ಬೆಂಗಳೂರು: ಸಿದ್ದರಾಮಯ್ಯ ಈಗ ಅಲೆಮಾರಿ ಅಲ್ಲ, ಅರೆ ಅಲೆಮಾರಿ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಇನ್ನೂ ಯಾವುದೇ ಕ್ಷೇತ್ರ ಸಿಕ್ಕಿಲ್ಲ. ಇನ್ನೂ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದಲ್ಲೇ ಇದ್ದಾರೆ. ಸಿದ್ದರಾಮಯ್ಯಗೂ ರಾಹುಲ್ ಗಾಂಧಿಗೆ ಆದ ಪರಿಸ್ಥಿತಿಯೇ ಆಗುತ್ತದೆ ನೋಡಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕ್ಷೇತ್ರ ಹುಡುಕಿ, ಹುಡುಕಿ ಕೊನೆಗೆ ಮುಸಲ್ಮಾನರ ಕ್ಷೇತ್ರಕ್ಕೆ ಬರುತ್ತಾರೆ. ಜಮೀರ್ ಅಹಮದ್ ಕ್ಷೇತ್ರವಾದ ಚಾಮರಾಜಪೇಟೆಗೆ ಬಂದು ಮುಸಲ್ಮಾನರ ಕೈ ಕಾಲು ಹಿಡಿದು ಗೆಲ್ಲಿಸಿ ಎನ್ನುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯೂ ಅಮೇಠಿ ಕ್ಷೇತ್ರ ಬಿಟ್ಟು, ಕೇರಳದ ವಯನಾಡ್ ಗೆ ಬಂದಿದ್ದರು. ಅದೇ ರೀತಿಯ ದುಸ್ಥಿತಿ ಸಿದ್ದರಾಮಯ್ಯಗೆ ಬರುತ್ತದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮೋತ್ಸವ ವಿಚಾರವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಅವರು, ಸಿದ್ದರಾಮೋತ್ಸವಕ್ಕೂ ಕಾಂಗ್ರೆಸ್ ಗೂ ಯಾವುದೇ ಸಂಬಂಧ ಇಲ್ಲವೆಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದನ್ನು ನೋಡಿದ್ರೆ ಯಾರಿಗೆ ಹೊಟ್ಟೆಕಿಚ್ಚೆಂದು ಗೊತ್ತಾಗವುದಿಲ್ಲವೇ ಎಂದರು.
ಇದನ್ನೂ ಓದಿ:ಚುನಾವಣೆ ಗೆಲುವಿನಲ್ಲಿ ದ್ರೌಪದಿ ಮುರ್ಮು ಅವರಿಂದ ದಾಖಲೆ: ಸಿ.ಟಿ.ರವಿ ವಿಶ್ವಾಸ
ಕಾಂಗ್ರೆಸ್ ನವರಿಗೆ ಮೋದಿ ಕಂಡರೆ ಭಯವಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬರಲೆಂದು ನಾವು ಕಾಯುತ್ತಿದ್ದೇವೆ. ಅವರು ರಾಜ್ಯಕ್ಕೆ ಬಂದ ಕೂಡಲೇ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದ ಈಶ್ವರಪ್ಪ, ಸಿದ್ದರಾಮೋತ್ಸವಕ್ಕೆ ಆಹ್ವಾನ ಬಂದರೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ‘ನನಗೇನು ಗ್ರಹಚಾರನಾ ಹೋಗೋಕೆ’ ಎಂದು ಹೇಳಿ ಹೊರಟರು.