ಮಾಲ್ಡಾ(ಪಶ್ಚಿಮ ಬಂಗಾಳ) : ”ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ವಾಹನದ ಮುಂದೆ ಬರುತ್ತಿದ್ದಂತೆ ಹಠಾತ್ ಬ್ರೇಕ್ ಹಾಕಿದಾಗ ರಾಹುಲ್ ಗಾಂಧಿ ಅವರ ಕಾರಿನ ಹಿಂದಿನ ಕಿಟಕಿ ಗಾಜು ಪುಡಿಪುಡಿಯಾಗಿದೆ” ಎಂದು ಕಾಂಗ್ರೆಸ್ ಬುಧವಾರ ಹೇಳಿಕೊಂಡಿದೆ.
ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ X ಖಾತೆಯಲ್ಲಿ ಕಲ್ಲು ತೂರಾಟ ಎಂದು ಹೇಳಲಾಗಿದ್ದ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದು, “ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ರಾಹುಲ್ ಅವರನ್ನು ಭೇಟಿಯಾಗಲು ಅಪಾರ ಜನಸ್ತೋಮವೇ ಆಗಮಿಸಿತ್ತು. ಈ ಗುಂಪಿನಲ್ಲಿ, ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ರಾಹುಲ್ ಅವರನ್ನು ಭೇಟಿ ಮಾಡಲು ಅವರ ಕಾರಿನ ಮುಂದೆ ಬಂದರು, ಇದರಿಂದಾಗಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಲಾಯಿತು. ಆಗ ಭದ್ರತಾ ವೃತ್ತದಲ್ಲಿ ಬಳಸಿದ ಹಗ್ಗದಿಂದ ಕಾರಿನ ಗಾಜು ಒಡೆದಿದೆ” ಎಂದು ಹೇಳಿಕೊಂಡಿದೆ.
“ಜನನಾಯಕ ರಾಹುಲ್ ಗಾಂಧಿ ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಸಾರ್ವಜನಿಕರು ಅವರೊಂದಿಗಿದ್ದಾರೆ, ಸಾರ್ವಜನಿಕರು ಅವರನ್ನು ಸುರಕ್ಷಿತವಾಗಿರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಮಾಲ್ಡಾ ಜಿಲ್ಲೆಯಲ್ಲಿ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಕಾರಿಗೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ”ಈ ಘಟನೆ ನೆರೆಯ ಬಿಹಾರದ ಕತಿಹಾರ್ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ‘ರಾಹುಲ್ ಗಾಂಧಿಯವರ ಕಾರಿಗೆ ಕಲ್ಲು ತೂರಾಟ ನಡೆದಿದೆ ಎಂಬ ಸಂದೇಶ ನನಗೆ ಬಂತು. ನಾನು ನಿಖರವಾಗಿ ಏನಾಯಿತು ಎಂದು ಪರಿಶೀಲಿಸಿದ್ದೇನೆ ಘಟನೆ ನಡೆದಿರುವುದು ಬಂಗಾಳದಲ್ಲಿ ಅಲ್ಲ, ಕತಿಹಾರ್‌ನಲ್ಲಿ ಎಂದು ನಾನು ಕಂಡುಕೊಂಡಿದ್ದೇನೆ. ಆದಾಗಲೇ ಗಾಜು ಒಡೆದಿರುವ ಕಾರು ಬಂಗಾಳವನ್ನು ಪ್ರವೇಶಿಸಿತ್ತು.ನಾನು ದಾಳಿಯನ್ನು ಖಂಡಿಸುತ್ತೇನೆ. ಇದು ನಾಟಕವಲ್ಲದೆ ಬೇರೇನೂ ಅಲ್ಲ” ಎಂದು ಬ್ಯಾನರ್ಜಿ ಹೇಳಿದ್ದಾರೆ.