ಕೊಲಂಬೊ: ಫಿಟ್ ಆಗಿರುವ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಶ್ರೀಲಂಕಾ ವಿರುದ್ಧ ಗುರುವಾರದಿಂದ ಆರಂಭವಾಗುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ವೈರಲ್ ಜ್ವರದಿಂದ ರಾಹುಲ್ ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಅವರು ಕೆಲವು ದಿನ ಆಸ್ಪತ್ರೆಯಲ್ಲಿ ಉಳಿಯಬೇಕಾಗಿತ್ತು. ಅವರ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದ ಶಿಖರ್ ಧವನ್ ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು 190 ರನ್ ಸಿಡಿಸಿದ್ದರು. ಇದೇ ವೇಳೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇನ್ನೋರ್ವ ಆರಂಭಿಕ ಅಭಿನವ್ ಮುಕುಂದ್ ತನ್ನ ಜೀವನಶ್ರೇಷ್ಠ 81 ರನ್ ಹೊಡೆದಿದ್ದರು. ಈಗ ರಾಹುಲ್ ತಂಡಕ್ಕೆ ಮರಳಿದ್ದರಿಂದ ಬಹುತೇಕ ಮುಕುಂದ್ ಹೊರಬೀಳಲಿದ್ದಾರೆ.
ರಾಹುಲ್ ನಮ್ಮ ತಂಡದ ಸ್ಥಿರ ನಿರ್ವಹಣೆ ನೀಡುವ ಆರಂಭಿಕ ಆಟಗಾರ. ಕಳೆದ ಎರಡು ವರ್ಷ ಅವರು ತಂಡಕ್ಕೆ ಉತ್ತಮ ರೀತಿಯ ನಿರ್ವಹಣೆ ನೀಡಿದ್ದಾರೆ. ಹಾಗಾಗಿ ಅವರಿಗಾಗಿ ಆರಂಭಿಕರಲ್ಲಿ ಒಬ್ಬರು (ಧವನ್ ಅಥವಾ ಮುಕುಂದ್) ಜಾಗ ಬಿಟ್ಟುಕೊಡಬೇಕಾಗಿದೆ. ತಂಡಕ್ಕೆ ಮರಳಿ ಟೆಸ್ಟ್ ಕ್ರಿಕೆಟ್ ಆಡುವ ಅರ್ಹತೆ ರಾಹುಲ್‌ಗಿದೆ ಎಂದು ಕೊಹ್ಲಿ ತಿಳಿಸಿದರು.
ಅಭ್ಯಾಸ ಅವಧಿ ಮುಗಿದ ಬಳಿಕ ತಂಡದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಮತ್ತು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು. ಆದರೆ ನನ್ನ ಪ್ರಕಾರ ರಾಹುಲ್ ಖಂಡಿತವಾಗಿಯೂ ಆಟವಾಡುವ ಬಳಗಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು.
ರಾಹುಲ್ ಆಡಿದ ಈ ಹಿಂದಿನ ಟೆಸ್ಟ್ ಸರಣಿ ಆಸ್ಟ್ರೇಲಿಯ ವಿರುದ್ಧ ಆಗಿತ್ತು. ಅಲ್ಲಿ ಆಡಿದ ನಾಲ್ಕು ಟೆಸ್ಟ್‌ಗಳಲ್ಲಿ ರಾಹುಲ್ ಆರು ಅರ್ಧಶತಕ ಸಹಿತ 393 ರನ್ ಗಳಿಸಿದ್ದರು. ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿಯೂ ರಾಹುಲ್ 59 ರನ್ ಹೊಡೆದಿದ್ದರು.
ರಾಹುಲ್ ಅವರನ್ನು ಹೊರತುಪಡಿಸಿ ತಂಡದಲ್ಲಿ ಇತರ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ.