನ್ನು ಎದುರಿಸಿತು. ಏಕೆಂದರೆ ಮೊದಲೆಲ್ಲ ಜನರು ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಮಾಡಲು ಮತ ಹಾಕುತ್ತಿದ್ದರು, ಆದರೆ ಈ ಬಾರಿ ಸ್ಥಿತಿ ಹಾಗಿರಲಿಲ್ಲ. ಇದರ ಹೊರತಾಗಿ 22 ವರ್ಷದ ಆಡಳಿತ ವಿರೋಧಿ ಅಲೆ ಇತ್ತೆನ್ನಲಾಗುತ್ತದೆ. ಜಿಎಸ್‌ಟಿ, ನೋಟ್‌ಬಂದಿ ಯಂಥ ದೊಡ್ಡ-ದೊಡ್ಡ ವಿಷಯದಲ್ಲಿ ಜನರಿಗೆ ಬೇಸರವಿದೆ ಎನ್ನ ಲಾಯಿತು. ಕಾಂಗ್ರೆಸ್‌ಗೆ ಜಿಗ್ನೇಶ್‌ ಮೇವಾನಿ, ಅಲ್ಪೇಶ್‌ ಠಾಕೂರ್‌ ಮತ್ತು ಹಾರ್ದಿಕ್‌ ಪಟೇಲ್‌ರಂಥ ಯುವ ನಾಯಕತ್ವದ ಜೊತೆ ಯಿತ್ತು.  ಇವರೆಲ್ಲರು ಎಷ್ಟೋ ತಿಂಗಳುಗಳಿಂದ ಜಾತಿ ಆಂದೋಲ ನಗಳ ಮೂಲಕ ಕಾಂಗ್ರೆಸ್‌ ಪರ ವಾತಾವರಣವನ್ನು ನಿರ್ಮಿಸಲು ಶ್ರಮಿಸುತ್ತಿದ್ದರು. ಇವೆಲ್ಲದರ ಜೊತೆಗೆ ಮೊದಲಿಗಿಂತಲೂ ಹೆಚ್ಚು ಆಕ್ರಮಣಕಾರಿ ರಾಹುಲ್‌ಗಾಂಧಿಯವರೂ ಇದ್ದರು! ಆದರೆ ಇವೆ ಲ್ಲದರ ಹೊರತಾಗಿಯೂ ಬಿಜೆಪಿ ಮತ್ತೂಮ್ಮೆ ಸರ್ಕಾರ ರಚಿಸಲು ಸಫ‌ಲವಾಗುತ್ತದೆ ಎಂದಾದರೆ, ಅದು “ಆಘಾತ’ ಹೇಗಾಗುತ್ತದೆ?

ಇಲ್ಲಿ ಕಾಂಗ್ರೆಸ್‌ ಅನ್ನು ಪ್ರಶ್ನಿಸಲೇಬೇಕಿದೆ. ಇಷ್ಟೆಲ್ಲ ಸಂಗತಿಗಳು ತನ್ನ “ಪರ’ವಾಗಿದ್ದರೂ ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆ ಯಲು ಏಕೆ ಸಾಧ್ಯವಾಗಲಿಲ್ಲ? ಒಂದು ವೇಳೆ ನೋಟ್‌ಬಂದಿ ಮತ್ತು ಜಿಎಸ್‌ಟಿಯ ಬಗ್ಗೆ ಜನಕ್ಕೆ ನಿಜವಾಗಲೂ ಕೋಪವಿದ್ದಿದ್ದರೆ, ಪಾಟೀದಾರರೆಲ್ಲ ಬಿಜೆಪಿಯಿಂದ ಮುನಿಸಿಕೊಂಡಿದ್ದರೆ, ರಾಜ್ಯ ಸರ್ಕಾರದ “ವಿಕಾಸ’ದ ವಾದಗಳು ಸುಳ್ಳಾಗಿದ್ದರೆ, ಅದೇಕೆ ಗುಜರಾತ್‌ನ ಜನರು ಮತ್ತೂಮ್ಮೆ ಬಿಜೆಪಿಯನ್ನೇ ಅಧಿಕಾರಕ್ಕೆ ತರಲು ಒಪ್ಪಿಕೊಂಡರು? ಕಾಂಗ್ರೆಸ್‌ಗೂ ಒಂದು ಚಾನ್ಸ್‌ ಕೊಡೋಣ ಎಂದೇಕೆ ಅವರಿಗೆ ಅನಿಸಲಿಲ್ಲ? ಇಷ್ಟೊಂದು ಸುಲಭ ಪಿಚ್‌ನ ಮೇಲೂ ಕಾಂಗ್ರೆಸ್‌ಗೆ ಸೋಲಿಸಲು  ಆಗಲಿಲ್ಲ ಎಂದಾದರೆ, ಗೆಲುವಿಗಾಗಿ ಅದು ಇನ್ನು ಏನು ಮಾಡಬೇಕು?

ಆಶ್ಚರ್ಯ ಹುಟ್ಟಿಸುತ್ತಿರುವ ಅಂಶವೆಂದರೆ ಗುಜರಾತ್‌ನಲ್ಲಿ ಬಿಜೆಪಿ ಸತತ ಆರನೇ ಬಾರಿಯೂ ಅಧಿಕಾರಕ್ಕೇರಲು ಸಿದ್ಧವಾಗಿ ದ್ದರೂ, ವಿಶ್ಲೇಷಕರಿಗೆ ಮಾತ್ರ “ಬಜೆಪಿಗೆ ಸೀಟು ಕಡಿಮೆ ಬಂದದ್ದು’ ಮುಖ್ಯ ಚರ್ಚಾ ವಿಷಯ! ಆದರೆ ಅತ್ತ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ವಂಚಿತವಾದದ್ದಕ್ಕಾಗಿ ಕಾಂಗ್ರೆಸ್‌ ಅನ್ನು ಯಾರೂ ಪ್ರಶ್ನಿ ಸುತ್ತಿಲ್ಲ. 22 ವರ್ಷದ ಆಡಳಿತ ವಿರೋಧಿ ಅಲೆಯ ಹೊರತಾ ಗಿಯೂ ಬಿಜೆಪಿ ಗೆದ್ದಿತು ಎಂದಾದರೆ, ಅತ್ತ ಹಿಮಾಚಲ ಪ್ರದೇಶ ದಲ್ಲಿ ಕಾಂಗ್ರೆಸ್‌ಗೆ ಎರಡನೆ ಬಾರಿ ಅಧಿಕಾರಕ್ಕೆ ಬರುವುದಕ್ಕೂ ಸಾಧ್ಯವಾಗಲಿಲ್ಲವಲ್ಲ. ಇದಕ್ಕೇನನ್ನುವುದು?

Advertisement

2014ರ ಲೋಕಸಭಾ ಚುನಾವಣೆಯ ವೇಳೆ ದೇಶದ 12 ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರವಿತ್ತು. ಈಗ ಈ ಸಂಖ್ಯೆ 5ಕ್ಕೆ ಬಂದು ನಿಂತಿದೆ. ಇದೇ ಸಮಯದಲ್ಲೇ, ಅಂದರೆ, 2014ರಲ್ಲಿ ಬಿಜೆಪಿ 5 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಈಗ ಅದು 19 ರಾಜ್ಯಗಳಲ್ಲಿ ಸರ್ಕಾರ ರಚಿಸಿದೆ. ಸ್ವಾತಂತ್ರಾ ನಂತರ ಪಕ್ಷವೊಂದಕ್ಕೆ ಈ ಪ್ರಮಾಣದಲ್ಲಿ ರಾಜ್ಯಗಳಲ್ಲಿ ಸರ್ಕಾರ ರಚಿಸುವ ಅವಕಾಶ ಸಿಕ್ಕಿದ್ದು ಅಲ್ಪವೇ. ಮೋದಿ ಪ್ರಧಾನಿಯಾದ ನಂತರವೂ ಬಿಜೆಪಿ ನಿರಂತರ ವಾಗಿ ರಾಜ್ಯ ಚುನಾವಣೆಗಳಲ್ಲಿ ಗೆಲ್ಲುತ್ತಾ ಸಾಗುತ್ತಿದೆಯೆಂದರೆ, ಇದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರ ಮತ್ತು ಮೋದಿ ಬಗ್ಗೆ ಜನರಿಗಿರುವ ವಿಶ್ವಾಸ. ಕೇಂದ್ರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಬಗ್ಗೆ ಜನರಿಗೆ ಬೇಸರವಿದೆ ಎಂದು ಕಾಂಗ್ರೆಸ್‌ ಹೇಳುತ್ತಿದೆಯಲ್ಲ, ಹಾಗಿದ್ದರೆ ಆ ರಾಜ್ಯಗಳಲ್ಲಿ ಅದು ಸೋಲುತ್ತಿರುವುದೇಕೆ? ಕಾಂಗ್ರೆಸ್‌ ನೇತೃತ್ವದ ಬಗ್ಗೆಯೇ ಇದು ಪ್ರಶ್ನೆ ಹುಟ್ಟುಹಾಕುತ್ತಿಲ್ಲವೇನು?

ನಿಜಕ್ಕೂ ದಿಕ್ಕೆಡಿಸುವ ಸಂಗತಿಯೆಂದರೆ, ರಾಹುಲ್‌ ಗಾಂಧಿ ಯವರ ನೇತೃತ್ವದಲ್ಲಿ ಕಾಂಗ್ರೆಸ್‌ ಒಂದಾದ ನಂತರ ಒಂದರಂತೆ ಚುನಾವಣೆಗಳಲ್ಲಿ ಸೋಲನುಭವಿಸುತ್ತಾ ಸಾಗುತ್ತಿದ್ದರೂ, ಅವರ ವಿರುದ್ಧ ಒಂದೇ ಒಂದು ಧ್ವನಿಯೂ ಮೊಳಗುತ್ತಿಲ್ಲ. ತಥಾಕಥಿಕ ವಿಶ್ಲೇಷಕರೂ ಕೂಡ ರಾಹುಲ್‌ ಸರಣಿ ವೈಫ‌ಲ್ಯದ ಬಗ್ಗೆ ವಿಶ್ಲೇಷಣೆ ಮಾಡುತ್ತಿಲ್ಲ. ರಾಹುಲ್‌ ಗಾಂಧಿ ಎಲ್ಲಾದರೂ, ಹೇಗಾದರೂ ಒಂದೇ ಒಂದು ಚುನಾವಣೆ ಗೆದ್ದುಬಿಡಲಿ ಎಂದು ಈ ವರ್ಗ ಎಷ್ಟೋ ವರ್ಷಗಳಿಂದ ಕಾಯುತ್ತಾ ಕುಳಿತಿದೆ. ಹೀಗಾಗಿಬಿಟ್ಟರೆ, ಕೂಡಲೇ ಆ ಗೆಲುವನ್ನು ರಾಹುಲ್‌ರ ವರ್ಚಸ್ಸಿಗೆ ತಳುಕು ಹಾಕಿ, ಅವರನ್ನು ಅಂತಾರಾಷ್ಟ್ರೀಯ ನಾಯಕ ಎಂದು ಘೋಷಿಸಿಬಿಡಲು ಇವರೆಲ್ಲ ಹಪಹಪಿಸುತ್ತಿದ್ದಾರೆ. 

ಇನ್ನು ಈ ಸೋಕಾಲ್ಡ್‌ ವಿಶ್ಲೇಷಕರು, ಮಾಧ್ಯಮಗಳು ಒಂದು ವಿಷಯವನ್ನು ಬಹಳ ಚಾಲಾಕಿತನದಿಂದ ಕಡೆಗಣಿಸುತ್ತಾ ಬರುತ್ತಿ ದ್ದಾರೆ- ಅದೇ, ಕಾಂಗ್ರೆಸ್‌ನ ಜಾತಿ ರಾಜಕಾರಣ! ಗುಜರಾತ್‌ನಲ್ಲಿ ಜಾತಿ ರಾಜಕಾರಣ ಮಾಡುತ್ತಾ ಬಂದಿರುವ ಹಾರ್ದಿಕ್‌ ಪಟೇಲ್‌ ಮತ್ತು ಜಿಗ್ನೇಶ್‌ ಅದೇಕೆ ಮಾಧ್ಯಮಗಳಿಗೆ ಹೀರೋಗಳಾದರೋ ನಮಗಂತೂ ತಿಳಿಯುತ್ತಿಲ್ಲ. ಮಾಧ್ಯಮಗಳಂತೂ ಹಾರ್ದಿಕ್‌- ಜಿಗ್ನೇಶ್‌ ಬಲಿಷ್ಠರಾಗುತ್ತಿರುವ ಬಗ್ಗೆ ಮಾತನಾಡುತ್ತಿವೆ. ಹೇಗೆ ಹಾರ್ದಿಕ್‌ ಮೋದಿ ವಿರುದ್ಧ ತೊಡೆ ತಟ್ಟುತ್ತಿದ್ದಾರೆ ಎಂದು ಇವು ಬಣ್ಣಿಸುತ್ತವಾದರೂ, ಇದೇ ಹಾರ್ದಿಕ್‌ ಪಟೇಲ್‌, ಜಿಗ್ನೇಶ್‌ ಗುಜರಾತ್‌ನಲ್ಲಿ ಜಾತಿ ರಾಜಕೀಯ ಮಾಡುತ್ತಿರುವ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ. ಕೋಮು ರಾಜಕೀಯ ಮಾಡುತ್ತಿರುವುದಕ್ಕಾಗಿ ಬಿಜೆಪಿಯ ಮೇಲೆ ಮುಗಿಬೀಳುವುದಾದರೆ, ಬಹಿರಂಗವಾಗಿಯೇ ಜಾತಿ ರಾಜಕಾರಣ ಮಾಡುವ ಹಾರ್ದಿಕ್‌ ಮತ್ತು ಲಾಲೂ ರಂಥವರನ್ನು ಈ ಮಾಧ್ಯಮಗಳು, ವಿಶ್ಲೇಷಕರು ಏಕೆ ಎಂದಿಗೂ ಹಿಡಿದು ಜಾಡಿಸೋದಿಲ್ಲ? ಇವರೆಲ್ಲ ಜಾತಿ ರಾಜಕಾರಣ ಮಾಡಿ ಸಮಾಜವನ್ನು ಒಡೆಯುತ್ತಿದ್ದಾರೆ ಎಂದೇಕೆ ಆಗೆಲ್ಲ ಪ್ರಶ್ನಿಸುವುದಿಲ್ಲ? ಸತ್ಯವೇನೆಂದರೆ ಇಂದು ದೇಶದಲ್ಲಿ ಕೋಮು ರಾಜಕಾರಣಕ್ಕೆ ಹೋಲಿಸಿದರೆ ಜಾತಿ ರಾಜಕಾರಣವೇ ಸಮಾಜವನ್ನು ಒಡೆಯು ವಲ್ಲಿ ಮುಂಚೂಣಿಯಲ್ಲಿದೆ. ಕೋಮು ರಾಜಕಾರಣ ಮಾಡುವವರು(ಇದೂ ತಪ್ಪೇ) ಧರ್ಮದ ಹೆಸರಲ್ಲಿ ಜನರಿಗೆ ಒಂದಾಗಲು ಹೇಳುತ್ತಿದ್ದಾರೆ. ಆದರೆ ಜಾತಿ ರಾಜಕಾರಣ ಮಾಡುವವರು ಜಾತಿಯ ಹೆಸರಲ್ಲಿ ಧರ್ಮದೊಳಗೇ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ.  

ವೈಫ‌ಲ್ಯ ಅನುಭವಿಸಿರುವ ವ್ಯಕ್ತಿ ಜೀವನದಲ್ಲಿ ಮುಂದೆ ಸಾಗು ತ್ತಾನೋ ಇಲ್ಲವೋ ಎನ್ನುವುದು ಆತ ಆ ಸೋಲಿಗೆ ಹೊಣೆ ಹೊರು ತ್ತಾನೋ ಅಥವಾ ಆ ತಪ್ಪನ್ನು ಇನ್ನೊಬ್ಬರ ತಲೆಗೆ ಕಟ್ಟುತ್ತಾನೋ ಎನ್ನುವುದರ ಮೇಲೆ ನಿರ್ಧರಿತವಾಗಿದೆ. ಒಂದು ವೇಳೆ ಸೋಲಿನ ನಂತರ ನೀವು ನಿಮ್ಮೊಬ್ಬರನ್ನು ಬಿಟ್ಟು ಉಳಿದೆಲ್ಲರನ್ನೂ/ಎಲ್ಲವನ್ನೂ ಹೊಣೆಗಾರರಾಗಿಸುತ್ತೀರಿ ಎನ್ನುವುದಾದರೆ, ಇಂದಿನವರೆಗೂ ಫ‌ಲಿತಾಂಶ ಹೇಗೆ ಬಂದಿದೆಯೂ ಮುಂದೆಯೂ ಅದೇ ಫ‌ಲಿತಾಂಶವೇ ಬರುತ್ತದೆ. ಕಾಂಗ್ರೆಸ್‌ ಈ ವಿಷಯವನ್ನು ಬೇಗ ಅರ್ಥಮಾಡಿಕೊಂಡಷ್ಟೂ ದೇಶದ ರಾಜಕೀಯಕ್ಕೆ ಮತ್ತು ಖುದ್ದು ಅದಕ್ಕೆ ಒಳ್ಳೆಯದು.  
(ಹಿಂದಿಯ ನವಭಾರತ್‌ಟೈಮ್ಸ್‌ ಜಾಲತಾಣದಲ್ಲಿ ಪ್ರಕಟಿತ ಲೇಖನ)

ನೀರಜ್‌ ಬಧವಾರ್‌

Advertisement

Udayavani is now on Telegram. Click here to join our channel and stay updated with the latest news.

Next