Advertisement

ಬಿ ಟೀಮ್‌ ಎಂದು ಒಪ್ಪಲಿ ಜೆಡಿಎಸ್‌ ವಿರುದ್ಧ ಹರಿಹಾಯ್ದ ರಾಹುಲ್‌

06:00 AM Mar 26, 2018 | Team Udayavani |

ಕೆ.ಆರ್‌.ಪೇಟೆ (ಮಂಡ್ಯ): “ಜೆಡಿಎಸ್‌, ಬಿಜೆಪಿಯ ಬಿ ಟೀಮ್‌ ಎಂದು ಒಪ್ಪಿಕೊಳ್ಳಲಿ. ಅಷ್ಟೇ ಅಲ್ಲ, ಬಿಜೆಪಿಯನ್ನು ಏಕೆ ಬೆಂಬಲಿಸುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಲಿ”ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ವಾಗ್ಧಾಳಿಯನ್ನು ಮುಂದುವರಿಸಿದ್ದಾರೆ.

Advertisement

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಪರ ಚುನಾವಣಾ ಪ್ರಚಾರ ಕೈಗೊಂಡಿರುವ ರಾಹುಲ್‌ ಗಾಂಧಿ, ಭಾನುವಾರ ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದರು. “ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಜೆಡಿಎಸ್‌, ಬಿಜೆಪಿಯ ಬಿ ಟೀಮ್‌ ಅಂತ ಒಪ್ಪಿಕೊಳ್ಳಲಿ. ಜೆಡಿಎಸ್‌ ಯಾವ ಕಾರಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದೆ ಎನ್ನುವುದನ್ನೂ ಸ್ಪಷ್ಟಪಡಿಸಲಿ. ಇಲ್ಲವಾದಲ್ಲಿ, ಜೆಡಿಎಸ್‌ ಎಂದರೆ ಜನತಾದಳ ಜಾತ್ಯತೀತ ಅಲ್ಲ. ಜನತಾದಳ  ಸಂಘ ಪರಿವಾರ ಎಂಬುದು ಸತ್ಯವಾಗಲಿದೆ ಎಂದು ಕಿಡಿ ಕಾರಿದರು.

ಜಾತ್ಯತೀತರು ಎಂದು ಹೇಳಿಕೊಳ್ಳುವ ಜೆಡಿಎಸ್‌ ಅಧಿಕಾರಕ್ಕಾಗಿ ಬಿಜೆಪಿ ಜೊತೆ ಕೈಜೋಡಿಸಿದೆ. ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಒಳ ಒಪ್ಪಂದ ಮಾಡಿಕೊಂಡು ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ನಮಗೆ ಯಾರ ಬೆಂಬಲದ ಅಗತ್ಯವೂ ಇಲ್ಲ. ಸರ್ಕಾರದ ಸಾಧನೆಗಳೇ ನಮಗೆ ಶ್ರೀರಕ್ಷೆಯಾಗಿದೆ. ಸಾಧನೆಗಳನ್ನು ನೋಡಿ ಜನರು ನಮಗೆ ಮತ ಕೊಡಲಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿ, ನುಡಿದಂತೆ ನಡೆದಿದ್ದಾರೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೇ ಕಾಂಗ್ರೆಸ್‌ ಸರ್ಕಾರದ ಆಡಳಿತವನ್ನು ಹೊಗಳಿದ್ದಾರೆ. ನಾವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿ ಆಡಳಿತ ನಡೆಸಿಲ್ಲ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ, ಮತ್ತೆ ಅಧಿಕಾರ ನೀಡಿ ಎಂದು ಜನರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next