ನವದೆಹಲಿ: 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೋಷಿಯಾಗಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿದ್ದು, ಇದೀಗ ರಾಹುಲ್ ರಾಜಕೀಯ ಭವಿಷ್ಯದ ಕುರಿತು ಚರ್ಚೆ ನಡೆಯತೊಡಗಿದೆ. ಮತ್ತೊಂದೆಡೆ ರಾಹುಲ್ ಗಾಂಧಿ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವ ಸಾಧ್ಯತೆ ಇದ್ದಿರುವುದಾಗಿ ಕಾನೂನು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿನಿಗೆ ಹೊಡೆದ ಆರೋಪ: ಶಿಕ್ಷಕನನ್ನೇ ಅಟ್ಟಾಡಿಸಿ ಥಳಿಸಿದ ಪೋಷಕರು
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೋಷಿಯಾಗಿ, 2 ವರ್ಷ ಶಿಕ್ಷೆಗೊಳಗಾಗಿರುವ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಜಾಮೀನು ನೀಡಿದೆ. ಮತ್ತೊಂದೆಡೆ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತ್ತಿನಲ್ಲಿಟ್ಟಿದ್ದು, ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ.
ಈ ಹಿನ್ನೆಲೆಯಲ್ಲಿ ಕಾಯ್ದೆಯಡಿಯಲ್ಲಿ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಳ್ಳುವ ಭೀತಿ ಎದುರಾಗಿದೆ. ದೋಷಿಯಾಗಿರುವ ರಾಹುಲ್ ಗಾಂಧಿಯ ರಾಜಕೀಯ ಭವಿಷ್ಯದ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದನ್ನು ಕಾನೂನು ತಜ್ಞರು ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ…
Related Articles
ಮುಂದೇನಾಗಲಿದೆ?
ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 8(3)ರ ಪ್ರಕಾರ, ಒಂದು ವೇಳೆ ಯಾವುದೇ ಪ್ರಕರಣದಲ್ಲಿ ಸಂಸತ್ ಸದಸ್ಯರಾದವರು ದೋಷಿ ಎಂದು ಪರಿಗಣಿಸಲ್ಪಟ್ಟರೆ ಅಥವಾ ಕನಿಷ್ಠ ಎರಡು ವರ್ಷ ಶಿಕ್ಷೆಗೊಳಗಾದರೆ ಅಂತಹ ಸಂಸದ ಅಥವಾ ಸಂಸದೆಯನ್ನು ಅನರ್ಹಗೊಳಿಸಬಹುದಾಗಿದೆ.
ಸೂರತ್ ಕೋರ್ಟ್ ಆದೇಶ ಆಧಾರದ ಮೇಲೆ, ರಾಹುಲ್ ಗಾಂಧಿಯನ್ನು ಲೋಕಸಭೆ ಸಚಿವಾಲಯ ಅನರ್ಹಗೊಳಿಸಿ, ವಯನಾಡ್ ಲೋಕಸಭಾ ಕ್ಷೇತ್ರವನ್ನು Vacant ಎಂದು ಘೋಷಿಸಬಹುದು. ಬಳಿಕ ವಯನಾಡ್ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಘೋಷಿಸಬಹುದಾಗಿದೆ.
ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಸೂರತ್ ನ್ಯಾಯಾಲಯದ ಆದೇಶವನ್ನು ತಡೆಹಿಡಿಯದಿದ್ದರೆ, ರಾಹುಲ್ ಗಾಂಧಿ ಅನರ್ಹಗೊಳ್ಳುವ ಸಾಧ್ಯತೆ ಹೆಚ್ಚು. ಒಂದು ವೇಳೆ ಉನ್ನತ ನ್ಯಾಯಾಲಯ ತೀರ್ಪನ್ನು ರದ್ದುಗೊಳಿಸದಿದ್ದರೆ ರಾಹುಲ್ ಗಾಂಧಿಗೆ ಮುಂದಿನ 8 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ರಾಹುಲ್ ಗಾಂಧಿ ಕಾನೂನು ತಜ್ಞರ ತಂಡದ ಪ್ರಕಾರ, ರಾಹುಲ್ ಗಾಂಧಿ ವಿರುದ್ಧ ಸೂರತ್ ಕೋರ್ಟ್ ನೀಡಿರುವ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಜ್ಜಾಗಿದೆ.