ಧೋಲ್‌ಪುರ, ರಾಜಸ್ಥಾನ : ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸುವುದು ಬಹುತೇಕ ಖಾತರಿ ಎಂಬ ಸಮೀಕ್ಷಾ ವರದಿಗಳು ಪ್ರಕಟವಾಗಿರುವ ಬೆನ್ನಿಗೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜಸ್ಥಾನದಲ್ಲಿ ಆರಂಭಿಸಿರುವ ಚುನಾವಣಾ ಪ್ರಚಾರಾಭಿಯಾನದಲ್ಲಿ ವಿಶೇಷ ಹುಮ್ಮಸ್ಸು ತೋರಿ ಬರುತ್ತಿದೆ.
ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಕ್ಸಮರ ನಡೆಸಿರುವ ರಾಹುಲ್, “ಪ್ರಧಾನಿ ಮೋದಿ ಅವರ ಕೃಷಿ, ಆರ್ಥಿಕ ನೀತಿಗಳು ವಿಫಲವಾಗಿವೆ; ರಾಜ್ಯದಲ್ಲಿನ ಬಿಜೆಪಿ ಸರಕಾರ ರೈತರ ಸಾಲದ ಚಿಕ್ಕಾಸನ್ನೂ ಮನ್ನಾ ಮಾಡಿಲ್ಲ; ಮೋದಿ ಅವರ ಮೇಕ್ ಇನ್ ಇಂಡಿಯಾ ಅಭಿಯಾನ ಸಂಪೂರ್ಣ ವಿಫಲವಾಗಿದೆ; ಫೋನ್ ಗಳು ಮತ್ತು ಟಿ ಶರ್ಟ್‌ಗಳನ್ನು ಚೀನದಿಂದ ಹೊರಗುತ್ತಿಗೆ ಮೂಲಕ ತರಿಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಫೋನ್‌ಗಳು ದೇಶದಲ್ಲೇ ನಿರ್ಮಾಣವಾಗಬೇಕೆಂದು ಬಯಸುತ್ತದೆ ಮತ್ತು ಅವುಗಳಿಗೆ ಮೇಡ್ ಇನ್ ಧೋಲ್‌ಪುರ ಟ್ಯಾಗ್ ಇರುವುದನ್ನು ಕಾಣಬಯಸುತ್ತದೆ ಎಂದು ರಾಹುಲ್ ಹೇಳಿದರು.
ಪೂರ್ವ ರಾಜಸ್ಥಾನದಲ್ಲಿನ ಧೋಲ್‌ಪುರ ಜಿಲ್ಲೆಯ ಮಾನಿಯಾದಿಂದ 150 ಕಿ.ಮೀ. ಉದ್ದದ ರೋಡ್ ಶೋ ಆರಂಭಿಸಿದ ರಾಹುಲ್ ತಮ್ಮ ಭಾಷಣದಲ್ಲಿ ನೋಟು ಅಮಾನ್ಯದಿಂದ ಹಿಡಿದು ರಫೇಲ್ ಡೀಲ್ ವರೆಗಿನ ಅನೇಕ ವಿಷಯಗಳನ್ನು ಎತ್ತಿ ಮೋದಿ ಸರಕಾರದ ವಿರುದ್ಧ ಟೀಕೆ ಮಾಡಿದರು. ರಾಜಸ್ಥಾನದಲ್ಲಿ ಡಿಸೆಂಬರ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
2014ರ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ಮೋದಿ ಅವರು ತಾನು ಚೌಕೀದಾರನಾಗುವೆ ಎಂದಿದ್ದರು; ಆದರೆ ಅವರು ಯಾರ ಚೌಕೀದಾರ ತಾನಾಗಲು ಬಯಸಿದ್ದೇನೆ ಎಂದು ಹೇಳಿರಲಿಲ್ಲ ಎಂದ ರಾಹುಲ್ ಲೇವಡಿ ಮಾಡಿದರು.